ಶಿರಹಟ್ಟಿ: ಶಿಕ್ಷಕರಿಗೆ ಸಿಗುವ ಗೌರವ ಮತ್ತು ಸ್ಥಾನಮಾನ ಕೇವಲ ಒಬ್ಬ ಶಿಕ್ಷಕರಿಗೆ ಸಲ್ಲುವುದಲ್ಲ. ಅದು ಇಡೀ ಸಮಾಜಕ್ಕೆ ಸಲ್ಲುವ ಗೌರವವಾಗಿದೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಿ.ಕೆ. ಹೊನ್ನಪ್ಪನವರ ಹೇಳಿದರು.ಪಟ್ಟಣದ ನೀಲು ಬಾಯಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಶಿರಹಟ್ಟಿ ಎ.ಎ. ಪಠಾಣ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಎ. ಮಕಾನದಾರ ಅವರಿಗೆ ಶ್ರೀ ಬಸವ ಬೆಳಕು ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅವರನ್ನು ಗೌರವಿಸಿಸಿ ಮಾತನಾಡಿದರು.
ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಕ್ಷೇತ್ರಗಳ ಸಾಧಕರ ಹಿಂದೆ ಒಬ್ಬ ಶಿಕ್ಷಕರ ಮಾರ್ಗದರ್ಶನ ಇರುತ್ತದೆ. ಹೀಗಾಗಿ ಶಿಕ್ಷಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ದೊರೆಯಬೇಕು. ಶಿಕ್ಷಕರನ್ನು ಗೌರವಿಸುವ ಸಂಸ್ಕೃತಿ ಬೆಳೆದಾಗ ಶಿಕ್ಷಣದ ಗುಣಮಟ್ಟವೂ ಹೆಚ್ಚುತ್ತದೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಶಿಕ್ಷಕ ವೃತ್ತಿಯನ್ನು ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ನಿರ್ವಹಿಸಿದರ ಫಲವಾಗಿ ತಮ್ಮ ಸೇವೆಯನ್ನು ಗುತುತಿಸಿ ಶ್ರೀ ಬಸವ ಬೆಳಕು ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ೧೨ನೇ ಶತಮಾನದಲ್ಲಿ ಕತ್ತಲೆಯನ್ನು ಹೊಡೆದೋಡಿಸಿ ಎಲ್ಲರ ಬಾಳಿಕೆ ಬೆಳಕಾಗಿ ಜಗತ್ತಿಗೆ ಜ್ಯೋತಿಯಾಗಿ ನಾಡಿಗೆ ಹೆಸರು ತಂದುಕೊಟ್ಟ ಬಸವಣ್ಣವರ ಆದರ್ಶಗಳು, ಸಮಾನತೆ ಮತ್ತು ಕಾಯಕ ತತ್ವವನ್ನು ಸಾರುವ ಶ್ರೀ ಬಸವ ಬೆಳಕು ಪ್ರಶಸ್ತಿ ಶಿಕ್ಷಕರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೊನ್ನಪ್ಪ ಪಲ್ಲೇದ, ವೀರಭದ್ರಯ್ಯ ಮಲ್ಲಯ್ಯ ಪೂಜಾರ್ ಗುರುಗಳನ್ನು ಗೌರವಿಸಲಾಯಿತು. ವೆಂಕಟೇಶ ಅರ್ಕಸಾಲಿ, ಗಂಗಾಧರ ಡೊಂಬರ, ಎಂ.ಎ. ಬುಕ್ಕಿಟಗಾರ್, ಸಹದೇವ್ ಪೂಜಾರ, ವಾಸುದೇವ ಕಲಾಲ್, ಪರಸಪ್ಪ ಬಂತಿ, ಮೋಹನ್ ಮಾಂಡ್ರೆ, ಪಾಟೀಲ್, ಬಿ.ಎಸ್. ಮುಗಳಿ ಇತರರು ಇದ್ದರು.