ಹಾವೇರಿ: ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಹೂವಿನ ಮಾರುಕಟ್ಟೆಯನ್ನು ಹಾನಗಲ್ಲ ರಸ್ತೆಯ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಂದೆಡೆ ದಿಢೀರ್ ಹೂವಿನ ದರ ಕುಸಿತದಿಂದ ಕಂಗಾಲಾದ ರೈತರು ಚೆಂಡು ಹೂವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
ಹರಾಜಿಗೆ ಬಾರದ ವ್ಯಾಪಾರಿಗಳು..
ಎಂದಿನಂತೆ ಜಿಲ್ಲೆಯ ಗ್ರಾಮೀಣ ಭಾಗದಿಂದ ರೈತರು ಹೂವು ಮಾರಾಟಕ್ಕೆ ಬಂದಿದ್ದರು. ಒಮ್ಮೆಲೆ ಎಪಿಎಂಸಿಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರಿಂದ ರೈತರು ಗೊಂದಲಕ್ಕೀಡಾದರು. ಎಪಿಎಂಸಿಯಲ್ಲಿ ಹೂವಿನ ಹರಾಜು ಪ್ರಕ್ರಿಯೆಗೆ ವ್ಯಾಪಾರಿಗಳು ಹಾಗೂ ಖರೀದಿದಾರರು ಬಾರದ ಹಿನ್ನೆಲೆಯಲ್ಲಿ ವಹಿವಾಟು ಅಸ್ತವ್ಯಸ್ತಗೊಂಡಿತು. ಹಳೆಯ ಮಾರುಕಟ್ಟೆಯಲ್ಲಿದ್ದ ವ್ಯವಸ್ಥೆ ಮತ್ತು ಖರೀದಿ ಪ್ರಕ್ರಿಯೆ ಹೊಸ ಸ್ಥಳದಲ್ಲಿ ಸರಿಯಾಗಿ ರೂಪುಗೊಳ್ಳದಿರುವುದು ರೈತರಿಗೂ ಸಂಕಷ್ಟ ತಂದಿದೆ. ಹೂವು ಮಾರಾಟವಾಗದೆ ಉಳಿಯುವ ಆತಂಕದಲ್ಲಿ ಬೆಳೆಗಾರರು ಕಂಗಾಲಾಗಿದ್ದಾರೆ.ಕೆಜಿಗೆ 10 ರು.ಗೆ ಖರೀದಿ: ರೈತರಿಂದ ಕೆಜಿಗೆ ಕೇವಲ 10 ರು. ದರದಲ್ಲಿ ಹೂವು ಖರೀದಿಸಿ, ಜಿಲ್ಲಾಸ್ಪತ್ರೆ ಬಳಿಯ ಹಳೆಯ ಮಾರುಕಟ್ಟೆಗೆ ತಂದು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ದಿಢೀರ್‌ನೆ ಹೂವಿನ ದರ ಇಳಿಕೆ ಮಾಡಿರುವುದರಿಂದ ರೈತರು ಆಕ್ರೋಶಗೊಂಡು ಚೆಂಡು ಹೂವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
ರೈತರ ಆಗ್ರಹ: ಮಾರುಕಟ್ಟೆ ಸ್ಥಳಾಂತರದ ಉದ್ದೇಶ ರೈತರಿಗೂ ವ್ಯಾಪಾರಿಗಳಿಗೂ ಅನುಕೂಲ ಕಲ್ಪಿಸುವುದಾಗಿರಬೇಕು. ಆದರೆ, ಮೂಲಸೌಕರ್ಯ ಕಲ್ಪಿಸದೆ ಸ್ಥಳಾಂತರ ಮಾಡಿರುವುದು, ಹರಾಜು ಪ್ರಕ್ರಿಯೆ ಸಮರ್ಪಕವಾಗಿ ನಡೆಯದಿರುವುದು ಹಾಗೂ ದಿಢೀರ್ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಪಿಎಂಸಿ ಅಧಿಕಾರಿಗಳು ಮಧ್ಯಪ್ರವೇಶಿಸಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ರೈತರ ಹೂವಿಗೆ ನ್ಯಾಯಯುತ ಬೆಲೆ ದೊರಕಿಸುವ ವ್ಯವಸ್ಥೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.