ಬಾರದ ಬೆಳೆವಿಮೆ ಕಂಗಾಲಾದ ಅನ್ನದಾತ

KannadaprabhaNewsNetwork | Published : Jun 24, 2024 1:33 AM

ಸಾರಾಂಶ

ಇಳಕಲ್ಲ ತಾಲೂಕನ್ನು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಆದರೆ, ಅಧಿಕಾರಿಗಳ ಯಡವಟ್ಟಿನಿಂದ ಇಳಕಲ್ಲ ತಾಲೂಕಿನ ಅನೇಕ ರೈತರು ಬೆಳೆಹಾನಿ ಪರಿಹಾರದಿಂದ ವಂಚಿತರಾಗಿದ್ದಾರೆ.

ಬಸವರಾಜ ಮಠದ

ಕನ್ನಡಪ್ರಭ ವಾರ್ತೆ ಇಳಕಲ್ಲ

ತಾಲೂಕನ್ನು ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದ ಹಿನ್ನೆಲೆಯಲ್ಲಿ ರೈತರಿಗೆ ಮುಂಗಾರು ಬೆಳೆಗಳಿಗೆ ಸರ್ಕಾರ ಬೆಳೆ ಪರಿಹಾರ ಘೋಷಿಸಿ ಬಿಡುಗಡೆಯನ್ನೂ ಮಾಡಿದೆ. ಆದರೆ, ಅಧಿಕಾರಿಗಳ ಯಡವಟ್ಟಿನಿಂದ ಇಳಕಲ್ಲ ತಾಲೂಕಿನ ಅನೇಕ ರೈತರಿಗೆ ಬೆಳೆ ಪರಿಹಾರ ಇದುವರೆಗೂ ಕೈ ಸೇರಿಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನೇಕ ರೈತರು ಬೆಳೆಹಾನಿ ಪರಿಹಾರದಿಂದ ವಂಚಿತರಾಗಿದ್ದಾರೆ.

ಮುಂಗಾರು ಬೆಳೆ ಪರಿಹಾರ ಜಮಾ ಆಗದಿದ್ದರೂ ಚಿಂತೆ ಇಲ್ಲ, ಹಿಂಗಾರಿನ ಬೆಳೆಗಳಿಗೆ ತಾವು ಕಟ್ಟಿದ ಬೆಳೆವಿಮೆ ಪರಿಹಾರವಾದರೂ ಬರುತ್ತದೆ ಎಂದು ಕಾದು ಕುಳಿತಿದ್ದ ತಾಲೂಕಿನ ರೈತರಿಗೆ ಮತ್ತೆ ವಿಮಾ ಕಂಪನಿಗಳು ನಿರಾಶೆ ಉಂಟು ಮಾಡಿವೆ. ವಿಮಾ ಕಂಪನಿಗಳಿಂದ ರೈತರಿಗೆ ವಂಚನೆ:

ಇಳಕಲ್ಲ ತಾಲೂಕಿನ ಕೆಲವೊಂದು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಮಾತ್ರ ಬೆಳೆವಿಮೆ ಜಮಾ ಆಗಿದೆ. ಆದರೆ, ಕೆಲವೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳೆವಿಮೆ ಹಣ ಬಂದಿಲ್ಲ. ಸರ್ಕಾರವೇ ಬರ ಎಂದು ಘೋಷಣೆ ಮಾಡಿ ಬೆಳೆಹಾನಿ ಪರಿಹಾರ ನೀಡಿದ್ದರೂ ಹಣ ಕಟ್ಟಿಸಿಕೊಂಡ ವಿಮಾ ಕಂಪನಿ ರೈತರಿಗೆ ವಿಮೆ ಹಣ ಕೊಡದೆ ವಂಚಿಸಿದೆ. ವಿಮೆ ಹಣ ಬಾರದಿರುವ ರೈತರು ಇಂದು ಆಗುತ್ತದೆ, ನಾಳೆ ಆಗುತ್ತದೆ ಎಂದು ಬ್ಯಾಂಕುಗಳಿಗೆ ಅಲೆಯುತ್ತಲೇ ಇದ್ದಾರೆ.

ಕಚೇರಿಗಳಿಗೆ ಅಲೆದರೂ ದೊರೆಯದ ಉತ್ತರ:

ಹಿರೇ ಓತಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಬೆಳೆವಿಮೆ ಹಣ ಜಮಾ ಆಗದಿರುವ ಬಗ್ಗೆ ಕೇಳಿದರೆ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾವು ಕೇವಲ ಸಿಸಿ ಮಾಡುತ್ತೇವೆ. ಮುಂದಿನದು ಯಾವುದೇ ಪ್ರೊಸೆಸ್ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ಸಿಸಿಯಲ್ಲಿ ಬಂದ ವರದಿ ಆಧಾರದ ಮೇಲೆ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡುತ್ತವೆ ಎಂದು ಹೇಳುತ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕಳೆದ ವರ್ಷದ ಕಡಲೆ ಬೆಳೆಯ ಕಟಾವಿನ ಸಿಸಿಯನ್ನು ಗ್ರಾಮ ಪಂಚಾಯತಿಯವರು ಮಾಡಿದ್ದಾರೆ, ನಾವು ಮಾಡಿಲ್ಲ ಎಂದು ಹೇಳುತ್ತಾರೆ. ಹೀಗೆ ರೈತರು ಸಂಬಂಧಪಟ್ಟ ಮೂರು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಒಬ್ಬರ ಮೇಲೆ ಒಬ್ಬರ ಹಾಕಿ ಹಾರಿಕೆ ಉತ್ತರ ನೀಡಿ ಸಾಗಹಾಕುತ್ತಿದ್ದಾರೆ. ಆದರೆ, ರೈತರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬೆಳೆ ವಿಮೆ ಮಾಡಿಸಿ ಎಂದು ಈ ಮೂರು ಇಲಾಖೆಗಳು ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡುತ್ತವೆ. ಆದರೆ, ಬೆಳೆಹಾನಿಯಾದಾಗ ಬೆಳೆವಿಮೆ ಬಿಡುಗಡೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಹಾಗಾದರೆ ತಮ್ಮ ಸಂಕಷ್ಟವನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು ಎಂದು ಅನ್ನದಾತ ಪ್ರಶ್ನೆ ಮಾಡುತ್ತಿದ್ದಾನೆ.

ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಇಳಕಲ್ಲ ತಾಲೂಕು ಬರ ಘೋಷಣೆಯಾಗಿದ್ದರೂ ಎಲ್ಲಾ ರೈತರಿಗೂ ಬೆಳೆ ವಿಮೆ ಹಣ ಜಮಾ ಆಗಿಲ್ಲವೇಕೆ. ಇದಕ್ಕೆ ಕಾರಣವೇನೆಂಬುದು ರೈತರಿಗೆ ತಿಳಿಸಬೇಕು. ಬೆಳೆವಿಮೆ ಹಣ ಜಮಾ ಆಗುವಂತೆ ನೋಡಿಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

--------

ಬಾಗಲಕೋಟೆ ಜಿಲ್ಲೆಗೆ ಬರುವ ಎಸ್ ಬಿಐ ಜನರಲ್ ಇನ್ಶೂರೆನ್ಸ್ ಕಂಪನಿ, ಗ್ರಾಮ ಪಂಚಾಯತಿವಾರು ಬೆಳೆ ನಷ್ಟದ ಅಂದಾಜು ಮಾಡಿದ್ದು, ಶಿವನಗುತ್ತಿ ಗ್ರಾಮದಲ್ಲಿ ಶೇ.೮೯ ಬೆಳೆಹಾನಿ ಲೆಕ್ಕ ಹಾಕಿದರೆ, ಪಕ್ಕದ ಗೊರಬಾಳದಲ್ಲಿ ಶೇ.೪.೮೩ ಬೆಳೆಹಾನಿಯ ನಷ್ಟ ಅಂದಾಜಿಸಿದೆ. ಒಂದೇ ತಾಲೂಕಿನಲ್ಲಿ ಅಕ್ಕಪಕ್ಕದಲ್ಲಿರುವ ಜಮೀನುಗಳಿಗೆ ಅದು ಹೇಗೆ ಇಷ್ಟೊಂದು ವ್ಯತ್ಯಾಸ ಆಗಲು ಸಾಧ್ಯ ಎಂಬುದು ರೈತರ ಪ್ರಶ್ನೆ. ಮಳೆಯಾಭಾವದಿಂದ ೨೦೨೩-೨೦೨೪ನೇ ಸಾಲಿನ ಕಡಲೆ ಬೆಳೆ ಶೇ ೮೦-೯೦ ಬೆಳೆ ಹಾಳಾಗಿದೆ. ಆದರೂ, ವಿಮೆ ಹಣ ಬಂದಿಲ್ಲ.

-ರಾಜಶೇಖರಗೌಡ ಪಾಟೀಲ್. ಹೇರೂರ ಗ್ರಾಮದ ರೈತ

ನಾವು ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಮತ್ತು ಜೋಳ ಬೆಳೆಗಳಿಗೆ ಬೆಳೆವಿಮೆ ಕಂತು ಕಟ್ಟಿದ್ದೆವು. ಬೆಳೆ ಸಂಪೂರ್ಣ ಹಾನಿಯಾದರೂ ಬೆಳೆವಿಮೆ ಜಮಾ ಹಣ ಆಗಿಲ್ಲ. ಪಕ್ಕದ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಜಮಾ ಆಗಿದೆ. ನಮ್ಮ ಕಡಲೆ ಬೆಳೆ ಶೇ.೭೦ ರಿಂದ ೮೫ರಷ್ಟು ಹಾಳಾಗಿದೆ. ಯಾರನ್ನು ಕೆಳಬೇಕೋ ಗೊತ್ತಾಗುತ್ತಿಲ್ಲ.

-ರುದ್ರಪ್ಪ ಸುಂಕದ, ಹಿರೇಓತಗೇರಿ ಗ್ರಾಮದ ರೈತ

Share this article