ಮುಳಗುಂದ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದೆ, ಆದರೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿಗೆ ವಸತಿ ಸೌಕರ್ಯ ಕೊರತೆ ಇದೆ. ಹೀಗಾಗಿ ವೈದ್ಯರು ಸಿಬ್ಬಂದಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣಕ್ಕೆ ವೈದ್ಯರು ಸಿಗದೇ ರೋಗಿಗಳು ಪರದಾಡುವಂತಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರವು ಇಬ್ಬರು ವೈದ್ಯರು, ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 17 ಸಿಬ್ಬಂದಿಯನ್ನು ಹೊಂದಿದೆ. ಇದರಲ್ಲಿ ಒಬ್ಬ ವೈದ್ಯರ ಕೊರತೆ ಬಿಟ್ಟರೆ ಉಳಿದೆಲ್ಲ ಸಿಬ್ಬಂದಿ ನಿತ್ಯ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅವರಿಗೆ ಆಸ್ಪತ್ರೆ ಆವರಣದಲ್ಲಿ ಸುಸ್ಥಿತಿಯ ವಸತಿ ಕಟ್ಟಡಗಳು ಇಲ್ಲದ ಕಾರಣ, ಕೆಲವರೂ ಸ್ವಂತ ಊರಿನಿಂದ, ಇನ್ನೂ ಕೆಲವರು ಗದಗ ನಗರದಲ್ಲಿ ಬಾಡಿಗೆ ಮನೆಯಿಂದ ನಿತ್ಯ ಸಂಚಾರ ಮಾಡುತ್ತಿದ್ದಾರೆ.
ಸುಮಾರು 15 ವಸತಿ ಕಟ್ಟಡಗಳಿದ್ದು, 4 ಕಟ್ಟಡಗಳು ಮಾತ್ರ ವಾಸಕ್ಕೆ ಯೋಗ್ಯವಾಗಿವೆ. 2 ಕಟ್ಟಡಗಳ ಛಾವಣಿ ಶಿಥಿಲವಾಗಿದ್ದು ಬೀಳುವ ಹಂತದಲ್ಲಿವೆ. ಶಿಥಿಲ ಕಟ್ಟಡದಲ್ಲೆ ಸಹಾಯಕ ಸಿಬ್ಬಂದಿ ಇಬ್ಬರೂ ವಾಸವಾಗಿದ್ದಾರೆ. ಇನ್ನೂಳಿದ ಕಟ್ಟಡಗಳು ಸಂಪೂರ್ಣ ಪಾಳುಬಿದ್ದ ಸ್ಥಿತಿಯಲ್ಲಿವೆ. ವಸತಿ ಸಮುಚ್ಛಯ ಬಯಲು ಜಾಗವು ಅಭಿವೃದ್ಧಿಯಾಗದ ಪರಿಣಾಮ ಕಸ ಬೆಳೆದಿದ್ದು, ಭಯ-ಆತಂಕದಿಂದಲೆ ಸಂಚಾರ ಮಾಡಬೇಕಾಗಿದೆ. ಸ್ವಚ್ಛತೆ ಕಾರ್ಯವೂ ನಡೆದಿಲ್ಲ. ಮಳೆಗಾಲದಲ್ಲಿ ಕೆಸರು ರಸ್ತೆಯಲ್ಲಿ ನಡೆದು ಮನೆ ಸೇರುವಂತಾಗಿದೆ. ಹಲವು ಬಾರಿ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.ವಸತಿ ಕಟ್ಟಡಗಳ ಸೌಕರ್ಯ ಇಲ್ಲದ ಕಾರಣ, ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣಕ್ಕೆ ವೈದ್ಯರು ಮತ್ತು ಸಿಬ್ಬಂದಿ ಲಭ್ಯವಾಗದ ಸ್ಥಿತಿ ಉಂಟಾಗುತ್ತಿದೆ. ಮುಖ್ಯ ಎಂಬಿಬಿಎಸ್ ವೈದ್ಯರ ಕೊರತೆ ಇದೆ, ಓರ್ವ ಬಿಎಂಎಸ್ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಲಭ್ಯರಿರುತ್ತಾರೆ. 24*7 ಹೆರಿಗೆ ಸೌಲಭ್ಯ ಇರುವ ಈ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ರೋಗಿಗಳಿಗೆ, ಹೆರಿಗೆ ನೋವಿನಿಂದ ಬರುವ ಗರ್ಭಿಣಿಯರಿಗೆ ವೈದ್ಯರಂತೂ ಸಿಗುವುದೇ ಇಲ್ಲ.
ಇತ್ತೀಚೆಗೆ ಹೆರಿಗೆ ನೋವಿನಿಂದ ಬಂದ ಗರ್ಭಿಣಿಗೆ ವೈದ್ಯರು ಮತ್ತು ಸಿಬ್ಬಂದಿ ಸಿಗದ ಹಿನ್ನೆಲೆ ಸುಮಾರು 5 ತಾಸುಗಳ ಕಾಲ ಆಸ್ಪತ್ರೆಯಲ್ಲಿ ಕಾಯ್ದು ನೋವು ಅನುಭವಿಸಿ ಜಿಮ್ಸ್‌ಗೆ ಕರೆಯೊಯ್ದ ಪ್ರಸಂಗವೂ ನಡೆದಿದೆ. ಕೂಡಲೆ ಸಂಬಂಧಿಸಿದ ಆರೋಗ್ಯ ಇಲಾಖೆ ವಸತಿ ಕಟ್ಟಡಗಳ ದುರಸ್ತಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವುದು, ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸುವ ಬೇಡಿಕೆ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಬೇಡಿಕೆ ಈಡೇರಿಕೆಗಾಗಿ ಇಲಾಖೆ ವಿರುದ್ದ ಹೋರಾಟ ಅನಿವಾರ್ಯವಾಗಲಿದೆ ಎಂದು ಸ್ಥಳೀಯ ಬಿಜೆಪಿ ಘಟಕದ ಅಧ್ಯಕ್ಷ ಮಲ್ಲಪ್ಪ ಕುಂದಗೋಳ ತಿಳಿಸಿದ್ದಾರೆ.
ಕಳೆದ ವರ್ಷ ನಾಲ್ಕು ಕಟ್ಟಡಗಳನ್ನು ದುರಸ್ತಿ ಮಾಡಲಾಗಿದೆ. ಗ್ರೂಪ್ ಡಿ ಸಿಬ್ಬಂದಿಯ ವಸತಿ ಕಟ್ಟಡ ದುರಸ್ತಿ ಸಧ್ಯದಲ್ಲೆ ಆಗಲಿದೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಆದ ನಂತರ ಎಲ್ಲ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಆಗುತ್ತದೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಇಲಾಖೆ ಹಂತದಲ್ಲಿದೆ ಎಂದು ಗದಗ ತಾಲೂಕು ವೈದ್ಯಾಧಿಕಾರಿ ಡಾ. ಪ್ರೀತ್ ಖೋನಾ ಹೇಳಿದ್ದಾರೆ.