ರಾಮನಗರ: ಬಿಡದಿ ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಗೆ ಭೂಸ್ವಾಧೀನ ವಿಚಾರವಾಗಿ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ರೈತರು ಫೇರಾವ್ ಹಾಕಿದ ಘಟನೆ ನಡೆದಿದೆ.
ರೈತರ ವಿರೋಧದ ನಡುವೆಯೂ ಟೌನ್ ಶಿಪ್ ನಿರ್ಮಾಣ ಮಾಡಲು ಹೊರಟಿದ್ದೀರಿ. ನಮ್ಮ ಊರಿಗೆ ಯಾಕೆ ನೀವು ಬರುತ್ತೀರಿ. ತಿಂಗಾಳುಗಟ್ಟಲೆಯಿಂದ ವೃದ್ಧರು, ಮಹಿಳೆಯರು, ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಗೆ ಒಮ್ಮೆಯೂ ಭೇಟಿ ನೀಡಲಿಲ್ಲ ಏಕೆಂದು ಪ್ರಶ್ನಿಸಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ಭೂಮಿ ಕಬಳಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದೀರಿ. ಯಾವ ಕಾರಣಕ್ಕೂ ನಾವು ಭೂಮಿಯನ್ನು ಕೊಡುವುದಿಲ್ಲ, ಗ್ರಾಮವನ್ನು ಬಿಡುವುದಿಲ್ಲ. ನಮ್ಮಿಂದಾಗಿ ನೀವು ಶಾಸಕರಾಗಿದ್ದೀರಿ, ನಿಮಗೆ ಅಧಿಕಾರ ಶಾಶ್ವತ ಅಲ್ಲ. ಇನ್ನಾದರು ರೈತರ ಪರವಾಗಿ ನಿಂತು ಹೋರಾಟ ನಡೆಸಿ ಎಂದರು.ರೈತರನ್ನು ಸಮಾಧಾನ ಪಡಿಸಲು ಮುಂದಾದ ಬಾಲಕೃಷ್ಣ ಬೆಂಬಲಿಗರಿಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ನಮ್ಮ ಊರನ್ನು ಖಾಲಿ ಮಾಡಿಸಲು ಹೊರಟಿರುವ ನೀವು ನಮ್ಮ ಊರಿಗೆ ಯಾಕೆ ಬರುತ್ತೀರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದರು.
ಇಷ್ಟೇ ಅಲ್ಲದೆ, ಬಾಲಕೃಷ್ಣ ಅವರೊಂದಿಗೆ ಆಗಮಿಸಿದ ಕೆಲ ಮುಖಂಡರು ರೈತರನ್ನು ತಳ್ಳಾಟ ನೂಕಾಟ ಮಾಡಿದರು. ಇದರಿಂದ ಆಕ್ರೋಶಗೊಂಡ ರೈತರು ನೀವು ಯಾವ ಊರಿನವರು, ಇಲ್ಲಿಗೆ ಏಕೆ ಬಂದಿದ್ದೀರಿ. ನಿಮ್ಮ ಕೆಲಸ ನೋಡಿಕೊಂಡು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪೊಲೀಸರು ಬಾಲಕೃಷ್ಣ ಬೆಂಬಲಿಗರು ಮತ್ತು ರೈತರನ್ನು ಸಮಾಧಾನ ಪಡಿಸಿದರು. ಆದರೂ ರೈತ ಮಹಿಳೆಯರು ಕಾರಿನಲ್ಲಿ ಕುಳಿತಿದ್ದ ಬಾಲಕೃಷ್ಣ ಬಳಿಗೆ ತೆರಳಿ ನಮ್ಮ ಭೂಮಿ ಕಸಿದುಕೊಳ್ಳುತ್ತಿರುವ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಹಿಡಿ ಶಾಪ ಹಾಕಿದರು.
ರೈತರು ಜಮಾಯಿಸುತ್ತಿದ್ದಂತೆ ಪೊಲೀಸರ ಸರ್ಪಗಾವಲಿನಲ್ಲಿ ಶಾಸಕ ಬಾಲಕೃಷ್ಣ ಸ್ಥಳದಿಂದ ತೆರಳಿದರು.7ಕೆಆರ್ ಎಂಎನ್ 1,2.ಜೆಪಿಜಿ
ರಾಮನಗರ ತಾಲೂಕು ಬಿಡದಿ ಹೋಬಳಿ ಅರಳಾಳುಸಂದ್ರ ಗ್ರಾಮದಲ್ಲಿ ಶಾಸಕ ಬಾಲಕೃಷ್ಣ ಅವರಿದ್ದ ಕಾರನ್ನು ರೈತರು ಘೇರಾವ್ ಮಾಡಿರುವುದು.