ಗದಗ: ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು, ವಿದ್ಯಾವಂತರಾಗುವುದರೊಂದಿಗೆ ಪ್ರಜ್ಞಾವಂತಿಕೆಯನ್ನೂ ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ಗುರು- ಹಿರಿಯರು ಹೇಳುವ ಸಂಸ್ಕಾರಯುತ ವಿಚಾರಗಳನ್ನು ತಿರಸ್ಕಾರ ಮಾಡದೇ ಅವುಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದು ಶಿರೋಳದ ಯಚ್ಚರ ಸ್ವಾಮಿಗಳ ಸಂಸ್ಥಾನ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ತಿಳಿಸಿದರು.ನಗರದ ಗಂಗಿಮಡಿ ಕ್ರಾಸ್ ಹತ್ತಿರದ, ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 8ನೇ ವರ್ಷದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಂಘದ ನಿವೃತ್ತ ದಂಪತಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
8ನೇ ವರ್ಷದ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 140ಕ್ಕೂ ಹೆಚ್ಚು ವಿಶ್ವಕರ್ಮ ಸಮಾಜದ ಮಕ್ಕಳು ಪಾಲ್ಗೊಂಡು ಪುರಸ್ಕೃತರಾಗಿದ್ದಿರಿ. ನೀವೆಲ್ಲ ಐಎಎಸ್, ಐಪಿಎಸ್, ಐಎಫ್‌ಎಸ್, ಕೆಎಎಸ್ ನಂತಹ ಹುದ್ದೆಗಳ ಗುರಿ ಇಟ್ಟುಕೊಳ್ಳಬೇಕು. ಅದಕ್ಕೆ ನಮ್ಮ ಸಂಘಟನೆ ಅಗತ್ಯ ಸಹಕಾರ ನೀಡುವುದು. ಜತೆಗೆ ಸಮಾಜದ ಸರ್ವರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಕೆ.ಡಿ. ಬಡಿಗೇರ ಮಾತನಾಡಿ, ತಪಸ್ಸಿನಂತೆ ತೊಡಗಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧ್ಯ. ಮೊಬೈಲ್ ಮುಂತಾದ ಮನರಂಜನೆಗಳನ್ನು ತ್ಯಾಗ ಮಾಡಿ ಶ್ರದ್ಧೆಯಿಂದ ಅಭ್ಯಾಸ ಮಾಡಿ, ಬದುಕು ರೂಪಿಸಿಕೊಳ್ಳುವ ಶಿಲ್ಪಿಗಳು ನೀವೆ ಆಗಿದ್ದು, ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಿ ಎಂದರು.ಮೌನೇಶ ಕೆಂಭಾವಿ, ಕಾಳಪ್ಪ ಬಡಿಗೇರ, ಡಾ. ಮನೋಹರ ಪತ್ತಾರ, ವಿಠ್ಠಲ ಕಮ್ಮಾರ ಮಾತನಾಡಿದರು. ಸಮಾಜದ ಸಾಧಕರಿಗೆ ವಿಶ್ವಕರ್ಮ ಸಾಧಕಶ್ರೀ ಹಾಗೂ ವಿಶ್ವಕರ್ಮ ನೌಕರಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ನಿವೃತ್ತ ನೌಕರ ದಂಪತಿ ಹಾಗೂ ವಿಶೇಷ ಸನ್ಮಾನಿತರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಲಿಕಾ ಸಾಮಗ್ರಿಗಳ ವಿತರಿಸಲಾಯಿತು.ಈರಪ್ಪ ಶ. ಪಂಚಾನ, ದೇವೇಂದ್ರಪ್ಪ ಅಗಲತಕಟ್ಟ, ಕೆ. ರಾಮು ಗಾಣದಾಳ, ದೇವೇಂದ್ರಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಎ.ಎನ್. ಬಡಿಗೇರ, ಬಿ.ಎಂ. ಬಡಿಗೇರ, ಕೆ.ಎಸ್. ಬಡಿಗೇರ, ಶಿವಲೀಲಾ ಬಡಿಗೇರ, ಬಿ.ಎಂ. ಯರಕದ, ಮೌನೇಶ ಸಿ. ಬಡಿಗೇರ, ಮಹೇಶ ಕಮ್ಮಾರ, ವಿಶ್ವನಾಥ ಕಮ್ಮಾರ, ರಿಂದಮ್ಮ ತೋಟಗಂಟಿ, ಕಸ್ತೂರಿಬಾಯಿ ಕಮ್ಮಾರ, ಡಾ. ಸಿ.ವಿ. ಬಡಿಗೇರ ಸೇರಿದಂತೆ ಗಣ್ಯರು ಇದ್ದರು. ಶ್ರೀಧರ ಬಡಿಗೇರ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಗಿರೀಶ ಬಡಿಗೇರ ಸ್ವಾಗತಿಸಿದರು. ರಾಜಗೋಪಾಲ ಡಿ. ಕಡ್ಲಿಕೊಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಸುಮಂಗಲಾ ಪತ್ತಾರ ನಿರೂಪಿಸಿದರು. ಸಿ.ಎಂ. ಪತ್ತಾರ ವಂದಿಸಿದರು.