16ರಂದು ಭದ್ರಾ ಕಾಡಾ ಕಚೇರಿಗೆ ರೈತರ ಒಕ್ಕೂಟ ಮುತ್ತಿಗೆ

KannadaprabhaNewsNetwork |  
Published : Nov 06, 2026, 01:30 AM IST
5ಕೆಡಿವಿಜಿ6-ದಾವಣಗೆರೆಯಲ್ಲಿ ಗುರುವಾರ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮೇಲ್ಮನೆಯ ನಾಲ್ಕೂ ಕ್ಷೇತ್ರಗಳ ಹೀನಾಯ ಸೋಲಿನಿಂದ ಕಂಗೆಟ್ಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಿರಿಯೂರು ಉಪ ಚುನಾವಣೆಗಾಗಿ ಭದ್ರಾ ಡ್ಯಾಂನಿಂದ ಮೇಲ್ದಂಡೆಗೆ 1 ಟಿಎಂಸಿ ನೀರು ಬಿಟ್ಟಿದ್ದನ್ನು ಖಂಡಿಸಿ ನ.16ರಂದು ಭದ್ರಾ ಕಾಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಎಚ್ಚರಿಸಿದ್ದಾರೆ.

- ಮೇಲ್ಮನೆ ಹೀನಾಯ ಸೋಲಿನಿಂದ ಕುರ್ಚಿ ಉಳಿಸಿಕೊಳ್ಳಲು ಡಿ.ಕೆ.ಶಿ. ಸರ್ವಾಧಿಕಾರಿ ಧೋರಣೆ - ಹಣ, ಹೆಂಡ ಆಯ್ತು, ಈಗ ಹಿರಿಯೂರು ಉಪ ಸಮರಕ್ಕೆ ನೀರಿನ ಆಮಿಷ: ಬಿ.ಎಂ.ಸತೀಶ್ ಕಿಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೇಲ್ಮನೆಯ ನಾಲ್ಕೂ ಕ್ಷೇತ್ರಗಳ ಹೀನಾಯ ಸೋಲಿನಿಂದ ಕಂಗೆಟ್ಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಿರಿಯೂರು ಉಪ ಚುನಾವಣೆಗಾಗಿ ಭದ್ರಾ ಡ್ಯಾಂನಿಂದ ಮೇಲ್ದಂಡೆಗೆ 1 ಟಿಎಂಸಿ ನೀರು ಬಿಟ್ಟಿದ್ದನ್ನು ಖಂಡಿಸಿ ನ.16ರಂದು ಭದ್ರಾ ಕಾಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಎಚ್ಚರಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಲಹಾ ಸಮಿತಿ ಜೊತೆಗೂ ಚರ್ಚಿಸದೇ, ಸರ್ವಾಧಿಕಾರಿಯಂತೆ ಭದ್ರಾ ಡ್ಯಾಂನಿಂದ ಹೆಚ್ಚುವರಿಯಾಗಿ 1 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆಗೆ ಬಿಡುಗಡೆ ಮಾಡಿದ್ದನ್ನು ಖಂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರ ನೇತೃತ್ವದಲ್ಲಿ ಭದ್ರಾ ಕಾಡಾ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಪರಿಷತ್ ಚುನಾವಣೆಯ ನಾಲ್ಕೂ ಕ್ಷೇತ್ರದಲ್ಲೂ ಸೋತು ಸುಣ್ಣವಾದ ಸಿಎಂ ಡಿ.ಕೆ.ಶಿವಕುಮಾರ ಸರ್ಕಾರ ಹೇಗಾದರೂ ಮಾಡಿ ಹಿರಿಯೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಗೆಲ್ಲಲು ಹೊಂಚು ಹಾಕಿದೆ. ಮತದಾರರಿಗೆ ಹಣ, ಹೆಂಡದ ಆಮಿಷವಲ್ಲದೇ, ನೀರು ಹರಿಸುವ ಆಮಿಷವನ್ನೂ ತೋರುತ್ತಿದೆ. ಹಿರಿಯೂರು ಉಪ ಸಮರ ಗೆಲ್ಲದಿದ್ದರೆ ಮುಖ್ಯಮಂತ್ರಿ ಕುರ್ಚಿಗೆ ಸಂಚಕಾರ ಬರಬಹುದೆಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ)ಯನ್ನೇ ಗಣನೆಗೆ ತೆಗೆದುಕೊಳ್ಳದೇ, ಮೇಲ್ದಂಡೆಗೆ ಏಕಾಏಕಿ 1 ಟಿಎಂಸಿ ಹೆಚ್ಚುವರಿ ನೀರು ಬಿಡಿಸುವ ಕೆಲಸ ಡಿ.ಕೆ.ಶಿವಕುಮಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ಭದ್ರಾ ಡ್ಯಾಂನಿಂದ ಮೇಲ್ದಂಡೆಗೆ ನೀರು ಹರಿಸಲು ಬಿಡುವುದಿಲ್ಲ. ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡ ಐಸಿಸಿ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸುವುದಾಗಿ ತಮ್ಮ ಮನೆಗೆ ಮುತ್ತಿಗೆ ಹಾಕಲು ಬಂದಿದ್ದ ರೈತರ ಹೆಗಲ ಮೇಲೆ ಕೈಹಾಕಿ ಭರವಸೆ ನೀಡಿದ್ದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೀಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಭದ್ರಾದಿಂದ ಮೇಲ್ದಂಡೆ ನೀರು ಹರಿಯಲಾರಂಭಿಸಿತು. ಇದನ್ನೆಲ್ಲಾ ಮೊದಲೇ ಅರಿತಿದ್ದರೂ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ, ಹೋರಾಟನಿರತ ರೈತರನ್ನು ಸಾಗ ಹಾಕುವ ಕೆಲಸವನ್ನು ಜಿಲ್ಲಾ ಮಂತ್ರಿ ಮಾಡಿದರು ಎಂದು ಅವರು ದೂರಿದರು.

ಭದ್ರಾ ಕಾಲುವೆಯನ್ನೇ ಸೀಳಿ ಹೊಸದುರ್ಗ, ಕಡೂರು ತಾಲೂಕುಗಳ ಹಳ್ಳಿಗೆ ನೀರೊಯ್ಯುವ ವಿಷಯದಲ್ಲಿ ಕಾಮಗಾರಿ ನಿಲ್ಲಿಸಿದ್ದಾರೆಂದು ರೈತರಿಗೆ ಸುಳ್ಳು ಹೇಳಿ, ರೈತ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದರು. ಜಿಲ್ಲಾ ರೈತರ ಒಕ್ಕೂಟ, ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಬಂದ್‌, ಹೆದ್ದಾರಿ ತಡೆ ಹೋರಾಟ, ಭದ್ರಾ ಡ್ಯಾಂ ಮುತ್ತಿಗೆ, ಶಿವಮೊಗ್ಗದ ಮುಖ್ಯ ಎಂಜಿನಿಯರ್ ಕಚೇರಿ ಮುತ್ತಿಗೆಯಂತಹ ಹೋರಾಟ ನಡೆಸಲಾಯಿತು. ಆಗ ಕಾಂಗ್ರೆಸ್ ಸರ್ಕಾರ ಹಠಕ್ಕೆ ಬಿದ್ದು, ರೈತ ಮುಖಂಡರನ್ನು ಬಂಧಿಸಿ, ಡ್ಯಾಂ ಸುತ್ತ 144ನೇ ಸೆಕ್ಷನ್‌ ಜಾರಿಗೊಳಿಸಿ, ಕಾಮಗಾರಿ ಮುಗಿಸಿತ್ತು ಎಂದು ಅವರು ಹೇಳಿದರು.

ಕಡೆಗೂ ನಮ್ಮ ಹೋರಾಟದ ಫಲವಾಗಿ ನೀರೊಯ್ಯುವ ಪೈಪ್‌ಗೆ ಗೇಟ್ ಅಳವಡಿಸಿ, ನೀರು ಬಿಡುವುದನ್ನು ತಡೆಹಿಡಿಯಲಾಗಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ರೈತಪರ ಕಾಳಜಿ ತೋರಿಲ್ಲ. ಬದಲಾಗಿ ಮೌನಕ್ಕೆ ಶರಣಾಗಿದ್ದಾರೆ. ಇಬ್ಬರು ಸಚಿವರಿದ್ದರೂ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡದಿದ್ದರೆ ಏನು ಪ್ರಯೋಜನವೆಂದು ರೈತರು ಪ್ರಶ್ನಿಸುತ್ತಿದ್ದಾರೆ. ರೈತಪರ ಧೋರಣೆಯೇ ಇಲ್ಲದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ವಿಧೇಯರಾಗಿರುವ ಬದಲಿಗೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಜಿಲ್ಲೆಯ ಅಚ್ಚುಕಟ್ಟು ರೈತರ ಪರ ನಿಲ್ಲಲಿ ಎಂದು ಹೇಳಿದರು.

ಬಿಜೆಪಿ ಮಾಜಿ ಶಾಸಕ ಎಂ.ಬಸವರಾಜ ನಾಯಕ ಮಾತನಾಡಿ, ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡುವ ಕಾಮಗಾರಿಗೆ ₹30 ಕೋಟಿ ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ. ಮುತ್ತಿನಕೊಪ್ಪ ಏತ ನೀರಾವರಿ ಯೋಜನೆ, ಬಾಕಿ ಕಾಮಗಾರಿ ಪೂರ್ಣಗೊಳಿಸಿದರೆ ತುಂಗಾದಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ತುಂಬಿಸಿ, ಮೇಲ್ದಂಡೆಗೆ ಹರಿಸಬಹುದು. ಮೊದಲು ತುಂಗಾದಿಂದ ಭದ್ರಾಗೆ ನೀರು ತುಂಬಿ, ಹಿರಿಯೂರು ಭಾಗಕ್ಕೆ ನೀರು ಕೊಡಲಿ. ಆದರೆ, ಸರ್ಕಾರದಲ್ಲಿ ಹಣವಿಲ್ಲದೇ, ಬಸ್ಸು ದರ, ಹಾಲು-ಮೊಸರಿನ ದರ ಹೆಚ್ಚಿಸುವ ಆರ್ಥಿಕ ದುಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ತಂದಿದೆ ಎಂದರು.

ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೇರುವ ಕೆಲಸವಾಗುತ್ತಿದೆ. ಬಿಸಿಯೂಟ ಕಾರ್ಯಕರ್ತೆಯರಿಗೆ 3 ತಿಂಗಳಿಂದ ಸಂಬಳ ನೀಡಿಲ್ಲ. ಈ ಹಿಂದೆ ₹925 ಕೋಟಿ ಅನುದಾನ ನೀಡಿ, ನಾಲೆ ಆಧುನೀಕರಣಗೊಳಿಸಿದ್ದೆವು. ಈಗ ಅದರಲ್ಲಿ ಬೆಳೆದ ಗಿಡಗಳು, ಹೂಳು ತೆರವುಗೊಳಿಸುವೂದಕ್ಕೂ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿಲ್ಲ. ಇದು ರೈತರ ಪರ, ಬಡವರ ಪರವಲ್ಲದ ಸರ್ಕಾರ. ರಿಯಲ್ ಎಸ್ಟೇಟ್‌ ದಂಧೆಯವರ ಪರವಿರುವ ಸರ್ಕಾರ ಇದು. ಕಾಂಗ್ರೆಸ್‌ಗೆ ಮುಂಬರುವ ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರ ಆಕ್ರೋಶ ಏನೆಂಬುದು ಗೊತ್ತಾಗಲಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಬಿಜೆಪಿ ಮಾಡಲಿದೆ ಎಂದು ತಿಳಿಸಿದರು.

ಮುಖಡಂರಾದ ಕುಕ್ಕವಾಡ ರುದ್ರೇಗೌಡ್ರು, ಬಾತಿ ಬಿ.ಕೆ.ಶಿವಕುಮಾರ, ಎಸ್.ಆರ್.ರಾಜೇಂದ್ರ, ಕೊಳೇನಹಳ್ಳಿ ಶರಣಪ್ಪ, ರೇವಣಸಿದ್ದಪ್ಪ ಕುರ್ಕಿ, ಬಲ್ಲೂರು ಬಸವರಾಜ, ಕಾರಿಗನೂರು ಗಂಗಾಧರಪ್ಪ, ಮಂಜುನಾಥ ಕಾರಿಗನೂರು, ಗೋಣಿವಾಡ ಮಂಜುನಾಥ ಇತರರು ಇದ್ದರು.

- - -

(ಬಾಕ್ಸ್‌)

* ಭದ್ರಾ ವಿಚಾರದಲ್ಲಿ ಡಿಕೆಶಿ-ಸರ್ಕಾರದ ಹಸ್ತಕ್ಷೇಪ ಸಲ್ಲದು

- ಐಸಿಸಿ ಸಭೆ ಕರೆದು ಜ.1ರಿಂದಲೇ ಸತತ 120 ದಿನ ನೀರು ಹರಿಸಲು ನಿರ್ಧಾರ ಕೈಗೊಳ್ಳಲಿ

ದಾವಣಗೆರೆ: ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು, ಸಮಿತಿ ಸದಸ್ಯರು, ರೈತರ ಸಮಕ್ಷಮದಲ್ಲೇ ಭದ್ರಾ ಡ್ಯಾಂನಿಂದ ಬೇಸಿಗೆ ಬೆಳೆಗೆ ನೀರು ಬಿಡುವ ವೇಳಾಪಟ್ಟಿ ಬಗ್ಗೆ ಚರ್ಚಿಸಿ, ತೀರ್ಮಾನಿಸಬೇಕು. ಭದ್ರಾ ನೀರಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ ತಾಕೀತು ಮಾಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭದ್ರಾ ನೀರಿನ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿ, ಭದ್ರಾ ಅಚ್ಚುಕಟ್ಟು ರೈತರು, ಆ ಜಿಲ್ಲೆಗಳ ಅವಲಂಬಿತರನ್ನು ಸಂಕಷ್ಟಕ್ಕೆ ನೂಕಬಾರದು ಎಂದರು.

ಭೀಕರ ಬರದಿಂದ ತತ್ತರಿಸಿದ ಜಿಲ್ಲೆಯ ರೈತರು ಕಳೆದ ವಾರ ಸುರಿದ ಸ್ವಾತಿ ಮಳೆಯಿಂದಾಗಿ ಒಂದಿಷ್ಟು ನಿರಮ್ಮಳರಾಗಿದ್ದಾರೆ. ಭದ್ರಾ ಡ್ಯಾಂನಲ್ಲಿ 173 ಅಡಿ ನೀರಿದ್ದು, ಬೇಸಿಗೆ ಹಂಗಾಮಿಗೆ ಜನವರಿ 1ರಿಂದಲೇ ಸತತ 120 ದಿನ ನೀರು ಹರಿಸಬೇಕು. ನೀರು ಬಿಡುವ ವೇಳಾಪಟ್ಟಿ ಮುಂಚಿತವಾಗಿ ಗೊತ್ತಾದರೆ ರೈತರು ನೀರಿನ ಸೌಲಭ್ಯ ಇರುವಲ್ಲಿ ಬತ್ತ ಚೆಲ್ಲಿ, ಸಸಿ ಬೆಳೆಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಕಾಲುವೆ ಮೂಲಕ ನೀರು ತಲುಪಿದಾಗ ಬತ್ತ ನಾಟಿ ಮಾಡಿಕೊಳ್ಳುತ್ತಾರೆ. ಆಗ ರೈತರ ನಡುಗೆ ನೀರು ಹಾಯಿಸುವ ಪೈಪೋಟಿಯೂ ತಪ್ಪುತ್ತದೆ. ಕೊನೆಯ ಭಾಗಕ್ಕೆ ನೀರು ತಲುಪಿಸುವುದಕ್ಕೂ ಸಹಕಾರಿ ಆಗುತ್ತದೆ. ತಕ್ಷಣವೇ ಭದ್ರಾ ಕಾಡಾ ಸಮಿತಿ ಸಭೆ ಕರೆದು, ಜ.1ರಿಂದ ಸತತವಾಗಿ 120 ದಿನ ನೀರು ಬಿಡುವ ತೀರ್ಮಾನ ಕೈಗೊಳ್ಳಬೇಕು. ನಾಲೆಗಳಲ್ಲಿ ಬೆಳೆದ ಕಳೆಗಿಡಗಳ ತೆರವು ಮಾಡಬೇಕು. ನಾಲೆ ದುರಸ್ತಿ ಕೈಗೊಳ್ಳಬೇಕು. ಹೂಳು ತೆಗೆಸಬೇಕು. ಮಣ್ಣು ಕಲ್ಲು ತುಂಬಿರುವುದನ್ನು ತೆಗೆಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

- - -

-5ಕೆಡಿವಿಜಿ6: ದಾವಣಗೆರೆಯಲ್ಲಿ ಗುರುವಾರ ಜಿಲ್ಲೆಯ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳು ಜಾಗೃತಿವಾದರೆ ಅದೇ ದೊಡ್ಡ ಶಕ್ತಿ
ರಾಮಮಂದಿರ ಪೇಜಾವರ ಶ್ರೀಗಳ ಕನಸಾಗಿತ್ತು