ಮುಳ್ಳು ಸಜ್ಜಿ ಕಸ ನಿಯಂತ್ರಣಕ್ಕೆ ಪರಿಹಾರ ಸೂಚಿಸಲು ರೈತರ ಆಗ್ರಹ

KannadaprabhaNewsNetwork | Published : May 22, 2025 1:02 AM
ಈ ಕಳೆ ಹೊಲದಲ್ಲಿ ಬೆಳೆದರೆ ಹೊಲದಲ್ಲಿ ಕೆಲಸ ಮಾಡಲೂ ಆಗದು. ಕೃಷಿ ಚಟುವಟಿಕೆಗೆ ದೊಡ್ಡ ಮಾರಕ ಇದಾಗಿದೆ. ಅದು ವಿಪರೀತ ಮುಳ್ಳಿನಿಂದ ಕೂಡಿರುತ್ತದೆ.
Follow Us

ಹಾನಗಲ್ಲ: ಕೃಷಿಗೆ ಚಟುವಟಿಕೆಗಳಿಗೆ ಆತಂಕ ಸೃಷ್ಟಿಸಿದ ಮುಳ್ಳು ಸಜ್ಜಿ ಕಸ ಹತೋಟಿಗೆ ಕೃಷಿ ಅಧಿಕಾರಿಗಳು, ಕೃಷಿ ತಜ್ಞರು ಸೂಕ್ತ ಔಷಧಿ ಹಾಗೂ ನಿರ್ಮೂಲನಾ ಪದ್ಧತಿಗಳನ್ನು ಸೂಚಿಸದಿದ್ದರೆ ರೈತರು ದೊಡ್ಡ ಆತಂಕಕ್ಕೆ ಈಡಾಗಬೇಕಾಗುತ್ತದೆ ಎಂದು ಮಾಸನಕಟ್ಟಿಯ ಕೃಷಿಕ ರಾಜಶೇಖರ ಹಲಸೂರ ಮನವಿ ಮಾಡಿದ್ದಾರೆ.ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಹಾಗನಲ್ಲಿನ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಮುಳ್ಳಿನ ಸಜ್ಜಿ ಕಸ ರೈತರು ಬೆಳೆಯುವ ಸಜ್ಜಿ ಬೆಳೆಯಂತೆ ಹಸಿರಾಗಿ ಎತ್ತರವಾಗಿ ಬೆಳೆಯುತ್ತದೆ. ಈ ಮುಳ್ಳು ಸಜ್ಜಿ ಕಸದ ಹತೋಟಿಗೆ ಬೇಕಾದ ಸಲಹೆ ಕೃಷಿ ಅಧಿಕಾರಿಗಳು ಹಾಗೂ ಕೃಷಿ ತಜ್ಞರಿಂದ ಬೇಕಾಗಿದೆ.

ಈ ಕಳೆ ಹೊಲದಲ್ಲಿ ಬೆಳೆದರೆ ಹೊಲದಲ್ಲಿ ಕೆಲಸ ಮಾಡಲೂ ಆಗದು. ಕೃಷಿ ಚಟುವಟಿಕೆಗೆ ದೊಡ್ಡ ಮಾರಕ ಇದಾಗಿದೆ. ಅದು ವಿಪರೀತ ಮುಳ್ಳಿನಿಂದ ಕೂಡಿರುತ್ತದೆ. ಇದರಲ್ಲಿ ಬಹಳಷ್ಟು ಸುಂಕ(ತುರುಕೆ ಬರುವ ಪುಡಿ) ಇರುವುದರಿಂದ ಹೊಲದಲ್ಲಿ ಹೋಗಲೂ ಆಗುವುದಿಲ್ಲ. ಇದು ತಾಲೂಕಿನ ಬಮ್ಮನಹಳ್ಳಿ ಹೋಬಳಿಯಲ್ಲಿ ಹೆಚ್ಚಾಗಿದೆ. ಇದು ಇಡೀ ಹಾವೇರಿ ಜಿಲ್ಲೆಯಲ್ಲಿಯೇ ಇದೆ. ಇದನ್ನು ಕಳೆನಾಶಕದಿಂದ ತೆಗೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ತಜ್ಞರು ಕೂಡಲೇ ಇದಕ್ಕೆ ಸರಿಯಾದ ಔಷಧಿ ಕಂಡುಹಿಡಿಯದಿದ್ದರೆ ಕೃಷಿ ಬದುಕೇ ಅತ್ಯಂತ ಕಷ್ಟಕರವಾಗಲಿದೆ. ಇದು ಪೈರಿನಲ್ಲಿ ಬೆಳೆದರೆ ಬಂದ ಫಸಲನ್ನೂ ತೆಗೆದುಕೊಳ್ಳಲು ಆಗದಷ್ಟು ರೈತರಿಗೆ ಇದು ತೊಂದರೆ ಕೊಡುತ್ತದೆ ಎಂದು ತಿಳಿಸಿದ್ದಾರೆ. ಚಿಂತನೆ: ಸಧ್ಯಕ್ಕೆ ಆಳ ಉಳುಮೆಯಿಂದ ಮಾತ್ರ ಇದರ ಹತೋಟಿ ಸಾಧ್ಯ. ಅಂತರ್‌ಬೇಸಾಯ ಪದ್ಧತಿ ಮೂಲಕ, ಮೇಲಿಂದ ಮೇಲೆ ಎಡೆ ಹೊಡೆಯುವುದರಿಂದ ಇದರ ಹತೋಟಿ ಮಾಡಬಹುದು. ಇದು ಸಣ್ಣದಿರುವಾಗಲೇ ಇದನ್ನು ಹತೋಟಿಗೆ ತಂದುಕೊಳ್ಳಬೇಕು. ಇದಕ್ಕಾಗಿಯೇ ಯಾವುದೇ ಕಳೆನಾಶಕ ಕೃಷಿ ತಜ್ಞರಿಂದ ಸೂಚಿತವಾಗಿಲ್ಲ. ಈ ಬಗ್ಗೆ ಕೃಷಿ ತಜ್ಞರಿಂದ ಹತೋಟಿ ಮಾಡಬಹುದಾದ ಕ್ರಮಗಳ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾರುತಿ ಅಂಗರಗಟ್ಟಿ ತಿಳಿಸಿದ್ದಾರೆ.ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಾನಗಲ್ಲ: 2025- 26ನೇ ಸಾಲಿಗೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆ. 31ರ ಒಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಅದಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ 1ರಿಂದ 5ನೇ ತರಗತಿಯಲ್ಲಿ ಪ್ರಸ್ತುತ ವರ್ಷಕ್ಕೆ ಖಾಲಿ ಇರುವ 1 ಮತ್ತು 2ನೇ ತರಗತಿಯ ಖಾಲಿಯಿರುವ ಸ್ಥಾನಗಳಿಗೆ ಅರ್ಜಿ ನಮೂನೆ ಪಡೆದು ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು ಎಂದು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮೊ. 9480843150, ದೂ. 08379- 262776 ಕಚೇರಿ ವೇಳೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.