ಮುಂಗಾರು ಮಳೆ ವಿಫಲದಿಂದ ರೈತರಿಗೆ ಬಹಳ ಕಷ್ಟ: ವೈ.ಎಸ್.ವಿ.ದತ್ತ ಆತಂಕ

KannadaprabhaNewsNetwork |  
Published : Jul 15, 2026, 01:45 AM IST
14ಕೆಎಂಎನ್ ಡಿ11 | Kannada Prabha

ಸಾರಾಂಶ

ಕಡೂರುಮುಂಗಾರು ಮಳೆ ವಿಫಲವಾಗಿದ್ದರಿಂದ ರೈತರ ಪರಿಸ್ಥಿತಿ ಬಹಳ ಕಷ್ಟಕರವಾಗಲಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದರು.

ಹತ್ತಾರು ದಿನಗಳಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಕಾರ್ಯ ಶೂನ್ಯ

ಕನ್ನಡಪ್ರಭ ವಾರ್ತೆ ಕಡೂರು

ಮುಂಗಾರು ಮಳೆ ವಿಫಲವಾಗಿದ್ದರಿಂದ ರೈತರ ಪರಿಸ್ಥಿತಿ ಬಹಳ ಕಷ್ಟಕರವಾಗಲಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ಅವರು ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಂಗಾರು ಪೂರ್ಣ ವಿಫಲವಾಗಿದೆ. ವಿವಿಧ ಇಲಾಖೆ ಗಳಲ್ಲಿ ಮಳೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ಹತ್ತಾರು ದಿನಗಳಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಕಾರ್ಯ ಶೂನ್ಯಕ್ಕೆ ಇಳಿಯುವುದು ಖಚಿತ. ನಾನು ಶಾಸಕನಾಗಿದ್ದಾಗಳೂ ಭೀಕರ ಬರಗಾಲ ಕಡೂರನ್ನು ಕಾಡಿತ್ತು. ಆಗ ನನ್ನ ಇತಿಮಿತಿಯಲ್ಲಿ ಜನರಿಗೆ ಸ್ಪಂದಿಸಿದ್ದೆ. ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿ ವಿವರಿಸಿ ಬರಪೀಡಿತ ಎಂದು ಘೋಷಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೆ ಎಂದರು.

ಈಗ ಬರ ಬಾಗಿಲು ತಟ್ಟುತ್ತಿರುವಾಗ ವಾಸ್ತವ ಪರಿಸ್ಥಿತಿ ಅರಿಯುವುದು ನಮ್ಮ ಕರ್ತವ್ಯ. ನಮ್ಮ ಪಕ್ಷ ಸಹ ಇಡೀ ರಾಜ್ಯದ ಬರ ಪರಿಸ್ಥಿತಿ ಅದ್ಯಯನ ಮಾಡಿ ವರದಿ ನೀಡಲು ಪ್ರಾದೇಶವಾರು ಉಸ್ತುವಾರಿ ನೇಮಿಸಿದೆ. ಕಡೂರು ಕ್ಷೇತ್ರಕ್ಕೆ ನನ್ನನ್ನು ನೇಮಿಸಿದೆ. ಇದೇ 17 ರಿಂದ ಹೋಬಳಿವಾರು ಗ್ರಾಮಗಳ ಭೇಟಿ ಮಾಡಲಿದ್ದು 17- ಬೀರೂರು, 18-ಯಗಟಿ,ಚೌಳಹಿರಿಯೂರು, ಹಿರೇನಲ್ಲೂರು,19 ರಂದು ಸಿಂಗಟಗೆರೆ, ಕಡೂರು ಕಸಬಾ ಹೋಬಳಿ ಪ್ರದೇಶಗಳ ವರದಿ ತಯಾರಿಸಿ ಪಕ್ಷ ಮತ್ತು ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಲಿದ್ದೇನೆ.

ಜೂನ್ 1 ರಿಂದ 31 ರ ತನಕ ವಾಡಿಕೆ ಮಳೆ ಕಡಿಮೆಯಿದೆ. ಕಸಬಾ,ಹಿರೇನಲ್ಲೂರು,ಯಗಟಿ,ಚೌಳಹಿರಿಯೂರು ಹೋಬಳಿಗಳಲ್ಲಿ ಸರಾಸರಿ ಶೇ 15-20 ಮಳೆ ಕೊರತೆಯಾಗಿದೆ. ಸಮಾಧಾನಕರ ಅಂಶವೆಂದರೆ ಪಂಚನಹಳ್ಳಿ ಸಿಂಗಟಗೆರೆ ಹೋಬಳಿಗಳಲ್ಲಿ ಶೇ.28 ಹೆಚ್ಚಾಗಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರಾಗಿ, ಜೋಳ ಬಿತ್ತನೆ ಪೂರ್ಣ ಶೂನ್ಯವಾಗಲಿದೆ‌. ರಾಗಿ ಬೆಳೆ 40 ಸಾವಿರ ಹೆಕ್ಟೇರ್ ನಲ್ಲಿ ಬಿತ್ತನೆಯಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಬಿತ್ತನೆ ಕಾರ್ಯ ಶೂನ್ಯಕ್ಕಿಳಿಯುವ ಲಕ್ಷಣ ದಟ್ಟ ವಾಗಿವೆ ಎಂದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಬರಪೀಡಿತ ಎಂದು ಘೋಷಿಸ ಬೇಕು. ಅದರೆ ಕಡೂರು ತಾಲೂಕಿನಲ್ಲಿ ಮಳೆ ಪ್ರಮಾಣ ಸರಾಸರಿ ಲೆಕ್ಕ ಹಾಕಿದರೆ ಕಡೂರಿಗೆ ಖಂಡಿತ ದೊಡ್ಡ ನಷ್ಟ. ಏಕೆಂದರೆ 2 ಹೋಬಳಿಗಳಲ್ಲಿ ಮಳೆ ಉತ್ತಮವಾಗಿದೆ. ಉಳಿದೆಡೆಗಳಲ್ಲಿ ಮಳೆಯೇ ಇಲ್ಲ. ಸರಾಸರಿ ಮಳೆ ಪ್ರಮಾಣದಿಂದ ಉತ್ತಮ ಮಳೆಯಾಗಿದೆ ಎಂಬ ವರದಿ ಬರುತ್ತದೆ. ಇದು ಪ್ರಮುಖ ಲೋಪ. ಹಾಗಾಗಿ ಬರದ ಪ್ರಮಾಣವನ್ನು ಹೋಬಳಿ ವಾರು ಲೆಕ್ಕ ಹಾಕಿದರೆ ಬರಗಾಲ ಪೀಡಿತ ಪ್ರದೇಶಕ್ಕೆ ನ್ಯಾಯವಾಗಿ ಸಿಗಬೇಕಾದ ಪರಿಹಾರ ದೊರೆಯಲು ಸಹಕಾರಿಯಾಗುತ್ತದೆ ಎಂದರು.

ಕಡೂರಿನ 49 ಗ್ರಾಪಂಗಳ ಪೈಕಿ ಏಳೆಂಟು ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ನೀಡಲಾಗುತ್ತಿದೆ. ಇದೇ ಪರಿಸ್ಥಿತಿ ಹೀಗೆ ಮುಂದುವರಿದರೆ ಕುಡಿವ ನೀರಿಗೂ ತತ್ವಾರ. ಭದ್ರಾ ಕುಡಿಯುವ ನೀರಿನ ಯೋಜನೆಯಲ್ಲಿ ನೀರಿನ ಪೈಪು ಹಾದು ಹೋಗುವ ಗ್ರಾಮಗಳಿಗೂ ನೀರು ನೀಡುವ ಅವಕಾಶ ಪಡೆಯಲಾಗಿತ್ತು. ಈಗ ದೊರೆತ ಆಘಾತಕಾರಿ ಮಾಹಿತಿ ಯೆಂದರೆ ಭಧ್ರಾ ನೀರು ಬರುವ ಪೈಪುಗಳು ಒಡೆದು ಹೋಗಿವೆ. ಇದಕ್ಕೆ ಮುಖ್ಯ ಕಾರಣ ರಾ.ಹೆ ಕಾಮಗಾರಿ. ಆ ಕಾಮಗಾರಿಯಿಂದ ಒಡೆದ ಭಧ್ರಾ ನೀರಿನ ಪೈಪುಗಳನ್ನು ತುರ್ತಾಗಿ ಸರಿ ಪಡಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿ ಸುವುದು ಖಚಿತ ಎಂದರು.

ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಸಹೋದರಿ ವಿಜಯಲಕ್ಷ್ಮಿ ನಿಧನರಾಗಿ ಒಂಭತ್ತು ವರ್ಷ ಕಳೆದಿದೆ. ಅಪಾರ ಪುಸ್ತಕ ಪ್ರೇಮಿಯಾಗಿದ್ದ ಅವರ ನೆನಪಿನಲ್ಲಿ ಪ್ರತೀವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯ ಪರಿಕರ ನೀಡುವ ಪರಿಪಾಠ ದಂತೆ ಈ ಬಾರಿ ಎಮ್ಮೆದೊಡ್ಡಿ ಮುಸ್ಲಾಪುರದ ಹಟ್ಟಿಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ವಿತರಿಸಲಾಗುತ್ತದೆ ಎಂದು ದತ್ತ ತಿಳಿಸಿದರು.

ಜೆಡಿಎಸ್ ಮುಖಂಡರಾದ ಬಿ‌.ಟಿ.ಗಂಗಾಧರ ನಾಯ್ಕ, ಫಾಲಾಕ್ಷಪ್ಪ, ಬೀರೂರು ಮೋಹನ್ ಇದ್ದರು.

-- ಬಾಕ್ಸ್ ಸುದ್ದಿಗೆ----

ಜೆಡಿಎಸ್ ಪಕ್ಷಕ್ಕೆ ಬರಲು ಯಾರೂ ತಯಾರಿಲ್ಲದೆ ಇದ್ದ ಸಮಯದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಿದ ತೃಪ್ತಿ ನನ್ನದು. ಈಗ ಕಡೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಚೇತನ್ ಕೆಂಪರಾಜು ಅವರ ನೇಮಕ ಸ್ವಾಗತಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

14ಕೆಕೆಡಿಯು5.ವೈ.ಎಸ್ ವಿ ದತ್ತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌: ಶೇ.56 ಗಣತಿ ನಮೂನೆ ಗಣಕೀಕರಣ ಪೂರ್ಣ
ಮಣ್ಣೆತ್ತಿನ ಅಮಾವಾಸ್ಯೆ: ಮಾದಪ್ಪನಲ್ಲಿ ಭಕ್ತ ಸಾಗರ