ಮುಂಡರಗಿ ತಾಲೂಕಲ್ಲಿ ಬಿತ್ತನೆಗೆ ರೈತರ ಸಜ್ಜು

KannadaprabhaNewsNetwork |  
Published : May 29, 2026, 02:30 AM IST
27ಎಂಡಿಜಿ1, ಮುಂಡರಗಿ ಭಾಗದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಾರಂಭಿಸಿರುವುದು. | Kannada Prabha

ಸಾರಾಂಶ

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಹಾಗೂ ಖುಷ್ಕಿ ಜಮೀನಿನಲ್ಲಿ ಸುಮಾರು 49565 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಶರಣು ಸೊಲಗಿ

ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದಾಗಿ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆ ಪ್ರಾರಂಭಿಸಲು ಸಿದ್ಧರಾಗುತ್ತಿದ್ದಾರೆ.

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಹಾಗೂ ಖುಷ್ಕಿ ಜಮೀನಿನಲ್ಲಿ ಸುಮಾರು 49565 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅವುಗಳಲ್ಲಿ ಈ ಭಾಗದ ಪ್ರಮುಖ ಬೆಳೆಗಳಾದ ಗೋವಿನಜೋಳ 29900 ಹೆಕ್ಟೇರ್, ಹೆಸರು 8100 ಹೆಕ್ಟೇರ್, ಸೂರ್ಯಕಾಂತಿ 4700 ಹೆಕ್ಟೇರ್, ಭತ್ತ 2450 ಹೆಕ್ಟೇರ್, ಶೇಂಗಾ 1950 ಹೆಕ್ಟೇರ್, ತೊಗರಿ 875 ಹೆಕ್ಟೇರ್, ಹತ್ತಿ 425 ಹೆಕ್ಟೇರ್, ಕಬ್ಬು 700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ.

ತಾಲೂಕಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಏಪ್ರಿಲ್ 14ರಿಂದ ಅಶ್ವಿನಿ, ಭರಣಿ, ಕೃತಿಕಾ ಮಳೆಗಳಾಗಿದ್ದು, ಮೇ 25ರಿಂದ ರೋಹಿಣಿ ಮಳೆ ಪ್ರಾರಂಭವಾಗಿದೆ. ತಾಲೂಕಿನಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ 87.3 ಮಿಮೀ ವಾಡಿಕೆ ಮಳೆ ಇತ್ತು. ಆದರೆ 134.9 ಮಿಮೀ ಮಳೆಯಾಗಿದೆ. ಆದರೂ ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದರೆ ಮುಂಡರಗಿ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಉತ್ತಮ ಮಳೆಯಾಗಬೇಕು ಎನ್ನುವುದು ತಾಲೂಕಿನ ರೈತರ ಅಭಿಪ್ರಾಯವಾಗಿದೆ.

ಮುಂಗಾರು ಬಿತ್ತನೆ ಕಾರ್ಯಕ್ಕಾಗಿ ಈಗಾಗಲೇ ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ 10 ಕ್ವಿಂಟಲ್ ಹೆಸರು ಬೀಜ, 50 ಕ್ವಿಂಟಲ್ ತೊಗರಿ ಬೀಜ ಸಂಗ್ರಹವಿದೆ. ಅದೇ ರೀತಿ ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ 15 ಕ್ವಿಂಟಲ್ ಹೆಸರು ಬೀಜ ಮತ್ತು 50 ಕ್ವಿಂಟಲ್ ತೊಗರಿ ಬೀಜ ಸಂಗ್ರಹಿಸಲಾಗಿದೆ. ನಂತರ ಬೇಕಾದ ಬೀಜಗಳನ್ನು ಸಹ ಕೃಷಿ ಇಲಾಖೆ ಅಧಿಕಾರಿಗಳು ನಿಗದಿತ ಸಮಯಕ್ಕೆ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆನ್ನುವುದು ರೈತರ ಒತ್ತಾಯವಾಗಿದೆ.

ಕೃಷಿ ಚಟುವಟಿಕೆ ಜೋರು: ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಜೋರಾಗಿ ನಡೆದಿದ್ದು, ರೈತರು ಗೋವಿನಜೋಳ, ಸೂರ್ಯಕಾಂತಿ, ಹೆಸರು ಬಿತ್ತನೆ ನಡೆಯುತ್ತಿದ್ದು, ಮಸಾರಿ ಭೂಮಿಯಲ್ಲಿ ಹೆಚ್ಚಿನ ತೇವಾಂಶವಿದ್ದು, ಎರೆಭೂಮಿಯಲ್ಲಿ ತೇವಾಂಶ ಕಡಿಮೆಯಾಗಿರುವುದರಿಂದ ಬಿತ್ತನೆ ಕಾರ್ಯ ಜೋರಾಗಿಲ್ಲ. ಆದರೆ ಮಸಾರಿ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ಅತ್ಯಂತ ಜೋರಾಗಿವೆ ಎಂದು ರೈತ ಶಿವಾನಂದ ಇಟಗಿ ತಿಳಿಸಿದರು.

ಬಿತ್ತನೆ ಬೀಜದ ಕೊರತೆ ಇಲ್ಲ: ಈಗಾಗಲೇ ರೈತರು ಮುಂಗಾರು ಬಿತ್ತನೆ ಮಾಡುತ್ತಿದ್ದು, ಬಿತ್ತನೆ ಮಾಡುವಾಗ ತೇವಾಂಶ ನೋಡಿ ಬಿತ್ತಬೇಕು. ಬಿತ್ತನೆಗೆ ಪೂರ್ವದಲ್ಲಿ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಮುಂಡರಗಿ ಹಾಗೂ ಡಂಬಳ ಎರಡೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇದೆ. ಯಾವುದೇ ರೀತಿಯ ಬಿತ್ತನೆ ಬೀಜದ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಪ್ರಾಣೇಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ಜು.1ರೊಳಗೆ ಫುಟ್ಪಾತ್‌ ಬಿಡದಿದ್ದರೆ ಜೆಸಿಬಿ ಬರಲಿದೆ
ಮಲ್ಲಟ ಜೆಸ್ಕಾಂ ಉಪ ಕಚೇರಿಗೆ ಬೆಂಕಿ: ಸಿಬ್ಬಂದಿಗೆ ಹಲ್ಲೆ, ದೂರು