ಮಳೆ ನಿರೀಕ್ಷೆಯಲ್ಲಿ ರೈತ: ಬೀಜ, ಗೊಬ್ಬರ ವಿತರಣೆಗೆ ಸಿದ್ಧತೆ

KannadaprabhaNewsNetwork |  
Published : Jun 04, 2026, 02:15 AM IST
ಹರಪನಹಳ್ಳಿ ತಾಲೂಕಿನ ಹಲುವಾಗಲು ಭಾಗದಲ್ಲಿ ರೈತರು ಬಿತ್ತನೆಗೆ ಭೂಮಿಯನ್ನು ಸಿದ್ದತೆ ಮಾಡಿಕೊಳ್ಳವುದನ್ನು ಜಂಟಿ ಕೃಷಿ ನಿರ್ದೆಶಕ ಡಿ.ಟಿ.ಮಂಜುನಾಥ ಹಾಗೂ ತಾಂತ್ರಿಕ ಕೃಷಿ ಅಧಿಕಾರಿ ವೆಂಕಟೇಶನಾಯ್ಕ ವೀಕ್ಷಿಸಿದರು. | Kannada Prabha

ಸಾರಾಂಶ

ರಾಗಿ- 3409 ಹೆಕ್ಟೇರ್‌, ಭತ್ತ- 430 ಹೆಕ್ಟೇರ್‌, ತೊಗರಿ- 2600 ಹೆಕ್ಟೇರ್‌, ಶೇಂಗಾ- 1840 ಹೆಕ್ಟೇರ್‌ ಹೀಗೆ ಮುಂಗಾರು ಬಿತ್ತನೆ ಗುರಿ ಇದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಈಚೆಗೆ ಸುರಿದ ಮಳೆಗೆ ಭೂಮಿ ಹದಗೊಳಿಸಿ ಬಿತ್ತನೆ ಮಾಡಲು ತಾಲೂಕಿನ ರೈತರು ವರುಣನ ಕೃಪೆಗಾಗಿ ಕಾಯುತ್ತಿದ್ದಾರೆ.

ತಾಲೂಕಿನಲ್ಲಿ 86,936 ಹೆಕ್ಟೇರ್‌ ಬಿತ್ತನೆ ಪ್ರದೇಶವಿದೆ. ಅದರಲ್ಲಿ ನೀರಾವರಿ ಕೇವಲ 6692 ಹೆಕ್ಟೇರ್‌ ಇದ್ದು, 80,245 ಹೆಕ್ಟೇರ್‌ ಒಣಭೂಮಿ ಇದೆ. ಅದರಲ್ಲೂ 73,913 ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆ ಮಾಡುತ್ತಾರೆ. ಹರಪನಹಳ್ಳಿ ತಾಲೂಕನ್ನು ಮೆಕ್ಕೆಜೋಳದ ಕಣಜ ಎಂದು ಕರೆಯುತ್ತಾರೆ.

ರಾಗಿ- 3409 ಹೆಕ್ಟೇರ್‌, ಭತ್ತ- 430 ಹೆಕ್ಟೇರ್‌, ತೊಗರಿ- 2600 ಹೆಕ್ಟೇರ್‌, ಶೇಂಗಾ- 1840 ಹೆಕ್ಟೇರ್‌ ಹೀಗೆ ಮುಂಗಾರು ಬಿತ್ತನೆ ಗುರಿ ಇದೆ.

ಮೆಕ್ಕೆಜೋಳ, ತೊಗರಿ, ರಾಗಿ, ನವಣಿ, ಸೂರ್ಯಕಾಂತಿ ಬೀಜಗಳು ಕೃಷಿ ಇಲಾಖೆಯಲ್ಲಿ ರೈತರಿಗೆ ವಿತರಿಸಲು ದಾಸ್ತಾನು ಇದೆ. ರಸಗೊಬ್ಬರವೆಂದರೆ ಯೂರಿಯಾ- 452 ಮೆಟ್ರಿಕ್‌ ಟನ್, ಡಿಎಪಿ- 160 ಮೆಟ್ರಿಕ್‌ ಟನ್‌, ಎಂಒಪಿ- 160 ಮೆಟ್ರಿಕ್‌ ಟನ್, ಕಾಂಪ್ಲೆಸ್‌- 2750 ಮೆಟ್ರಿಕ್‌ ಟನ್, ಸಿಂಗಲ್‌ ಸೂಪರ್‌ ಪಾಸ್ಪೆಟ್‌- 56 ಮೆಟ್ರಿಕ್‌ ಟನ್ ಈ ರೀತಿ ಕೃಷಿ ಇಲಾಖೆಯಲ್ಲಿ ದಾಸ್ತಾನು ಇದೆ.

ಯೂರಿಯಾವನ್ನು ಈಗಾಗಲೇ ಶೇ.70ರಷ್ಟು ರೈತರು ದಾಸ್ತಾನು ಮಾಡಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕೃಷಿ ಇಲಾಖೆಯವರು ನೀಡುತ್ತಾರೆ.

ರೈತ ಸಂಪರ್ಕ ಕೇಂದ್ರ ಸಿದ್ಧತೆ:

ತಾಲೂಕಿನ ಅರಸಿಕೇರಿ, ಹರಪನಹಳ್ಳಿ ಕಸಬಾ, ಚಿಗಟೇರಿ, ತೆಲಿಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಸಾಸ್ವಿಹಳ್ಳಿ ಮತ್ತು ಹಲುವಾಗಲು ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ಬೀಜ, ಗೊಬ್ಬರ ಮಾರಾಟ ಮಾಡಲು ಕೃಷಿ ಇಲಾಖೆಯವರು ಸಿದ್ಧತೆ ಮಾಡಿದ್ದಾರೆ.

ಜೂ.2ರ ರಾತ್ರಿ ಹಲುವಾಗಲು, ಕುಂಚೂರು, ಕಣವಿ, ಕಡತಿ ಸೇರಿದಂತೆ ನದಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಒಂದೆರೆಡು ದಿನದಲ್ಲಿ ಕೇರಳಕ್ಕೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ನಂತರ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ಮೇ 25ರಿಂದ ಜೋಳ ಬಿತ್ತುವ ರೋಹಿಣಿ ಮಳೆ ಪ್ರಾರಂಭವಾದರೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಇನ್ನೂ ಬಿತ್ತನೆ ಆರಂಭಗೊಂಡಿಲ್ಲ. ಬಿತ್ತನೆಗೆ ಬಹುತೇಕ ರೈತರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ವರಣನ ಕೃಪೆಗೆ ಎದುರು ನೋಡುತ್ತಿದ್ದಾರೆ. ಉತ್ತಮ ಮಳೆ ಸುರಿದು ಹಿಂದುಳಿದ ತಾಲೂಕಿನ ರೈತರು ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಬಲಗೊಳ್ಳಲಿ ಎಂಬುದು ಜನತೆಯ ಆಶಯವಾಗಿದೆ. ಕಾದು ನೋಡಬೇಕಿದೆ.

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೂಮಿ ಹದ ಮಾಡಿಕೊಂಡು ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಉತ್ತಮ ಮಳೆಯಾಗಬೇಕಿದೆ ಎನ್ನುತ್ತಾರೆ ಹರಪನಹಳ್ಳಿ ಸಹಾಯಕ ಕೃಷಿ ನಿರ್ದೇಶಕ ಮಹಮದ್‌ ಆಶ್ರಫ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆ.ಎನ್.ಗಣೇಶ್‌ಗೆ ಸಚಿವ ಸ್ಥಾನ ನೀಡಲು ಒತ್ತಾಯ
ಸಿಲಿಂಡರ್ ಅಭಾವ: ವೇಸ್ಟ್ ಆಯಿಲ್, ಕಟ್ಟಿಗೆ ಒಲೆ ಮೊರೆ