ಗದಗ: ತ್ಯಾಗವೀರ ಸಿರಸಂಗಿ ಲಿಂಗರಾಜರು ಜೀವನದುದ್ದಕ್ಕೂ ಮೈಗೂಡಿಸಿಕೊಂಡಿದ್ದ ದಾನದ ಗುಣದಿಂದ ಅವರು ದೇವಮಾನವರಾದರು. ಅವರ ಜೀವನ ಒಂದು ಮಹಾಕಾವ್ಯ ರಚಿಸುವಷ್ಟು ವಿಷಯ ವೈವಿಧ್ಯತೆಯಿಂದ ಕೂಡಿದೆ ಎಂದು ಮುಳಗುಂದ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ. ವಿ.ಕೆ. ದ್ಯಾಮನಗೌಡ್ರ ಹೇಳಿದರು.
ದೇಶಗತ್ತಿ ಮನೆತನದ ರಾಜರಾಗಿದ್ದ ಲಿಂಗರಾಜರು ಪ್ರಜೆಗಳ ಉದ್ಧಾರಕ್ಕಾಗಿ ನಿರಂತರವಾಗಿ ದುಡಿದರು. ಕೊಕಟನೂರು, ಸವದತ್ತಿ, ನವಲಗುಂದ ದೇಶಗತ್ತಿ ಮನೆತನಗಳ ಜವಾಬ್ದಾರಿ ಇವರ ಹೆಗಲ ಮೇಲಿತ್ತು. ಬರಗಾಲದ ಸಮಯದಲ್ಲಿ ಜನಗಳಿಗೆ ಉದ್ಯೋಗ ಕೊಡುವುದರೊಂದಿಗೆ ಕೆರೆಗಳನ್ನು ನಿರ್ಮಿಸಿ ನೀರಿನ ಅಭಾವ ದೂರ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಜಿ. ಪಾಟೀಲ ಮಾತನಾಡಿ, ತ್ಯಾಗವೀರ ಲಿಂಗರಾಜರ ಗುಣಗಳು ಇಡೀ ಸಮಾಜಕ್ಕೆ ಮಾದರಿಯಾಗುವಂಥವು. ರಾಜ್ಯ ಸರ್ಕಾರ ಲಿಂಗರಾಜರ ಜಯಂತಿ ಸರ್ಕಾರದ ಮಟ್ಟದಲ್ಲಿ ಆಚರಿಸಬೇಕು. ರಾಜ್ಯದ ತುಂಬೆಲ್ಲ ಶಾಲಾ ಕಾಲೇಜುಗಳಲ್ಲಿ ಆಚರಿಸಬೇಕು ಎಂದರು.ಪ್ರಾಚಾರ್ಯ ಎಸ್.ಬಿ. ಹಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ ಹಾಗೂ ಐಎಂಎ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಒಟ್ಟು 52 ಜನ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.ನೇತ್ರಾ ನಾಗಲೋಟಿಮಠ ಹಾಗೂ ಸಂಗೀತ ವಣಗೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಡಾ. ಎ.ಕೆ. ಮಠ ಸ್ವಾಗತಿಸಿದರು. ಡಾ. ಸಂಜೀವ ಹುಲ್ಲೂರ ವಂದಿಸಿದರು.