ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿರುವ ಹಾವೇರಿ ಜಿಲ್ಲೆಯ ರೈತರು

KannadaprabhaNewsNetwork |  
Published : Jun 12, 2025, 12:52 AM ISTUpdated : Jun 12, 2025, 12:53 AM IST
11ಎಚ್‌ವಿಆರ್‌6- | Kannada Prabha

ಸಾರಾಂಶ

ಬಿತ್ತನೆ ಮಾಡಿದವರು ಕಳೆದೊಂದು ವಾರದಿಂದ ಮಳೆ ಇಲ್ಲದ್ದರಿಂದ ಆತಂಕಗೊಂಡಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ಜಿಲ್ಲೆಯಲ್ಲಿ ಮೇ ತಿಂಗಳ ಮಳೆಗೇ ಇಳೆ ತಂಪಾಗಿದ್ದರಿಂದ ಅರ್ಧದಷ್ಟು ಸಂಖ್ಯೆಯ ರೈತರು ತರಾತುರಿಯಲ್ಲೇ ಬಿತ್ತನೆ ಮಾಡಿ ಮುಗಿಸಿದ್ದಾರೆ. ಕಳೆದ ಒಂದು ವಾರದಿಂದ ಬಿಸಿಲು ಮನೆ ಮಾಡಿರುವುದರಿಂದ ಬಿತ್ತಿದವರು ಹಾಗೂ ಇನ್ನೂ ಬಿತ್ತನೆ ಕೈಗೊಬೇಕಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಮೇ ತಿಂಗಳಲ್ಲೇ ಉತ್ತಮ ಮಳೆಯಾಗಿದ್ದರಿಂದ ಇನ್ನೂ ಮಾನ್ಸೂನ್‌ ಪ್ರವೇಶಿಸುವ ಮುನ್ನವೇ ಮಲೆನಾಡಿಗೆ ಹೊಂದಿಕೊಂಡಿರುವ ಕೆಲ ತಾಲೂಕುಗಳ ಬಹುತೇಕ ರೈತರು ಬಿತ್ತನೆ ಮಾಡಿ ಮುಗಿಸಿದ್ದಾರೆ. ಬಿತ್ತನೆ ಮಾಡಿದವರು ಕಳೆದೊಂದು ವಾರದಿಂದ ಮಳೆ ಇಲ್ಲದ್ದರಿಂದ ಆತಂಕಗೊಂಡಿದ್ದಾರೆ.

ಬಿತ್ತನೆ ಮಾಡಿದ ಬೀಜ ಕೆಲವು ಕಡೆ ಮೊಳಕೆಯೊಡೆದಿದ್ದು, ಇನ್ನು ಕೆಲವು ಕಡೆ ಸಸಿಯಾಗಿದೆ. ಈ ಹಂತದಲ್ಲಿ ಮಳೆ ಬೇಕಿರುವುದರಿಂದ ರೈತರು ಮುಗಿಲಿನತ್ತ ನೋಡುವಂತಾಗಿದೆ. ಇನ್ನು ಕೆಲವು ರೈತರು ಆತುರ ಮಾಡದೇ ಮಾನ್ಸೂನ್‌ ಶುರುವಾದ ಮೇಲೆಯೇ ಬಿತ್ತನೆ ಮಾಡಿದರಾಯಿತು ಎಂದು ಹೊಲ ಸಿದ್ಧಪಡಿಸಿಕೊಂಡು, ಬೀಜ ಗೊಬ್ಬರ ಸಂಗ್ರಹಿಸಿಕೊಂಡು ಕೂತಿದ್ದಾರೆ. ಈ ವೇಳೆ ಒಂದೆರಡು ಉತ್ತಮ ಮಳೆಯಾದರೆ ಎಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಆಗಲಿದೆ. ಆದರೆ, ಮಳೆಯಿಲ್ಲದ್ದರಿಂದ ಬಿತ್ತನೆಗಾಗಿ ಕೆಲವು ಹಳ್ಳಿಗಳ ರೈತರು ಕಾಯುತ್ತಿದ್ದಾರೆ.

ಮಲೆನಾಡು ಭಾಗದಲ್ಲಿ ಬಿತ್ತನೆ ಚುರುಕು: ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಭಾಗದಲ್ಲಿ ಮೇ ತಿಂಗಳಲ್ಲಿ ಉತ್ತಮ ಮಳೆಯಾದ್ದರಿಂದ ಅಲ್ಲಿಯ ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ರಟ್ಟೀಹಳ್ಳಿ ತಾಲೂಕಿನಲ್ಲಿ ಜೂ. 10ರ ವರೆಗೆ ಶೇ. 70.2ರಷ್ಟು ಬಿತ್ತನೆ ಪೂರ್ಣಗೊಂಡಿದೆ. 27600 ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ಈಗಾಗಲೇ 20 ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ. ಹಿರೇಕೆರೂರು ತಾಲೂಕಿನಲ್ಲಿ ಶೇ. 68.8ರಷ್ಟು, ಶಿಗ್ಗಾಂವಿ ತಾಲೂಕಿನಲ್ಲಿ ಶೇ. 51.8ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಹಾವೇರಿ ತಾಲೂಕಿನಲ್ಲಿ ಶೇ. 29ರಷ್ಟು, ಹಾನಗಲ್ಲ ತಾಲೂಕಿನಲ್ಲಿ ಶೇ. 25.1, ಸವಣೂರು ಶೇ. 16.9, ಬ್ಯಾಡಗಿ ಶೇ. 22.1 ಹಾಗೂ ರಾಣಿಬೆನ್ನೂರಿನಲ್ಲಿ ಶೇ. 15ರಷ್ಟು ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ ಮುಂಗಾರು ಹಂಗಾಮಿನ ಬಿತ್ತನೆ ಗುರಿಯಾದ 3.28 ಲಕ್ಷ ಹೆಕ್ಟೇರ್‌ ಪೈಕಿ ಶೇ. 33ರಷ್ಟು, 106300 ಹೆಕ್ಟೇರ್‌ ಬಿತ್ತನೆಯಾಗಿದೆ.

ಗೋವಿನಜೋಳಕ್ಕೆ ಜೋತು ಬಿದ್ದಿರುವ ರೈತರು: ಪ್ರಾಕೃತಿಕ ವಿಕೋಪಗಳ ಹೊಡೆತಕ್ಕೆ ಸಿಲುಕಿ ಪ್ರತಿವರ್ಷ ಒಂದಿಲ್ಲೊಂದು ಬಗೆಯಲ್ಲಿ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ರೈತರು ಗೋವಿನಜೋಳ ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಕಡಿಮೆ ನಿರ್ವಹಣೆ, ನೀರು ಬಯಸುವ ಈ ಬೆಳೆಯತ್ತ ರೈತರು ಒಲವು ತೋರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹತ್ತಿ ಬದಲಾಗಿ ಗೋವಿನಜೋಳ ಬೆಳೆಯನ್ನೇ ಹೆಚ್ಚಾಗಿ ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ. ಈ ಸಲ ಬಿತ್ತನೆಯಾಗಿರುವ 1,06300 ಹೆಕ್ಟೇರ್‌ ಪೈಕಿ 83 ಸಾವಿರ ಹೆಕ್ಟೇರ್‌ ಗೋವಿನಜೋಳ ಬಿತ್ತನೆಯಾಗಿದೆ. ಇನ್ನುಳಿದಂತೆ ಸೋಯಾಬಿನ್‌ 6300 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, 2809 ಹೆಕ್ಟೇರ್‌ನಲ್ಲಿ ಹತ್ತಿ, 1356 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿದೆ.ಮಳೆಯಾಗದಿದ್ದರೆ ಸಮಸ್ಯೆ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿಂತಿದ್ದ ಮಳೆ ಬುಧವಾರ ಶುರುವಾಗಿದೆ. ಬುಧವಾರ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಎಲ್ಲ ಕಡೆ ಮಳೆ ವಾತಾವರಣ ನಿರ್ಮಾಣವಾಗಿದೆ. ಈ ಹಂತದಲ್ಲಿ ಮಳೆಯಾಗದಿದ್ದರೆ ಈಗಾಗಲೇ ಬಿತ್ತನೆ ಮಾಡಿದವರಿಗೆ ಸಮಸ್ಯೆಯಾಗಲಿದೆ. ಮೊಳಕೆ ಸಸಿಯಾಗದೇ ಕಮರಿ ಹೋಗುವ ಸಾಧ್ಯತೆಯಿದೆ. ಆಗ ಮತ್ತೆ ಮಳೆಯಾಗುವವರೆಗೆ ಕಾದು ಮರು ಬಿತ್ತನೆ ಮಾಡಬೇಕಾಗಲಿದೆ. ಇದರಿಂದ ರೈತರು ಬಿತ್ತನೆಗಾಗಿ ದುಪ್ಪಟ್ಟು ಖರ್ಚು ಮಾಡಬೇಕಾಗುತ್ತದೆ. ಈ ಹಿಂದೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎರಡು, ಮೂರು ಬಾರಿ ಬಿತ್ತನೆ ಮಾಡಿದ ಉದಾಹರಣೆಗಳಿವೆ. ಗುರುವಾರದಿಂದ ಮತ್ತೆ ಮಳೆ:

ಮೇ ತಿಂಗಳಲ್ಲಿ ಉತ್ತಮ ಮಳೆಯಾದ್ದರಿಂದ ಬಿತ್ತನೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಅದರಲ್ಲೂ ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾಂವಿ ತಾಲೂಕುಗಳಲ್ಲಿ ಮುಕ್ಕಾಲು ಭಾಗ ಬಿತ್ತನೆ ಪೂರ್ಣಗೊಂಡಿದೆ. ಗುರುವಾರದಿಂದ ಮತ್ತೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಇರುವುದರಿಂದ ಸದ್ಯಕ್ಕೆ ತೊಂದರೆ ಕಾಣುತ್ತಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರಾದ ಮಲ್ಲಿಕಾರ್ಜುನ ಕೆ. ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''