ಸವಣೂರು: ಬೆಂಬಲ ಬೆಲೆ ಯೋಜನೆಯಲ್ಲಿ ಹೈಬ್ರಿಡ್ ಜೋಳ ಮಾರಾಟ ಮಾಡಿದ್ದ ಹಣ ಪಾವತಿಸುವಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಗಣೇಶ ಸವಣೂರ ಅವರಿಗೆ ರೈತರು ಮನವಿ ಸಲ್ಲಿಸಿದರು.ಸರ್ಕಾದ ಬೆಂಬಲ ಬೆಲೆಗೆ ಶಿಗ್ಗಾಂವಿ- ಸವಣೂರು ರೈತರು ಸರ್ಕಾರ ನಿಗದಿಪಡಿಸಿದ್ದ ಬೆಲೆಗೆ ಮಾರಾಟ ಮಾಡಿ ಸುಮಾರು ದಿನ ಕಳೆದರೂ ರೈತರಿಗೆ ನಿಗದಿಪಡಿಸಿದ ಹಣವನ್ನು ನೀಡಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆಯವರು ತ್ವರಿತಗತಿಯಲ್ಲಿ ರೈತರ ಖಾತೆಗಳಿಗೆ ಹಣ ಸಂದಾಯ ಮಾಡಬೇಕು. ಇಲ್ಲದಿದ್ದರೆ ರೈತರು ಇಲಾಖೆ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ರೈತರಾದ ಶಿದ್ದಯ್ಯ ಗೌರಿಮಠ, ರಮೆಶ ಕೊತಂಬ್ರಿ, ನೀಲಪ್ಪ ಸೊಪ್ಪಿನ, ಶಂಕ್ರಪ್ಪ ಕೂಡಲ, ಶರಣಪ್ಪ ಬನ್ನಿಕಲ್, ಮಹೇಶ ಅತ್ತಿಗೇರಿ, ಸಮೀರಸಾಬ ರೊಟೆವಲೆ, ನೀಲಪ್ಪ ವಾಲ್ಮೀಕಿ, ನಾಗರಾಜ ಮೆಣಸಿನಕಾಯಿ, ಮೊದಿನಸಾಬ ಹುಡೇದ, ಬಸಯ್ಯ ವಿಭೂತಿಮಠ, ಮಾಂತೇಶ ಅಗಡಿ ಹಾಗೂ ಇತರರು ಇದ್ದರು.ವರ್ತಕರ ಅರಿವಿಗೆ ಬಾರದೇ ಕಳಪೆ ರಸಗೊಬ್ಬರ ಮಾರಾಟ: ಬಸವರಾಜ
ರಾಣಿಬೆನ್ನೂರು: ನಗರದ ಖಾಸಗಿ ಆಗ್ರೋ ಕೇಂದ್ರಗಳಲ್ಲಿ ಕಳಪೆ ರಸಗೊಬ್ಬರ ಮಾರಾಟ ವಿಷಯವು ವರ್ತಕರ ಅರಿವಿಗೆ ಬಾರದೆ ನಡೆದಿದೆ ಎಂದು ತಾಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ತಿಳಿಸಿದರು.ಕೊಪ್ಪಳದ ವಿನಾಯಕ ಆಗ್ರೋ ಇಂಡಸ್ಟ್ರೀಸ್ ತಯಾರಿಸಿದ ಎನ್‌ಪಿಕೆ- 17:17:17 ರಸಗೊಬ್ಬರ ಕಳಪೆಯಾಗಿರುವ ಪ್ರಯುಕ್ತ ನಗರದ ಕೆಲವು ಅಗ್ರೋ ಕೇಂದ್ರಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ ಪ್ರಯುಕ್ತ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಘದ ವರ್ತಕರು ಅಧಿಕೃತ ದಾಖಲಾತಿಗಳೊಂದಿಗೆ ರಸಗೊಬ್ಬರ ಖರೀದಿ ಮಾಡಿದ್ದಾರೆ. ಸರ್ಕಾರ ಪರವಾನಗಿ ನೀಡಿದ ಕಂಪನಿಯಿಂದಲೇ ವರ್ತಕರು ರಸಗೊಬ್ಬರ ಖರೀದಿಸಿದ್ದಾರೆ. ಹೀಗಾಗಿ ಕೃಷಿ ಅಧಿಕಾರಿಗಳು ಕಳಪೆ ರಸಗೊಬ್ಬರ ಕಂಪನಿ ಉತ್ಪಾದಿಸಿದ ಕಂಪನಿ ವಿರುದ್ಧ ಯಾವುದೇ ರೀತಿಯಲ್ಲಿ ಕ್ರಮ ಜರುಗಿಸಿದರೂ ಅದಕ್ಕೆ ಸಹಕಾರ ನೀಡುತ್ತೇವೆ ಎಂದರು.ಸ್ವಸ್ತಿಕ್ ಅಗ್ರೋ ಸೆಂಟರ್‌ನ ಮಾಲೀಕ ಬಾಬಣ್ಣ ಶೆಟ್ಟರ ಮಾತನಾಡಿ, ಕೊಪ್ಪಳದ ಕಂಪನಿಯಿಂದ ಅಧಿಕೃತ ಇನ್‌ವಾಯ್ಸ್ ಮೂಲಕವೇ ರಸಗೊಬ್ಬರ ಖರೀದಿ ಮಾಡಿದ್ದೇವೆ. ಅದರ ಗುಣಮಟ್ಟದ ಬಗ್ಗೆ ನಮಗೆ ಅರಿವಿಲ್ಲ, ಸ್ವತಃ ನಾವೇ ನಮ್ಮ ಹೊಲಕ್ಕೆ ಇದೇ ಗೊಬ್ಬರ ಬಳಸಿದ್ದು, ಅಲ್ಪ ಪ್ರಮಾಣದಲ್ಲಿ ಮಾತ್ರ ರೈತರಿಗೆ ಮಾರಾಟ ಮಾಡಿದ್ದೇವೆ. ಹೀಗಾಗಿ ಈ ವಿಷಯದಲ್ಲಿ ನಾವು ಅಮಾಯಕರಾಗಿದ್ದೇವೆ. ಆದ್ದರಿಂದ ನಮಗೆ ಕಳಪೆ ರಸಗೊಬ್ಬರ ಪೂರೈಕೆ ಮಾಡಿದ ಕೊಪ್ಪಳದ ಕಂಪನಿ ವಿರುದ್ಧ ಕೃಷಿ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ನಂದೀಶ, ಅಭಿಷೇಕ್ ಪಟ್ಟಣಶೆಟ್ಟಿ, ಸಂದೀಪ್ ಪಟ್ಟಣಶೆಟ್ಟಿ, ಯಶವಂತ ಮೆಡ್ಲೇರಿ, ಪ್ರಭು ಪಾಟೀಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.