ಕನ್ನಡಪ್ರಭ ವಾರ್ತೆ ವಿಜಯಪುರ
ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, 1910ರಲ್ಲಿ ವಿಜಯಪುರದಲ್ಲಿ ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನಲ್ ಅಸೋಸಿಯೇಷನ್ ಪ್ರಾರಂಭವಾಗಿತ್ತು. ಈಗ ವಿಜಯಪುರ ಜಿಲ್ಲೆ ವಿಭಜನೆಯಾಗಿದೆ. ಸಂಸ್ಥೆಯಿಂದ ಬೆಂಗಳೂರಿನ ಹೃದಯ ಭಾಗದಲ್ಲಿ ₹300 ಕೋ. ವೆಚ್ಚದಲ್ಲಿ ಜಮೀನು ಖರೀದಿಸಲಾಗಿದೆ. ಮುಂಬರುವ ದಿನಗಲ್ಲಿ ಅಲ್ಲಿ ನಾನಾ ಕಾಲೇಜುಗಳನ್ನು ಪ್ರಾರಂಭಿಸುವ ಉದ್ದೇಶವಿದೆ. ಈ ಮೂಲಕ ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ರಾಜ್ಯಕ್ಕೆ ವಿಸ್ತರಿಸಲಾಗುತ್ತಿದ್ದು, ಭವಿಷ್ಯದಲ್ಲಿ ದೇಶಾದ್ಯಂತ ವಿಸ್ತರಿಸುವ ಸದುದ್ದೇಶದಿಂದ ಈಗ ಇರುವ ಸಂಸ್ಥೆಯ ಟೈಟಲ್‌ನಲ್ಲಿ ಬಿಜಾಪುರ ಬದಲು ಭಾರತೀಯ ಮತ್ತು ಡಿಸ್ಟ್ರಿಕ್ಟ್ ಬದಲು ಡೆವಲೆಪಮೆಂಟ್ ಶಬ್ದಗಳನ್ನು ಸೇರಿಸಿ ಬದಲಾವಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನ್ ಅಸೋಸಿಯೇನ್ ಎಂಬುದು ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಎಜುಕೇಶನ್ ಅಸೋಸಿಯೇಷನ್ ಎಂದು ಬದಲಾಗಲಿದೆ ಎಂದರು.ಸಂಸ್ಥೆಯ ಹೆಸರು ಬದಲಾವಣೆಯಾದರೂ ಅದರ ಮೂಲ ಸಂಕ್ಷಿಪ್ತ ಹೆಸರು ಬಿಎಲ್‌ಡಿಇ ಅಸೋಸಿಯೇಷನ್ ಆಗಿಯೇ ಉಳಿಯಲಿದೆ. ಈ ಮೂಲಕ ಸಂಸ್ಥೆಯ ಪ್ರಾತಃಸ್ಮರಣೀಯರಾದ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶ್ರೀಗಳು, ಶ್ರೀ ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ದೂರದೃಷ್ಠಿಯ ಸಮಾಜ ಸೇವೆಯ ಚಿಂತನೆಯನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ಮೃತ ಸದಸ್ಯರಾದ ಪ್ರಭು ಬಸವಂತಪ್ಪ ಕುಪ್ಪಿ, ಬಾಲಚಂದ್ರ ಅಪ್ಪಾಸಾಹೇಬ ಪಾಟೀಲ, ಪ್ರಕಾಶ ಶ್ರೀನಿವಾಸ ಶೆಟ್ಟಿ, ಹಣಮಂತ ರಾಮಪ್ಪ ಬಿರಾದಾರ, ಸಿದ್ದಪ್ಪ ನಿಂಗಪ್ಪ ಜನವಾಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಾಟೀಲ, ನಿರ್ದೇಶಕರಾದ ಸುನೀಲಗೌಡ ಪಾಟೀಲ, ಬಸನಗೌಡ.ಎಂ.ಪಾಟೀಲ, ಅಶೋಕ ವಾರದ, ಸಂಗು ಸಜ್ಜನ, ವಿ.ಎಸ್.ಪಾಟೀಲ ಬಬಲೇಶ್ವರ, ಕುಮಾರ ದೇಸಾಯಿ, ಕೆ.ಕೆ.ಪಾಟೀಲ ತೊರವಿ, ಡಾ.ಎ.ಬಿ.ಪಾಟೀಲ ಲಿಂಗದಳ್ಳಿ, ಆಜೀವ, ಪೋಷಕ ಮತ್ತು ಸರ್ವ ಸದಸ್ಯರು, ಆಡಳಿತಾಧಿಕಾರಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.