ಎರಡು ದಶಕದಿಂದ ಆಸ್ತಿ ದಾಖಲೆಯಿಲ್ಲದೇ ರೈತರ ಪರದಾಟ

KannadaprabhaNewsNetwork |  
Published : Apr 09, 2026, 02:30 AM IST
ಸವಣೂರು ಪಟ್ಟಣದ ಕಂದಾಯ ಇಲಾಖೆ | Kannada Prabha

ಸಾರಾಂಶ

ಸವಣೂರು ತಹಸೀಲ್ದಾರ್‌ ಕಾರ್ಯಾಲಯದಲ್ಲಿ ನಡೆದ ಅಗ್ನಿ ಅ‍ವಘಡದಿಂದ ರೈತರ ಭೂದಾಖಲೆಗಳು ಸುಟ್ಟಿಹೋಗಿ 26 ವರ್ಷಗಳು ಗತಿಸಿದರೂ ಈ ವರೆಗೂ ರೈತರಿಗೆ ಪರ್ಯಾಯ ದಾಖಲೆಗಳು ಲಭ್ಯವಾಗಿಲ್ಲ. ಹೀಗಾಗಿ ರೈತರು ಹಲವು ಯೋಜನೆಗಳಿಂದ ವಂಚಿತವಾಗುವಂತಾಗಿದೆ.

ಶಿವರಾಜ ಯಲವಿಗಿ

ಸವಣೂರು: ಇಲ್ಲಿಯ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಅಗ್ನಿ ಅ‍ವಘಡದಿಂದ ರೈತರ ಭೂದಾಖಲೆಗಳು ಸುಟ್ಟಿಹೋಗಿ 26 ವರ್ಷಗಳು ಗತಿಸಿದರೂ ಈ ವರೆಗೂ ರೈತರಿಗೆ ಪರ್ಯಾಯ ದಾಖಲೆಗಳು ಲಭ್ಯವಾಗಿಲ್ಲ. ಹೀಗಾಗಿ ರೈತರು ಹಲವು ಯೋಜನೆಗಳಿಂದ ವಂಚಿತವಾಗುವಂತಾಗಿದೆ.

2000ರ ಮಾ. 29 ನಿಜಕ್ಕೂ ಸವಣೂರು ತಾಲೂಕಿನ ರೈತರಿಗೆ ಕರಾಳ ದಿನವಾಗಿತ್ತು. ಅಂದು ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಉಂಟಾದ ಅಗ್ನಿ ಅವಘಡದಿಂದ ಅನೇಕ ರೈತರ ಭೂಮಿ ಮತ್ತು ಕೃಷಿಗೆ ಸಂಬಂಧಿತ ದಾಖಲೆಗಳು ಸುಟ್ಟುಹೋಗಿದ್ದವು. ಆ ದಿನದ ರೈತರ ಆಕ್ರೋಶದ ಜ್ವಾಲೆಗಳು ಕೇವಲ ಕಾಗದಗಳನ್ನು ಮಾತ್ರವಲ್ಲ, ಸಾವಿರಾರು ರೈತರ ಬದುಕಿನ ನೆಲೆಯನ್ನು ಸುಟ್ಟುಹಾಕಿದೆ. ರೈತರು ದಾಖಲೆಗಾಗಿ ಇಂದಿಗೂ ಕಚೇರಿ ಅಲೆದಾಡುತ್ತಿದ್ದಾರೆ.

ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಸ್ಥಳೀಯ ಶಾಸಕರಾದರೂ ಮಧ್ಯಸ್ಥಿಕೆ ವಹಿಸಿ ರೈತರಿಗೆ ಆಗುತ್ತಿರುವ ಅನನುಕೂಲ ತಪ್ಪಿಸಬೇಕು ಎಂದು ರೈತರ ಮುಖಂಡರು ಆಗ್ರಹಿಸುತ್ತಾರೆ.

ಸಿಗುತ್ತಿಲ್ಲ ಸೌಲಭ್ಯ: ದಾಖಲೆಗಳು ಸುಟ್ಟುಹೋದ ಕಾರಣ ಭೂಮಿ ತಮ್ಮದೇ ಎಂಬುದನ್ನು ಸಾಬೀತುಪಡಿಸಲು ರೈತರ ಬಳಿ ಸಾಕ್ಷ್ಯಾಧಾರಗಳಿಲ್ಲ. ಪಹಣಿ, ಮ್ಯೂಟೇಶನ್ ದಾಖಲೆಗಳು ಇಲ್ಲದಿದ್ದರೆ ಬ್ಯಾಂಕ್ ಸಾಲ, ಪಡಿತರ, ಪರಿಹಾರ ಯಾವುದೂ ಸಿಗುತ್ತಿಲ್ಲ. ಭೂ ದಾಖಲೆಗಳಿಲ್ಲದೆ ರೈತರು ಕೃಷಿ ಸಾಲ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಖಾಸಗಿ ಬ್ಯಾಂಕ್‌ ಅಥವಾ ಕೈಗಡ ಸಾಲ ಪಡೆದ ರೈತರು ಸಾಲದ ಬಲೆಗೆ ಸಿಲುಕುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಪಾಲಾಗಿವೆ. ತೊಂಡೂರ ಗ್ರಾಮದಲ್ಲಿ ಕೃಷಿಭೂಮಿಯ ದಾಖಲೆ ಸರಿಯಾಗಿ ಇಲ್ಲದೆ, ಕೈಗಡ ಸಾಲ ತೀರಿಸಲಾಗದ ಕುಟುಂಬವೊಂದು ನೇಣಿಗೆ ಶರಣಾದ ಘಟನೆ ಜನರ ಮನಸ್ಸಿನಿಂದ ಮಾಸಿಲ್ಲ.

ದಾಖಲೆಗಳ ಕೊರತೆಯಿಂದ ಅನೇಕ ರೈತರು ಫಸಲ್ ಬಿಮಾ, ಬೆಳೆ ಪರಿಹಾರ, ಸಬ್ಸಿಡಿ, ನೀರಾವರಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗಿಲ್ಲ.

ಭೂ ವಿವಾದ ಹೆಚ್ಚಳ: ದಾಖಲೆಗಳಿಲ್ಲದ ಕಾರಣದಿಂದ ಸಹೋದರರು, ಸಂಬಂಧಿಕರು ಅಥವಾ ಹೊರಗಿನವರೊಂದಿಗೆ ಭೂಸ್ವಾಮ್ಯ ಕುರಿತು ವಿವಾದಗಳು ಹೆಚ್ಚಿವೆ. ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ದುರುಪಯೋಗ ಮಾಡಿಕೊಂಡಿರುವ ಶಂಕೆಗಳೂ ಕೇಳಿಬರುತ್ತಿವೆ. ಮಕ್ಕಳಿಗೆ ಭೂಮಿ ಹಸ್ತಾಂತರಿಸಲು ಹಿರಿಯರಿಗೆ ಸಾಧ್ಯವಾಗುತ್ತಿಲ್ಲ.

ತಪ್ಪು ಯಾರದು? ಶಿಕ್ಷೆ ಯಾರಿಗೆ?: ಒಂದು ಕ್ಷಣದ ಅಶಾಂತಿಯಿಂದ ಉಂಟಾದ ಅವಘಡದ ಹೊಣೆಗಾರಿಕೆ ರೈತರ ಮೇಲೆ ಬೀಳಬೇಕೇ? ಎರಡು ದಶಕಗಳಿಂದ ರೈತರು ಕಚೇರಿಗಳ ಬಾಗಿಲಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಏಕೆ ಮುಂದುವರಿಯುತ್ತಿದೆ? ಇನ್ನಾದರೂ ಸರ್ಕಾರ ರೈತರ ದಾಖಲೆಗಳ ಮರುಸೃಷ್ಟಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

ರೈತರಿಗೆ ನ್ಯಾಯ ಒದಗಿಸಿ: 2000ರಲ್ಲಿ ನಡೆದ ಘಟನೆ ವೇಳೆ ನಮ್ಮ ಭೂ ದಾಖಲೆಗಳು ಸುಟ್ಟುಹೋದವು. ಕಳೆದ ಎರಡು ದಶಕಗಳಿಂದ ನಾವು ಕಚೇರಿಗಳ ಸುತ್ತ ಅಲೆದಾಡುತ್ತಾ ಸಂಕಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರವು ಗ್ರಾಮಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ನಡೆಸಿ, ದಾಖಲೆಗಳನ್ನು ನೀಡಬೇಕು. ಹೊಸ ದಾಖಲೆ ಸಿಗುವವರೆಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಿ ಸಾಲ, ವಿಮೆ ಮತ್ತು ಯೋಜನೆಗಳ ಸೌಲಭ್ಯಗಳನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉಂಟಾಗದಂತೆ ಎಲ್ಲ ದಾಖಲೆಗಳನ್ನು ಡಿಜಿಟಲ್ ಮಾಡಬೇಕು. ರೈತರ ಹಕ್ಕುಗಳಿಗೆ ತಕ್ಷಣ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರಮೇಶ ಅರಗೋಳ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವದಂಪತಿಗಳು ಅರಿತು ಸುಖ ಸಂಸಾರ ನಡೆಸಿ
ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ನೀಡಬಾರದು: ಹೆಬ್ಬಾರ