ಅಫಜಲ್ಪುರ: ರೈತರ ಕೃಷಿ ಪಂಪ್‌ಸೆಟ್‌ಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಮುಖಂಡರು ಜೆಸ್ಕಾಂ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಮಾತನಾಡಿ, ಪಂಪ್‌ಸೆಟ್‌ಗೆ ಏಳು ಗಂಟೆ ವಿದ್ಯುತ್ ನೀಡದ ಕಾರಣ ಜೆಸ್ಕಾಂ ಅಧಿಕಾರಿಗಳಿಗೆ ಕಚೇರಿ ಒಳಗಡೆ ದಿಗ್ಬಂಧನ ಹಾಕಲಾಗಿತ್ತು. ಈಗ ರೈತರಿಗೆ ನೀಡುತ್ತಿರುವ ಐದು ಗಂಟೆ ವಿದ್ಯುತ್‌ನಲ್ಲಿಯೇ ಕಡಿತಗೊಳಿಸುತ್ತಿದ್ದಾರೆ. ರೈತರಿಗೆ ರಾತ್ರಿ ವೇಳೆ ಬೆಳೆಗಳಿಗೆ ನೀರು ಹರಿಸಲು ಸಮಸ್ಯೆಯಾಗುತ್ತಿದೆ. ರಾತ್ರಿ 2 ರಿಂದ ಬೆಳಗ್ಗೆ 6ರವರೆಗೆ ಹಾವು, ಚೇಳುಗಳ ಭಯದಿಂದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೀರಾವರಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಹಗಲು ಹೊತ್ತಿನಲ್ಲಿ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾನಿಕ ಅಧಿಕಾರಿ ಮಹಾಂತೇಶ ಪಾಟೀಲ ಹೊರಗಡೆ ಬಂದು ಮಾತನಾಡಿ, ರೈತರಿಗೆ ವಿದ್ಯುತ್ ಪೂರೈಕೆ ಮಾಡುವಲ್ಲಿ ಹಲವಾರು ಕಾರಣಗಳಿದೆ. ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಿ ಸಮರ್ಪಕ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಿದರು. ಈಗ ಅಧಿಕಾರಿಗಳಿಗೆ ಕಚೇರಿ ಒಳಗಡೆ ದಿಗ್ಬಂಧನ ಹಾಕಿದ್ದೇವೆ. ಸರಿಯಾದ ವಿದ್ಯುತ್ ನೀಡದಿದ್ದರೆ ಇಲಾಖೆ ಕಚೇರಿಗೆ ಬೀಗ ಹಾಕಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಬಡದಾಳ, ಮಹಾಂತೇಶ ಹಿರೇಮಠ, ಪ್ರಕಾಶ ಫುಲಾರಿ, ಶಿವಾನಂದ ಬಡದಾಳ, ಕಾಳಪ್ಪ ನಾಯಕೋಡಿ, ಗುರುಪಾದ ತಳವಾರ ಬಾಬು, ನಿಂಬರ್ಗಾ ಹಣಮಂತರಾವ ಬಿರಾದಾರ, ಯಲ್ಲಪ್ಪ ನಾಯಕೋಡಿ, ಅಣ್ಣಪ್ಪ ಪ್ಯಾಟಿ, ರಮೇಶ ತಳವಾರ, ಜಟ್ಟೆಪ್ಪ ವರ್ಗಿ ಇತರರಿದ್ದರು.