ಹಾವೇರಿ:ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದೊಂದು ಶ್ರೀಮಂತ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ. ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕನ್ನಡದ ಅಸ್ಮಿತೆ ಉಳಿಸಿ, ಸಮೃದ್ಧ ಹಾಗೂ ಸ್ವಾಭಿಮಾನಿ ನಾಡು ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಕ್ಕರೆ, ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಾಡು-ನುಡಿಯ ಅಭಿವೃದ್ಧಿಯ ಜತೆಗೆ ಜನರ ಬದುಕಿನಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಸುಮಾರು 2 ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆ ರಾಜಮನೆತನಗಳ ಆಳ್ವಿಕೆ, ಸಾಮಾಜಿಕ ಚಳವಳಿ, ಸಾಹಿತ್ಯಿಕ ಕ್ರಾಂತಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಳ ಸಾಕ್ಷಿಯಾಗಿ ಬೆಳೆದು ಬಂದಿದೆ. ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಮಹೋನ್ನತ ಕೊಡುಗೆ ನೀಡಿದೆ. ಕನ್ನಡ ಭಾಷೆ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದೆ. ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ ಹೀಗೆ ಕಾಲಘಟ್ಟಗಳಿಗೆ ಅನುಗುಣವಾಗಿ ಭಾಷೆ ಬೆಳೆದು ಬಂದಿದೆ ಎಂದರು.ಆದಿಕವಿ ಪಂಪನಿಂದ ಆರಂಭವಾಗಿ ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕನಕದಾಸ, ಸರ್ವಜ್ಞ ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಗೋಕಾಕ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಭಾಷೆಯ ಸೃಜನಶೀಲತೆ ಮತ್ತು ಸಾಹಿತ್ಯಿಕ ಶಕ್ತಿಗೆ ಸಾಕ್ಷಿಯಾಗಿದೆ. ಈ ಪ್ರಶಸ್ತಿ ಪುರಸ್ಕೃತರಲ್ಲಿ ಹಾವೇರಿ ಜಿಲ್ಲೆಯ ಡಾ.ವಿ.ಕೃ. ಗೋಕಾಕರು ಒಬ್ಬರಾಗಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ಇಂದಿನ ಜಾಗತಿಕ ಸ್ಪರ್ಧೆಯ ಯುಗದಲ್ಲಿ ಕರ್ನಾಟಕ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಕನ್ನಡ ಭಾಷೆಯ ಬೆಳವಣಿಗೆಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಯೂನಿಕೋಡ್ ಅಕ್ಷರ ವಿನ್ಯಾಸ, ಮೊಬೈಲ್‌ಗಳಲ್ಲಿ ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಅಳವಡಿಕೆ ಸೇರಿದಂತೆ ಹಲವು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗಿದೆ. ನಿತ್ಯದ ಆಡಳಿತ ವ್ಯವಹಾರಗಳಲ್ಲಿ ಇ-ತಂತ್ರಜ್ಞಾನ ಮತ್ತು ತಂತ್ರಾಂಶಗಳ ಬಳಕೆಯಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡವನ್ನು ಇನ್ನಷ್ಟು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನಗಳು ಮುಂದುವರಿಯಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕ ಹಿರೇಮಲ್ಲೂರ ಈಶ್ವರ, ಪ್ರಗತಿಶೀಲ ಸಾಹಿತಿ ಸು.ರಂ ಎಕ್ಕುಂಡಿ, ಲಲಿತ ಪ್ರಬಂಧಕ ರಾಕು, ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ಹಾಗೂ ಕವಿ ಚಂದ್ರಶೇಖರ ಪಾಟೀಲರಂತಹ ಮಹನೀಯರ ಕೊಡುಗೆ ಸ್ಮರಣೀಯವಾಗಿದೆ. ಬಹುಭಾಷೆ, ಬಹುಸಂಸ್ಕೃತಿ ಹಾಗೂ ಬಹುಧರ್ಮಗಳ ನೆಲೆವೀಡಾಗಿರುವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.