ಯುಗಾದಿ ಹಬ್ಬದ ಅಂಗವಾಗಿ ವಿವಿಧ ಗ್ರಾಮಗಳ ರೈತರಿಂದ ಹೊನ್ನಾರು ಆಚರಣೆ

KannadaprabhaNewsNetwork |  
Published : Apr 01, 2025, 12:49 AM IST
31ಕೆಎಂಎನ್ ಡಿ14 | Kannada Prabha

ಸಾರಾಂಶ

ತಮಟೆ ಸದ್ದಿನೊಂದಿಗೆ ನೇಗಿಲು ಹೊತ್ತ ಮೂವರು ರೈತರು, ಎತ್ತುಗಳೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಮೂರು ಜೊತೆ ಎತ್ತುಗಳಿಗೆ ನೇಗಿಲು ಕಟ್ಟಿ ಗ್ರಾಮದ ಸುತ್ತಲು ಉಳುಮೆ ಮಾಡುವ ಮೂಲಕ ವರ್ಷದ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆಧುನಿಕತೆ ಎಷ್ಟೇ ಮುಂದುವರಿದರೂ ಗ್ರಾಮೀಣ ಪ್ರದೇಶದಲ್ಲಿ ಮೂಲ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಆಚರಣೆ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಯುಗಾದಿ ಹಬ್ಬದ ಅಂಗವಾಗಿ ನಡೆದ ಹೊನ್ನಾರು ಆಚರಣೆಯೇ ಸಾಕ್ಷಿ.

ರೈತರು ಕೃಷಿ ಚಟುವಟಿಕೆ ಆರಂಭಿಸುವುದಕ್ಕೂ ಮುನ್ನ ಈ ಬಾರಿ ಉತ್ತಮ ಮಳೆ ಬೆಳೆಯಾಗಿ ನಾಡಿನ ಜನ ಜಾನುವಾರುಗಳು ಸುಭೀಕ್ಷವಾಗಿರಲೆಂದು ದೇವರಲ್ಲಿ ಪ್ರಾರ್ಥಿಸಲು ಹೊಸ ಸಂವತ್ಸರದ ದಿನದಂದು ಹೊನ್ನಾರು ಕಟ್ಟುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಯುಗಾದಿ ಹಬ್ಬದ ದಿನವಾದ ಭಾನುವಾರ ಹೊನ್ನಾರು ಕಟ್ಟುವ ಆಚರಣೆ ನಡೆಯಿತು. ಕರಡಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಶ್ರೀವಿಶ್ವಾವಸು ನಾಮ ಸಂವತ್ಸರದ ಹೊಸ ಪಂಚಾಂಗವನ್ನು ನೋಡಿಸಿದ ಗ್ರಾಮದ ಮುಖ್ಯಸ್ಥರು ಒಂದೇ ಹೆಸರಿನ ಮೂವರನ್ನು ಆಯ್ಕೆ ಮಾಡಿ, ಅವರುಗಳೊಂದಿಗೆ ಗ್ರಾಮದ ಶ್ರೀ ಬೋರೇದೇವರ ದೇವಸ್ಥಾನದ ಮುಂಭಾಗದ ಗರುಡಕಂಭದ ಮುಂದೆ ಮೂರು ಜೊತೆ ಸಿಂಗರಿಸಿದ ಎತ್ತುಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು.

ನಂತರ ತಮಟೆ ಸದ್ದಿನೊಂದಿಗೆ ನೇಗಿಲು ಹೊತ್ತ ಮೂವರು ರೈತರು, ಎತ್ತುಗಳೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಮೂರು ಜೊತೆ ಎತ್ತುಗಳಿಗೆ ನೇಗಿಲು ಕಟ್ಟಿ ಗ್ರಾಮದ ಸುತ್ತಲು ಉಳುಮೆ ಮಾಡುವ ಮೂಲಕ ವರ್ಷದ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದರು.

ಈ ವಿಶಿಷ್ಟ ಆಚರಣೆಯನ್ನು ಪೂರ್ವಿಕರಿಂದ ನಡೆಸಿಕೊಂಡು ಬಂದಿದ್ದು, ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರ ಬಾಳು ಹಸನಾಗಲಿ ಎಂಬ ಉದ್ದೇಶದಿಂದ ಈ ಹೊನ್ನಾರು ಆಚರಣೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕರಡಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಹೊನ್ನಾರು ಆಚರಣೆ ನಡೆಯಿತು. ಗ್ರಾಮಸ್ಥರು ಶ್ರದ್ಧಾ- ಭಕ್ತಿಯಿಂದ ಪೂಜೆ ಸಲ್ಲಿಸಿ ಈ ವಿಶಿಷ್ಟ ಆಚರಣೆಯನ್ನು ನೆರವೇರಿಸಿದರು.

ಗ್ರಾಮದ ಮುಖ್ಯಸ್ಥರಾದ ಕೆ.ಆರ್.ದಯಾನಂದ್, ಎಸ್.ಗೋವಿಂದಯ್ಯ, ವೆಂಕಟೇಶ್, ಜಯಬೋರಯ್ಯ, ದೇವೇಗೌಡ, ಗೋ.ರಾಮಣ್ಣ, ಕೆ.ಎಂ.ನಾಗರಾಜು, ರಾಜಣ್ಣ, ಗ್ರಾಪಂ ಸದಸ್ಯ ಸಿಂಗಾರಿಗೌಡ, ಅರ್ಚಕ ಸೋಮಶೇಖರಯ್ಯ, ಕೆ.ಎಂ.ರಾಮು, ಮರೀಗೌಡ ಸೇರಿದಂತೆ ಹಲವರು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ