ಗ್ರಾಮ ಆಡಳಿತ ಅಧಿಕಾರಿ (ವಿಎಒ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದ ಹಾನಗಲ್ಲ ಮೂಲದ ಶಂಕರ ಬನ್ನೂರು, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಿ ಪ್ರಶ್ನೆಗಳಿಗೆ ಉತ್ತರ ಹುಡುಕಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
ಹಾವೇರಿ:ಗ್ರಾಮ ಆಡಳಿತ ಅಧಿಕಾರಿ (ವಿಎಒ) ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದ ಹಾನಗಲ್ಲ ಮೂಲದ ಶಂಕರ ಬನ್ನೂರು, ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಿ ಪ್ರಶ್ನೆಗಳಿಗೆ ಉತ್ತರ ಹುಡುಕಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
ಕೇವಲ 15 ದಿನಗಳ ಅಂತರದಲ್ಲಿ ನಡೆದ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರಿ ಅಂಕಗಳ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕೆಇಎ ಸೂಚಿಸಿತ್ತು. ಅ.4ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿಎಒ ಪರೀಕ್ಷೆಯಲ್ಲಿ ಶಂಕರ ಬನ್ನೂರು 151.25 ಅಂಕ ಗಳಿಸಿದ್ದ. ಆದರೆ ಇದಕ್ಕೂ ಸುಮಾರು 15 ದಿನಗಳ ಹಿಂದೆ ನಡೆದ ಕೆಎಸ್ಆರ್ಪಿ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ. ಅಂಕಗಳಲ್ಲಿನ ಭಾರಿ ವ್ಯತ್ಯಾಸ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಕೆಇಎ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಶಂಕರ ಬನ್ನೂರು ಶಿಗ್ಗಾಂವಿ ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯನ್ನು ಗೂಗಲ್ ಲೆನ್ಸ್ನಲ್ಲಿ ಸ್ಕ್ಯಾನ್ ಮಾಡಿ ಉತ್ತರ ಹುಡುಕುತ್ತಿರುವ ದೃಶ್ಯ ಸೆರೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ ಬನ್ನೂರನ್ನು ಹಾನಗಲ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ತಡರಾತ್ರಿ ಶಿಗ್ಗಾಂವಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಲಾಗಿತ್ತು.
ಒಳಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಪರೀಕ್ಷಾ ಕೊಠಡಿಗೆ ತೆರಳಿ, ಕೊನೆಯ ಡೆಸ್ಕ್ನಲ್ಲಿ ಕುಳಿತು ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಉತ್ತರ ಹುಡುಕಿ, ಒಎಂಆರ್ ಉತ್ತರ ಪತ್ರಿಕೆಯಲ್ಲಿ ಭರ್ತಿ ಮಾಡಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.
ಸದ್ಯ ಪೊಲೀಸರು ಶಂಕರ ಬನ್ನೂರನನ್ನು ವಶಕ್ಕೆ ಪಡೆದು ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಭದ್ರತಾ ವ್ಯವಸ್ಥೆ, ಪ್ರವೇಶದ ವೇಳೆ ನಡೆದ ಪರಿಶೀಲನೆ ಹಾಗೂ ಮೇಲ್ವಿಚಾರಕರ ಕರ್ತವ್ಯಲೋಪದ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮ ಲೆಕ್ಕಿಗ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ವಿದ್ಯಾರ್ಥಿಯ ಪ್ರಕರಣವನ್ನು ಕೆಇಎ ನಿರ್ದೇಶನದನ್ವಯ ಎಲ್ಲ ಆಯಾಮಗಳಿಂದ ಪರಿಶೀಲಿಸಲಾಗುತ್ತಿದೆ. ಪ್ರಕರಣ ವಿಚಾರಣೆ ಹಂತದಲ್ಲಿದ್ದು, ತಪ್ಪಿತಸ್ಥರಾಗಿದ್ದರೆ ಸೂಕ್ತ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಅಕ್ರಮದ ಕುರಿತಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಯಾರನ್ನು ಬಂಧಿಸಿಲ್ಲ, ಜಿಲ್ಲಾಡಳಿತ ಪರಿಶೀಲಿಸಿ ದೂರು ಕೊಡಬೇಕು ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.