ಕನ್ನಡಪ್ರಭ ವಾರ್ತೆ ಕಲಬುರಗಿ
ಹೀಗೆಂದು ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯನಗರ, ಕೊಪ್ಪಳ ಹಾಗೂ ಬಳ್ಳಾರಿಯ ಸಾರ್ವಜನಕರು, ರೈತರು, ವಾಣಿಜ್ಯೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಮುಖಂಡರು, ಗೃಹಿಣಿಯರು ಕೆಇಆರ್‌ಸಿಗೆ ಗಮನ ಸೆಳೆದಿದ್ದಾರೆ.
2024-25ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೋರಿ ಜೆಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಯನ್ನಾಧರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಮಂಗಳವಾರ ಕಲಬುರಗಿ ಡಿಸಿ ಕಚೇರಿಯಲ್ಲಿ ನಡೆದ ಅಹವಾಲು ಆಲಿಕೆಯ ಸಭೆಯಲ್ಲಿ ಪಾಲ್ಗೊಂಡ 25ಕ್ಕೂ ಅಧಿಕ ಗ್ರಾಹಕರು ಸೇವೆಯ ವಿಷಯವಾಗಿ ಪ್ರಸ್ತಾಪಿಸುತ್ತ ಜೆಸ್ಕಾಂ ಕಂಪನಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಲಿಂಗಸುಗೂರ ರೈತರೊಬ್ಬರು ಕಂಪನಿಯ ರೈತ ವಿರೋಧಿ ಧೋರಣೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ದುಡ್ಡು ಕೊಟ್ಟು ಆರ್‌ಆರ್ ನಂಬರ್ ಕೊಡಿ ಎಂದರೆ ದಂಡ ಅಂತ 10 ಸಾವಿರ ರು. ತಗೊಂಡಿದ್ದಾರೆಂದು ದೂರಿದರಲ್ಲದೆ ಕಂಬ, ವೈರಿಂಗ್‌ನಲ್ಲಿ ಹೆಚ್ಚಿಗೆ ಎಸ್ಟಿಮೇಟ್ ಸದ್ಧಪಡಿಸಿ ಜೆಸ್ಕಾಂ ಅಧಿಕಾರಿಗಳು, ಗುತ್ತಿಗೆದಾರರು ಕಂಪನಿಯನ್ನೇ ಸ್ವಾಹಾ ಮಾಡುತ್ತಿದ್ದಾರೆಂದು ತಮ್ಮದೇ ಹೊಲದಲ್ಲಿನ ಕಂಬ ಹಾಕುವ ಕಾಮಗಾರಿಯನ್ನೇ ಉದಾಹರಿಸಿ ದಾಖಲೆ ನೀಡಿದರು.
8 ವರ್ಷವಾದರೂ ಗಂಗಾ ಕಲ್ಯಾಣ ಬೋರ್‌ಗೆ ಕರೆಂಟ್ ಕೊಟ್ಟಿಲ್ರಿ: ಪಟ್ಟಣ- ಭೀಮಳ್ಳಿ ಸೀಮೆಯ ರೈತ ಸುಭಾಷ ಜಮಾದರ್ ಅವರಂತೂ ತಮ್ಮ ಹೊಲದಲ್ಲಿ ಕಷ್ಟಪಟ್ಟು ಗಂಗಾ ಕಲ್ಯಾಣ ಬೋರ್‌ವೆಲ್ ಕೊರೆಸಿದರೂ ಅದಕ್ಕೆ ಕರೆಂಟ್ ಸಂಪರ್ಕ ಇನ್ನೂ ಕೊಟ್ಟಿಲ್ಲ. ಈ ಮಾತಿಗೆ ಮತ್ತೆ 8 ವರ್ಷವಾಯ್ತೆಂದು ತಮ್ಮ ಸಂಕಷ್ಟ ತೋಡಿಕೊಂಡರು.
ಇಂಡಸ್ಟ್ರಿಯಲ್ ಏರಿಯಾದಾಗೂ ಕರೆಂಟಿಲ್ರಿ: ಸಭೆಯಲ್ಲಿದ್ದ ರಾಯಚೂರು, ವಿಜಯನಗರ, ಹೊಸಪೇಟೆ, ಕಲಬುರಗಿ ವಾಣಿಜ್ಯೋಮ ಸಂಸ್ಥೆಯ ಪ್ರತಿನಿಧಿಗಳು, ಉದ್ದಿಮೆ ವಸಾಹತುಗಳ ಸಂಘಗಳವರು, ಸಣ್ಣ ಕೈಗಾರಿಕೆ ಸಂಘಚನೆಯವರು 350 ರಿಂದ 400 ಘಟಕಗಳಿರುವ ಪ್ರದೇಶದಲ್ಲೇ ಇವರ ಸೇವೆ ಸರಿಯಾಗಿಲ್ಲವೆಂದು ಗಳಾಡಿದರು.
ಕೆಕೆಸಿಸಿಐ ಪ್ರತಿನಿಧಿ ಶಶಿಕಾಂತ ಪಾಟೀಲ್, ಚೆನ್ನವೀರಯ್ಯ ನಂದಿಕೋಲ್ಮಠ ಮಾತನಾಡುತ್ತ ಸೆಕ್ಷನ್ ಆಫೀಸರ್ ಅನತ್ರಕ್ಷರಸ್ಥರಾದರೆ ಗತಿ ಏನು? ಲೈನ್‌ಮನ್‌ಗಳಿಗೆ ಈ ಜವಾಬ್ದಾರಿ ಕೊಡೋದಾದಲ್ಲಿ ಅವರು ಆ ಕೆಲಸ ಮಾಡುವಂತಹವರಾಗಿರಬೇಕು, ಅಂತಹವರಿಗೆ ಕೊಡಿರೆಂದರು.
ಬರಗಾಲದಾಗ ದರ ಹೆಚ್ಚಳ ಬ್ಯಾಡ್ರಿ ಎಂದ ಜಂಬಣ್ಣ: ರಾಯಚೂರಿನ ರೈಸ್‌ಮಿಲ್ ಸಂಘಟನೆಯ ಜಂಬಣ್ಣ ಮಾತನಾಡುತ್ತ ಬರಗಾಲದಾಗ ದರ ಹೆಚ್ಚಳ ಅನ್ಯಾಯದ್ದು, ಮಾಡಲೇಬೇಡಿರೆಂದರು. ಮೊದಲೇ ಬಾರತ ಅಕ್ಕಿ ಬಂದು ನಮ್ಮ ಮಿಲ್ ಬಂದ್ ಆಗ್ಯಾವ, ಕರೆಂಟ್ ಬೆಲೆ ಹೆಚ್ಚಾದ್ರೆ ಮುಂದಿನ ಫಜೀತಿ ಹೇಳಲಾಗದು ಎಂದು ಕೆಇಆರ್‌ಸಿ ಗಮನ ಸೆಳೆದರು. ಅದ್ಬುಲ್ ಖದೀರ್ ಕಲಬುರಗಿಯವರು ಜೆಸ್ಕಾಂನಲ್ಲಿ ಹೊಸ ಸಂಪರ್ಕಕ್ಕೆ ಲಂಚದ ಹಾವಳಿ ಸಾಗಿದೆ. ನೇರ ಅರ್ಜಿ ಪುರಸ್ಕರಿಸಿದ್ರೆ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕಮೀಷನ್ ದಂಧೆ ನಡೆಸುತ್ತಿದ್ದಾರೆಂದು ಸಭೆಯ ಗಮನ ಸೆಳೆದರು. ಆಯೋಗದ ಸದಸ್ಯ ಎಂಡಿ ರವಿ, ಜೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು, ಸಂಘಟನೆಗಳವರು ಇದ್ದರು.
ಜೆಸ್ಕಾಂನಿಂದ ಯೂನಿಟ್‌ಗೆ 163 ಪೈಸೆ ಹೆಚ್ಚಳ ಪ್ರಸ್ತಾವನೆ ಸಲ್ಲಿಕೆ: ಸಭೆಯಲ್ಲಿ ಮಾತನಾಡಿದ ಜೆಸ್ಕಾಂ ಎಂಡಿ 8,079 ಕೋಟಿ ರು. ಆದಾಯವಿದ್ದರೆ ಕಂಪನಿಯ ವೆಚ್ಚದ ಬಾಬ್ತು 9,287 ಕೋಟಿ ರು. ದಾಟಿದೆ. 1,207 ಕೋಟಿ ರು. ಕೊರತೆ ಭರಿಸೋದೇ ಕಷ್ಟವಾಗುತ್ತಿದೆ. 2023ರಲ್ಲೂ ಕೊರತೆಯ ಪ್ರಮಾಣ 385 ಕೋಟಿ ರು. ಆಗಿತ್ತು. ಪ್ರಸಕ್ತ ಸಾಲಿಗೆ ಕೊರತೆಯ ಒಟ್ಟು ಪ್ರಮಾಣ 1,593 ಕೋಟಿ ರು. ಆಗಿದೆ. ಅದಕ್ಕಾಗಿ ಪ್ರತಿ ಯೂನಿಟ್‌ಗೆ ಎನರ್ಜಿ ಚಾರ್ಜ್, ಫಿಕ್ಸೆಡ್ ಚಾರ್ಜ್ 163 ಪೈಸೆ ಹೆಚ್ಚಿಸುವಂತೆ ಕೆಇಆರ್‌ಸಿಗೆ ಕೋರಿದರು.