ಮಂಗಗಳ ಹಾವಳಿಗೆ ಬೇಸತ್ತ ಅನ್ನದಾತರು!

KannadaprabhaNewsNetwork |  
Published : Jul 27, 2026, 02:45 AM IST
ಮಂಗಗಳು ಹೆಸರನ್ನು ತಿದ್ದು ಹಾಳು ಮಾಡಿತ್ತಿರುವುದು. | Kannada Prabha

ಸಾರಾಂಶ

ಮಳೆ ಇಲ್ಲದೇ ಪ್ರಸಕ್ತ ವರ್ಷ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಅಲ್ಪ ಮಳೆಗೆ ಬೆಳೆದ ಹೆಸರನ್ನು ಮಂಗಗಳಿಂದ ರಕ್ಷಣೆ ಮಾಡಲು ರೈತರು ಪಟಾಕಿ ಸಿಡಿಸಿ ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸದ್ಯ ಹೆಸರು ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

ಮಹೇಶ ಛಬ್ಬಿ

ಗದಗ: ಮಳೆ ಇಲ್ಲದೇ ಬೆಳೆಗಳು ಒಣಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಬೆಳೆದ ಅಲ್ಪ ಹೆಸರು ಬೆಳೆಯನ್ನು ಮಂಗಗಳು ತಿಂದು ನಾಶಪಡಿಸುತ್ತಿವೆ. ಹೀಗೆ ರೈತನಿಗೆ ಒಂದಿಲ್ಲೊಂದು ಕಾಟ ತಪ್ಪಿದ್ದಲ್ಲ. ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ರೈತ ಸಮುದಾಯ ಒಂದಲ್ಲ ಒಂದು ಸಂಕಟದಲ್ಲಿ ಸಿಲುಕುವಂತಾಗಿದೆ.

ತಾಲೂಕಿನ ಮುಳಗುಂದ, ಹರ್ತಿ, ಚಿಂಚಲಿ, ಕಲ್ಲೂರು ನೀಲಗುಂದ, ಅಂತೂರು- ಬೆಂತೂರು ಗ್ರಾಮಗಳ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹೆಸರು ಬಿತ್ತನೆ ಮಾಡಿದ ಹೊಲಗಳ ಮೇಲೆ ಮಂಗಗಳ ಹಿಂಡು ದಾಳಿ ಮಾಡಿ ಹೆಸರನ್ನು ತಿಂದ್ದು ನಾಶಪಡಿಸುತ್ತಿದ್ದು, ರೈತರನ್ನು ನಿದ್ದೆಗೆಡಿಸಿದೆ.

ಮಳೆ ಇಲ್ಲದೇ ಪ್ರಸಕ್ತ ವರ್ಷ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಅಲ್ಪ ಮಳೆಗೆ ಬೆಳೆದ ಹೆಸರನ್ನು ಮಂಗಗಳಿಂದ ರಕ್ಷಣೆ ಮಾಡಲು ರೈತರು ಪಟಾಕಿ ಸಿಡಿಸಿ ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸದ್ಯ ಹೆಸರು ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

ಕಳೆದ ವರ್ಷ ಅಕಾಲಿಕ ಮಳೆಯಿಂದ ಹೆಸರು ಬೆಳೆ ಸಂಪೂರ್ಣವಾಗಿ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ರೈತ ಸಮುದಾಯ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಇದೇ ರೀತಿ ಮಳೆ ಸಂಪೂರ್ಣವಾಗಿ ಕೈಕೊಟ್ಟರೆ ಬರಗಾಲ ಬಿದ್ದು, ಕುಡಿಯುವ ನೀರಿಗೆ, ಜಾನುವಾರುಗಳ ಮೇವಿಗೆ ಪರದಾಡುವಂತಾಗಿ, ರೈತರು ಬದುಕು ನಡೆಸುವುದೇ ಕಷ್ಟಕರವಾಗುತ್ತದೆ. ಜತೆಗೆ ವನ್ಯಜೀವಿಗಳ ಹಾವಳಿಯಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎನ್ನುವ ಭೀತಿ ಕಾಡುತ್ತಿದೆ.

ಗ್ರಾಮಗಳು, ತೋಟಗಳಿಗೆ ಆಹಾರ ಅರಸಿ ಬರುತ್ತಿದ್ದ ಮಂಗಗಳು ಇತ್ತೀಚೆಗೆ ಯಾರ ಭಯವೇ ಇಲ್ಲದಂತೆ ಹೊಲಗಳಿಗೆ ನುಗ್ಗುತ್ತಿವೆ. ಫಸಲನ್ನು ಹಾಳು ಮಾಡುವ ಮಂಗಗಳು ರೈತರಿಗೆ ದುಃಸ್ವಪ್ನದಂತೆ ಕಾಡುತ್ತಿವೆ. ಹೆಸರು ಹೂವು, ಎಳೆ ಕಾಯಿಗಳನ್ನು ಬಿಡುತ್ತಿದ್ದು, ಆಹಾರ ಅರಸಿ ಬರುವ ಮಂಗಗಳು ಅವುಗಳನ್ನು ಬಿಡದೆ ತಿಂದು ಹಾಳು ಮಾಡುತ್ತಿವೆ. ನಾಯಿ, ಏರ್‌ಗನ್‌, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಬೆಳೆಹಾನಿಗೆ ಪರಿಹಾರವಿಲ್ಲ: ಪ್ರತಿವರ್ಷ ಜಿಂಕೆ, ಮಂಗಗಳ ಹಾವಳಿಯಿಂದ ತೋಟಗಾರಿಕೆ, ಮಳೆ ಆಶ್ರಿತ ಹೊಲಗಳಲ್ಲಿ ಬೆಳೆದ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿವೆ. ಆದರೆ ಇವುಗಳ ಹಾವಳಿ ತಡೆಯಲು ಇಲಾಖೆಗಳು ಕ್ರಮ ವಹಿಸುವುದಿಲ್ಲ. ಬೆಳೆ ನಷ್ಟ ಪರಿಹಾರವೂ ದೊರೆಯದಿರುವುದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಆತಂಕದಲ್ಲಿ ರೈತರು: ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆದ ಬೆಳೆ ಸಂಪೂರ್ಣ ನಾಶವಾಯಿತು. ಪ್ರಸಕ್ತ ವರ್ಷವಾದರೂ ಬೆಳೆ ಕೈ ಹಿಡಿಯಬಹುದು ಎಂಬ ಭರವಸೆಯಲ್ಲಿದ್ದ ರೈತರಿಗೆ ಮಳೆ ಇಲ್ಲದೇ ಬರಗಾಲದ ಛಾಯೆ ಆವರಿಸಿದ್ದು, ರೈತರಿಗೆ ಮೇಲಿಂದ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಮಳೆಯಾಗದೇ ಇದ್ದರೆ ಜನ, ಜಾನುವಾರು ಬದುಕುವುದೇ ಕಷ್ಟ. ಸರ್ಕಾರ ಕೂಡಲೇ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಬೆಳೆಹಾನಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕಡಿವಾಣ ಹಾಕಿ: ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹೆಸರು ಎಳೆ ಕಾಯಿ, ಹೂವು, ತಪ್ಪಲು (ಎಲೆ)ಗಳನ್ನು ಬಿಡದೆ ತಿನ್ನುತ್ತಿವೆ. ಹಿಂಡು, ಹಿಂಡಾಗಿ ಬರುವ ಮಂಗಗಳು ಹೆಸರನ್ನು ತಿಂದು ನೆಲದ ಪಾಲು ಮಾಡುತ್ತಿವೆ. ಮಂಗಗಳನ್ನು ಓಡಿಸುವುದೆ ಒಂದು ಕೆಲಸವಾಗಿದೆ. ಸಂಬಂಧಪಟ್ಟ ಇಲಾಖೆಯವರು ಈ ಜಿಂಕೆ, ಮಂಗಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮುತ್ತಣ್ಣ ಕತ್ತಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಯೋಜನೆ, ಸೇವೆಗಳ ಅನುಷ್ಠಾನಕ್ಕೆ ಒತ್ತಾಯ
೮೦ನೇ ಸ್ವಾತಂತ್ರೋತ್ಸವದ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.