ಗದಗ ಮಾರುಕಟ್ಟೆಯಲ್ಲಿ ಬುಧವಾರ ಕ್ವಿಂಟಲ್ಗೆ ₹600ರಿಂದ 3700ಕ್ಕೆ ಸಗಟು ದರ ಇಳಿಕೆ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗರಾಜ್ಯದಲ್ಲೇ ಪ್ರಮುಖ ಈರುಳ್ಳಿ ಬೆಳೆಯುವ ಜಿಲ್ಲೆಯೆಂಬ ಹೆಗ್ಗಳಿಕೆ ಹೊಂದಿರುವ ಗದಗದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಇದೀಗ ಮಾರುಕಟ್ಟೆ ದರವೂ ಮತ್ತೊಂದು ಆಘಾತ ನೀಡಿದೆ. ಕಳೆದೊಂದು ವಾರದಿಂದ ಕ್ವಿಂಟಲ್ಗೆ 2500 ರಿಂದ 4500 ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ದರ ಬುಧವಾರ ಏಕಾಏಕಿ ಕುಸಿದಿದೆ.
ಮಳೆ ಕೊರತೆಯಿಂದ ಬೆಳೆ ಬಹುತೇಕ ಒಣಗಿ ಹೋಗಿದ್ದು, ಅಳಿದುಳಿದ ಬೆಳೆಯನ್ನಾದರೂ ಉತ್ತಮ ದರಕ್ಕೆ ಮಾರಾಟ ಮಾಡಿ ನಷ್ಟ ಸರಿದೂಗಿಸಿಕೊಳ್ಳಬಹುದು ಎಂಬ ರೈತರ ನಿರೀಕ್ಷೆಗೂ ದರ ಕುಸಿತದಿಂದ ಹೊಡೆತ ಬಿದ್ದಿದೆ.
ಕಳೆದ ವಾರ ₹4500ರವರೆಗೆ ತಲುಪಿದ್ದ ಈರುಳ್ಳಿ ದರ ಬುಧವಾರ ಕೆಲ ಗುಣಮಟ್ಟದ ಉತ್ಪನ್ನಗಳಿಗೆ ₹3700 ರವರೆಗೆ ಮಾತ್ರ ದೊರೆತಿದೆ. ಕಡಿಮೆ ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್ ಗೆ ₹600ರಷ್ಟು ಕನಿಷ್ಠ ದರ ದಾಖಲಾಗಿದೆ. ಇದರಿಂದಾಗಿ ಕೆಲ ದಿನಗಳಲ್ಲೇ ₹1000ರಿಂದ 2000ರವರೆಗೆ ವ್ಯತ್ಯಾಸ ಉಂಟಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿದಿದ್ದರೂ ಗ್ರಾಹಕರಿಗೆ ಮಾತ್ರ ಅದರ ಲಾಭ ಸಿಗುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ 50ಕ್ಕೂ ಹೆಚ್ಚಿನ ದರದಲ್ಲಿಯೇ ಮಾರಾಟವಾಗುತ್ತಿದೆ. ರೈತರಿಂದ ಕಡಿಮೆ ದರಕ್ಕೆ ಖರೀದಿಯಾದ ಈರುಳ್ಳಿ ಗ್ರಾಹಕರ ಕೈ ಸೇರುವ ವೇಳೆಗೆ ದುಬಾರಿಯಾಗುತ್ತಿದೆ. ಈ ವ್ಯತ್ಯಾಸದ ಹಣ ಮಧ್ಯವರ್ತಿಗಳು ಮತ್ತು ಖರೀದಿದಾರರ ಪಾಲಾಗುತ್ತಿದೆ.
ಈರುಳ್ಳಿ ದರ ಉತ್ತಮವಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ, ರೈತರು ಒಂದೇ ಬಾರಿಗೆ ಎಲ್ಲರೂ ಈರುಳ್ಳಿ ಕಿತ್ತು ಮಾರುಕಟ್ಟೆಗೆ ತರಲು ಮುಂದಾಗಿದ್ದಾರೆ. ಇದರಿಂದ ಮಾರುಕಟ್ಟೆಗೆ ಏಕಾಏಕಿ ಆವಕ ಹೆಚ್ಚಾಗಿ ದರದ ಮೇಲೆ ಒತ್ತಡ ಉಂಟಾಗಿದೆ. ಅಲ್ಲದೆ, ಸಂಪೂರ್ಣವಾಗಿ ಒಣಗದ, ಹಸಿ ಈರುಳ್ಳಿಯನ್ನೂ ರೈತರು ಮಾರುಕಟ್ಟೆಗೆ ತರುತ್ತಿರುವುದು ಗುಣಮಟ್ಟದ ಆಧಾರದ ಮೇಲೆ ದರ ವ್ಯತ್ಯಾಸಕ್ಕೆ ಕಾರಣವಾಗುತ್ತಿದೆ. ಈರುಳ್ಳಿಯನ್ನು ಮಾರುಕಟ್ಟೆಗೆ ತರುವ ಮುನ್ನ ಗ್ರೇಡಿಂಗ್ ಮಾಡಿ, ಹಸಿ ಮತ್ತು ಒಣ ಈರುಳ್ಳಿಯನ್ನು ಪ್ರತ್ಯೇಕವಾಗಿ ತರಬೇಕು ಎಂದು ವ್ಯಾಪಾರಸ್ಥರು ಸಲಹೆ ನೀಡಿದ್ದಾರೆ.
ಪ್ರಸಕ್ತ ಸಾಲಿನ ಮುಂಗಾರಿಲನಲ್ಲಿ ವಾಡಿಕೆ 121.4 ಮಿಮೀ ಮಳೆ ಆಗಬೇಕಿತ್ತು, ಆದರೆ ಆಗಿರುವುದು ಕೇವಲ 82.50 ಮಿಮೀ ಮಳೆ, ಶೇ.32ರಷ್ಟು ಕೊರತೆ ದಾಖಲಾಗಿದೆ. ನಂತರವೂ ಮಳೆ ಕೊರತೆ ಮುಂದುವರಿದ ಪರಿಣಾಮ ಜಿಲ್ಲೆಯ ಹಲವು ಭಾಗಗಳಲ್ಲಿ ಈರುಳ್ಳಿ ಸೇರಿದಂತೆ ಪ್ರಮುಖ ಬೆಳೆಗಳು ಒಣಗಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ಬೆಳೆ ನಷ್ಟ 218 ಕೋಟಿಗೂ ಅಧಿಕವಾಗಿದ್ದು, 2.40 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ.ಗದಗ ಪ್ರಮುಖ ಈರುಳ್ಳಿ ಉತ್ಪಾದನಾ ಕೇಂದ್ರ