ಎನ್‌ಡಿಎ ಒಕ್ಕೂಟದಿಂದ ರೈತಾಪಿವರ್ಗ ನಾಶ: ಬಡಗಲಪುರ

KannadaprabhaNewsNetwork | Published : Apr 9, 2024 12:47 AM

ಸಾರಾಂಶ

ಬೆಳಗಾವಿ: ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೇ ರೈತಾಪಿವರ್ಗ ಸಂಪೂರ್ಣ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಗೆ ಮತ ನೀಡದಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೇ ರೈತಾಪಿವರ್ಗ ಸಂಪೂರ್ಣ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಗೆ ಮತ ನೀಡದಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷದಿಂದ ನರೇಂದ್ರ ಮೋದಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತ ಕುಲ ಸಂಪೂರ್ಣ ನಾಶವಾಗುತ್ತದೆ. ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.ದೆಹಲಿಯಲ್ಲಿ ನಡೆದ ರೈತರ ಸಭೆಯಲ್ಲಿ ಸರ್ವಾನುಮತದಿಂದ ಎನ್‌ಡಿಎ ಕಿತ್ತೊಗೆಯಲು ತೀರ್ಮಾನ ಮಾಡಲಾಗಿದೆ. ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಶೀಘ್ರವಾಗಿ ರೈತರ ಉಳಿವಿಗಾಗಿ ಆಂದೋಲನ ನಡೆಸಲಾಗುತ್ತೆ. ಬಿಜೆಪಿ-ಜೆಡಿಎಸ್ ಸೋಲಿಸಲು ನಿರ್ಧರಿಸಿದೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ, ರೈತ ಸಮುದಾಯ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಆಂದೋಲನ ನಡೆಸಲು ರೈತರು ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಶೀಘ್ರದಲ್ಲೇ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರಚಾರ ಆಂದೋಲನ ಆರಂಭ ಮಾಡಲಿದೆ ಎಂದು ತಿಳಿಸಿದರು.

ಎಲ್ಲ ಧರ್ಮಗಳು, ಶೇ.60ರಷ್ಟು ನೇರವಾಗಿ‌ ಉದ್ಯೋಗ ನೀಡುವ ಏಕೈಕ ಕ್ಷೇತ್ರ ಕೃಷಿ. ಆದರೆ, ರೈತರನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸುವುದರ ಜತೆಗೆ ರೈತರ ಆತ್ಮಹತ್ಯೆ ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ ಇಡೀ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಗೊಳಿಸಲಾಗುತ್ತಿದೆ. ಗುಜರಾತ್ ಸಿಎಂ ಆಗಿದ್ದಾಗ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು 336 ಚುನಾವಣೆ ರ್‍ಯಾಲಿಯಲ್ಲಿ ಹೇಳಿದ್ದರು. ಸ್ವಾಮಿಮಾಥನ್ ಆಯೋಗದ ವರದಿ ಪ್ರಕಾರ ಎಂಎಸ್ಪಿ ದರ ಕೊಡಲು ಆಗೋದಿಲ್ಲ ಎಂದು 2016ರಲ್ಲಿ ಸುಪ್ರೀಂಕೋರ್ಟ್ ಮುಂದೆ ಮೋದಿ ಸರ್ಕಾರ ಹೇಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ ಬೆಂಬಲ ನೀಡುವುದಿಲ್ಲ. ಕಳೆದ ವರ್ಷಗಳ ಎನ್‌ಡಿಎ ಸರ್ಕಾರ ರೈತರಿಗೆ ಏನೂ ಮಾಡಿಲ್ಲ. ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ರೈತ ವಿರೋಧಿ ಕಾನೂನುಗಳನ್ನು ಜಾರಿ ತಂದರು. ಪ್ರಕೃತಿ ವಿಕೋಪದ ಸಮಯದಲ್ಲಿ ಪಕ್ಕದ ಕೇರಳ ರಾಜ್ಯಕ್ಕೆ ಬಂದು ಕರ್ನಾಟಕ್ಕೆ ಬರಲಿಲ್ಲ. ತೀವ್ರ ಬರಗಾಲವಿದೆ ಬರ ಪರಿಹಾರ ಬಿಡುಗಡೆ ಮಾಡಲ್ಲ ನೀತಿ ಸಂಹಿತೆ ನೆಪವನ್ನು ಸಚಿವೆ ನಿರ್ಮಾಲಾ ಸೀತಾರಾಮನ ಹೇಳುತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ತರಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ, ರೈತರ ಆದಾಯದ್ವಿಗುಣ, ಪೆಟ್ರೋಲ್, ಡಿಸೇಲ್, ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಅತೀವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಕರ್ನಾಟಕಕ್ಕೆ ಬರಲಿಲ್ಲ. ಜನಪರ ಕೆಲಸ ಮಾಡದೇ ಬರೀ ಸುಳ್ಳು ಹೇಳುತ್ತಾ ಇದ್ದಾರೆ. ನಿರ್ಮಲಾ ಸೀತಾರಾಮನ್ ರೈತರಿಗೆ ವಂಚಿಸಿವುದರ ಜತೆಗೆ ಫಸಲ್ ಭಿಮಾ ಯೋಜನೆಯಲ್ಲಿ ಪರಿಹಾರ ನೀಡದೇ ಮೋಸ‌ ಮಾಡಿದ್ದಾರೆ. ಕಾರ್ಪೊರೇಟ್ ಕಂಪನಿಗಳ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಕಿಡಿಕಾರಿದರು.

ದೆಹಲಿಯಲ್ಲಿ ರೈತರು ಸತತ ಒಂದು ವರ್ಷ ಪ್ರತಿಭಟನೆ ಮಾಡಿದ ಬಳಿಕ ರೈತ ವಿರೋಧಿ‌ ಕಾಯ್ದೆ ಹಿಂಪಡೆದರು. ಕೋಮುವಾದ, ಬರೀ ಸುಳ್ಳು ಹೇಳುವುದು, ರಾಮಮಂದಿರ ವಿಚಾರಗಳಿಂದ ದೇಶವನ್ನು ಹಿಂದಕ್ಕೆ ಒಯ್ದಿದ್ದಾರೆ. ಎನ್‌ಡಿಎ ಮೈತ್ರಿ ಕೂಟದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಅಭಿಯಾನ ಮಾಡುತ್ತಿದ್ದೇವೆ ಎಂದರು.

Share this article