ವಿಘ್ನೇಶ್ ಎಂ. ಭೂತನಕಾಡು
ಕಾರ್ಮಿಕರ ಕೊರತೆ, ವನ್ಯಪ್ರಾಣಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಅಕಾಲಿಕ ಮಳೆ ಆಘಾತ ನೀಡಿದೆ. ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೊಯ್ಲಿ ಮಾಡಿದ ಕಾಫಿ ಫಸಲನ್ನು ಉಳಿಸಿಕೊಳ್ಳಲು ಜಿಲ್ಲೆಯ ಬೆಳೆಗಾರರು ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಇದೀಗ ಕಾಫಿ ಕೊಯ್ಲು ಕಾರ್ಯ ಭರದಿಂದ ನಡೆಯುತ್ತಿದೆ. ಅರೇಬಿಕಾ ಕಾಫಿ ಕೊಯ್ಲು ಮುಕ್ತಾಯದ ಹಂತದಲ್ಲಿದೆ. ರೋಬೆಸ್ಟಾ ಕಾಫಿ ಕೊಯ್ಲು ನಡೆಯುತ್ತಿದೆ. ಆದರೆ ಇದೀಗ ಮೋಡ ಹಾಗೂ ಮಳೆ ವಾತಾವರಣದಿಂದಾಗಿ ಕೊಯ್ಲು ಮಾಡಿದ ಕಾಫಿ ಒಣಗಿಸಲಾಗದ ಪರಿಸ್ಥಿತಿಯಲ್ಲಿ ಜಿಲ್ಲೆಯ ಬೆಳೆಗಾರರಿದ್ದು, ಮಳೆಯಾಟಕ್ಕೆ ಸಮಸ್ಯೆ ಅನುಭವಿಸುವಂತಾಗಿದೆ. ಜಿಲ್ಲೆಯ ನಾಪೋಕ್ಲು, ಕೊಡ್ಲಿಪೇಟೆ, ಅಯ್ಯಂಗೇರಿ, ಚೆಯ್ಯಂಡಾಣೆ ಸೇರಿದಂತೆ ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಒಣಗಲು ಹಾಕಿದ್ದ ಕಾಫಿ ಫಸಲು ಮಳೆಯಲ್ಲಿ ಒದ್ದೆಯಾಗಿ ಸರಿಯಾದ ಸಮಯಕ್ಕೆ ಒಣಗುತ್ತಿಲ್ಲ. ಈ ಅವಧಿಯಲ್ಲಿ ಕಾಫಿ ಒಣಗಿಸುವುದು ದೊಡ್ಡ ಸವಾಲಾಗಿದೆ. ವಿಶೇಷವಾಗಿ ಅಕಾಲಿಕ ಮಳೆ ಅಥವಾ ಮೋಡ ಕವಿದ ವಾತಾವರಣವಿದ್ದಾಗ, ಬೆಳೆಗಾರರು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕುತ್ತಾರೆ. ಏಕೆಂದರೆ ಸೂರ್ಯನ ಬೆಳಕಿನ ಕೊರತೆ ಮತ್ತು ತೇವಾಂಶದಿಂದ ಕಾಫಿ ಹಾಳಾಗುವ ಸಾಧ್ಯತೆ ಇರುತ್ತದೆ, ಹೀಗಾಗಿ ಬೆಳೆಗಾರರು ಒಣಗಿಸಲು ಕೃತಕ ವಿಧಾನಗಳಾದ ಬೀಸಣಿಕೆ ಬಳಸುತ್ತಾರೆ, ಆದರೆ ಇದಕ್ಕೆ ಹೆಚ್ಚಿನ ಶ್ರಮ, ಸಮಯ ಮತ್ತು ಹಣ ಬೇಕಾಗುತ್ತದೆ. ಮಳೆ ಬಂದರೆ ಕಾಫಿ ಬೀಜಗಳು ಕೊಚ್ಚಿಹೋಗುತ್ತವೆ, ಇದು ರೈತರಿಗೆ ಆರ್ಥಿಕ ನಷ್ಟ ತರುತ್ತದೆ.ಜನವರಿ ತಿಂಗಳಲ್ಲಿಯೂ ಮಳೆ ಬಂದರೆ, ಒಣಗಿಸುವ ಪ್ರಕ್ರಿಯೆ ನಿಂತುಹೋಗುತ್ತದೆ, ಮತ್ತು ಕಾಫಿ ಬೀಜಗಳು ಮಳೆಯಲ್ಲಿ ಕೊಚ್ಚಿ ಹೋಗಬಹುದು. ಸೂರ್ಯನ ಬಿಸಿಲು ಇಲ್ಲದಿದ್ದರೆ, ಕಾಫಿ ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ತೇವಾಂಶ ಹೆಚ್ಚಾಗಿ ಶಿಲೀಂಧ್ರದ ಸಮಸ್ಯೆಯಾಗಬಹುದು. ಬಿಸಿಲಿನಲ್ಲಿ ಒಣಗಿಸಲು 4-5 ದಿನ ಬೇಕಾಗಬಹುದು ಮತ್ತು ನಿರಂತರವಾಗಿ ಕಾಫಿಯನ್ನು ತಿರುಗಿಸಬೇಕು, ಇದು ಹೆಚ್ಚು ಕೆಲಸವನ್ನು ಬಯಸುತ್ತದೆ. ಕಾಫಿಯ ತೇವಾಂಶವನ್ನು 11-12% ಕ್ಕೆ ಇಳಿಸಬೇಕು, ಇಲ್ಲದಿದ್ದರೆ ಗುಣಮಟ್ಟ ಹಾಳಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಕಾಲಿಕ ಮಳೆ ಬಂದ ಸಂದರ್ಭದಲ್ಲಿ ಕಾಫಿ ಒಣಗಿಸಲು ಪರಿತಪಿಸುವ ಬೆಳೆಗಾರರು ಡ್ರೈಯರ್ ಗಳ ಮೊರೆ ಹೋಗಬೇಕಾಗುತ್ತದೆ. ಆದರೆ ಸಣ್ಣ ಬೆಳೆಗಾರರಿಗೆ ಯಾಂತ್ರಿಕ ಡ್ರೈಯರ್‌ಗಳು ಬಲು ದುಬಾರಿಯಾಗಿವೆ, ಮತ್ತು ಸಾಂಪ್ರದಾಯಿಕ ವಿಧಾನಗಳು ಹವಾಮಾನದ ಮೇಲೆ ಅವಲಂಬಿತವಾಗಿವೆ. ರಿಂದ ಸಣ್ಣ ಬೆಳೆಗಾರರು ತಮ್ಮ ಕಾಫಿ ಕಣದಲ್ಲೇ ಕಾಫಿಯನ್ನು ಒಣಗಿಸುವ ಪರಿಸ್ಥಿತಿ ಉಂಟಾಗಿದೆ. ಕಾಫಿ ಒಣಗಿಸುವಿಕೆ ಒಂದು ಕಷ್ಟಕರವಾದ ಪ್ರಕ್ರಿಯೆಯಾಗಿದೆ. ಹವಾಮಾನದ ವ್ಯಪರೀತ್ಯ ಬೆಳೆಗಾರರ ಆದಾಯಕ್ಕೆ ದೊಡ್ಡ ಹೊಡೆತ ನೀಡುತ್ತದೆ.ಹೀಗೆ ಮತ್ತೆ ಜಿಲ್ಲೆಯಲ್ಲಿ ಮಳೆಯಾದರೆ ಕೊಯ್ಲು ಮಾಡಿದ ಫಸಲು ಮಳೆಯಿಂದ ಕೊಚ್ಚಿ ಹೋಗುವ ಭೀತಿ ಉಂಟಾಗಿದ್ದು, ಫಸಲು ಸಂರಕ್ಷಿಸಿಕೊಳ್ಳಲು ಬೆಳೆಗಾರರು ಪರಿತಪಿಸುವಂತಾಗಿದೆ. ಬೆಳಗ್ಗೆ ಕಣದಲ್ಲಿ ಒಣಗಿಸಲು ಹಾಕಿರುತ್ತಾರೆ. ಆದರೆ ದಿಢೀರ್ ಆಗಿ ಮಳೆ ಬಂದರೆ ಏನೂ ಕೂಡ ಮಾಡಲಾಗದ ದುಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ.
ಜಿಲ್ಲೆಯಲ್ಲಿ ಭತ್ತದ ಕಟಾವು ಕಾರ್ಯವನ್ನು ಕೂಡ ಮಾಡಲಾಗಿದೆ. ಫಸಲನ್ನು ಒಣಗಿಸಲು ಗದ್ದೆಯಲ್ಲೇ ಬಿಟ್ಟಿದ್ದಾರೆ. ಇದೀಗ ಮಳೆಯಿಂದಾಗಿ ಫಸಲು ಒಣಗದೆ ಭತ್ತ ಮೊಳಕೆಯೊಡೆಯುವ ಸಾಧ್ಯತೆಯಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿಯಲ್ಲಿ ಬೆಳೆಗಾರರು ಕೃಷಿ ಕಾಯಕವನ್ನು ಮುಂದುವರಿಸಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಕಾಫಿ ಹೂವು ಅರಳುವ ಆತಂಕ!ಕಾಫಿ ಕೊಯ್ಲು ಮುಗಿದ ನಂತರ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಹೂವು ಅರಳಬೇಕು. ಆದರೆ ಇದೀಗ ಕೆಲವೆಡೆ ಮಳೆಯಾಗಿರುವುದರಿಂದ ಈ ಪ್ರದೇಶದಲ್ಲಿ ಕಾಫಿ ಫಸಲಿನ ಅರ್ಧ ಪ್ರಮಾಣದಷ್ಟು ಹೂವು ಅರಳುತ್ತದೆ. ಕೆಲವು ಕಡೆ ಇನ್ನೂ ಕಾಫಿ ಕೊಯ್ಲು ಪೂರ್ಣಗೊಂಡಿಲ್ಲ. ಕೆಲವೆಡೆ ಮಳೆ ಸುರಿದ ಕಾರಣದಿಂದ ಎರಡು ಮೂರು ದಿನ ಕಾಫಿ ಕೊಯ್ಲು ಮಾಡಲು ಆಗುವುದಿಲ್ಲ. ಇದೀಗ ಹೂವು ಅರಳಿ ಮುಂದಿನ ಬಾರಿಯ ಫಸಲು ಅರ್ಧದಷ್ಟು ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಕೆಲವು ಬೆಳೆಗಾರರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ನಮ್ಮಲ್ಲಿ ಇನ್ನೂ ಕಾಫಿ ಕೊಯ್ಲು ಕಾರ್ಯ ಆಗಿಲ್ಲ. ಮತ್ತೊಂದು ಕಡೆ ಕಾಫಿ ಫಸಲು ಒಣಗಿಸಲು ಜಾಗದ ಕೊರತೆಯೂ ಇದೆ. ಇದೀಗ ಮಳೆಯಿಂದ ಅರ್ಧ ಹೂ ಬಂದರೆ ಇನ್ನರ್ಧ ವ್ಯರ್ಥವಾಗುವಂತಾಗುತ್ತದೆ. ಎರಡು ಮೂರು ದಿನಗಳ ಕಾಲ ಕಾಫಿ ಕೊಯ್ಲು ಮಾಡಲು ಸಾಧ್ಯವಿಲ್ಲ. ಅರ್ಧ ಹೂವು ಅರಳಿದರೆ ಮುಂದಿನ ಬಾರಿಯ ಫಸಲಿಗೂ ಹಾನಿಯಾಗುತ್ತದೆ. ಮಳೆಯಿಂದ ಕಾಫಿ ಫಸಲು ಕೂಡ ಒಡೆದು ನೆಲಕಚ್ಚುತ್ತದೆ. ಕಟಾವು ಮಾಡಿದ ಭತ್ತ ಒಣಗಲು ಇನ್ನೂ ಒಂದು ವಾರ ಬೇಕಾಗುತ್ತದೆ.
-ಕಾವೇರಿಮನೆ ಭರತ್, ಕಾಫಿ ಬೆಳೆಗಾರ ಅಯ್ಯಂಗೇರಿ ಗ್ರಾಮ