ಹಾಲಿನ ದರ ಏರಿಕೆ ಖಂಡಿಸಿ ಎಸ್‌ಯುಸಿಐ(ಸಿ) ಪ್ರತಿಭಟನೆ

KannadaprabhaNewsNetwork |  
Published : Nov 02, 2026, 03:15 AM IST
ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲು ಮುಂದಾಗಿರುವುದನ್ನು ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಮುಂಬರುವ ಪಂಚಾಯಿತಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಾಲು ಒಕ್ಕೂಟಗಳ ರಾಜಕೀಯ ಪದಾಧಿಕಾರಿಗಳು ದರ ಹೆಚ್ಚಳಕ್ಕೆ ಒತ್ತಡ ಹೇರುತ್ತಿದ್ದಾರೆ.

ಬಳ್ಳಾರಿ: ರಾಜ್ಯ ಸರ್ಕಾರ ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲು ಮುಂದಾಗಿರುವುದನ್ನು ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ.ದೇವದಾಸ್, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಹೈನುಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನೆಪದಲ್ಲಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಹೊರಿಸುವುದು ಸರಿಯಲ್ಲ. ಸರ್ಕಾರ ಪರ್ಯಾಯ ಕ್ರಮಗಳ ಮೂಲಕ ಹೈನುಗಾರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಮುಖಂಡ ಡಾ.ಪ್ರಮೋದ್ ಮಾತನಾಡಿ, ಮುಂಬರುವ ಪಂಚಾಯಿತಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಾಲು ಒಕ್ಕೂಟಗಳ ರಾಜಕೀಯ ಪದಾಧಿಕಾರಿಗಳು ದರ ಹೆಚ್ಚಳಕ್ಕೆ ಒತ್ತಡ ಹೇರುತ್ತಿದ್ದಾರೆ. ಹಾಲು ಉತ್ಪಾದಕರು ಹಾಗೂ ಗ್ರಾಹಕರಿಬ್ಬರ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹೈನುಗಾರರಿಗೆ ಮೇವು, ಪಶು ಆಹಾರ ಸೇರಿದಂತೆ ಅಗತ್ಯ ಸೌಲಭ್ಯ ರಿಯಾಯಿತಿ ದರದಲ್ಲಿ ಒದಗಿಸಬೇಕು. ಕೆಎಂಎಫ್‌ನಲ್ಲಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಹಾಲಿನ ಉತ್ಪಾದನಾ ವೆಚ್ಚ ತಗ್ಗಿಸಲು ಕ್ರಮ ಕೈಗೊಳ್ಳುವ ಬದಲು ದರ ಹೆಚ್ಚಳ ಪರಿಹಾರವೆಂದು ಪರಿಗಣಿಸಿದರೆ ಹಣದುಬ್ಬರ ಮತ್ತಷ್ಟು ಹೆಚ್ಚಲಿದೆ. ಹಾಲು ಮಕ್ಕಳೂ ಸೇರಿದಂತೆ ಎಲ್ಲ ವರ್ಗದ ಜನರಿಗೆ ಅತ್ಯಗತ್ಯ ಪೌಷ್ಟಿಕ ಆಹಾರವಾಗಿದೆ. ದರ ಹೆಚ್ಚಳದಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಹೊರೆಯಾಗಲಿದೆ. ಹೀಗಾಗಿ ಸರ್ಕಾರ ಕೂಡಲೇ ದರ ಹೆಚ್ಚಳದ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ಎಂ.ಎನ್.ಮಂಜುಳ, ಆರ್.ಸೋಮಶೇಖರ್ ಗೌಡ, ಡಿ.ನಾಗಲಕ್ಷ್ಮಿ, ಗೋವಿಂದ್, ಈಶ್ವರಿ, ಸುರೇಶ್, ವಿಜಯಲಕ್ಷ್ಮಿ, ಜೆ.ಪಿ. ರವಿಕಿರಣ್, ಜಗದೀಶ್, ಗುರಳ್ಳಿ ರಾಜ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ