ಸಗಣಿ ಗೊಬ್ಬರದತ್ತ ರೈತರ ಒಲವು, ಹೆಚ್ಚಿದ ಬೇಡಿಕೆ

KannadaprabhaNewsNetwork | Published : Apr 16, 2025 12:30 AM

ಸಾರಾಂಶ

ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿದ್ದು, ಸಾವಯವ ಕೃಷಿ ಪದ್ಧತಿ ಅಳವಡಿಕೆಯಾಗುತ್ತಿದ್ದಂತೆ ಮತ್ತೆ ರೈತರು ಸಾಂಪ್ರದಾಯಿಕವಾಗಿ ಸಗಣಿ ಗೊಬ್ಬರದತ್ತ ಗಮನ ನೀಡುತ್ತಿದ್ದಾರೆ. ಆದರೆ, ಹಿಂದಿನಂತೆ ಹಳ್ಳಿಗಳಲ್ಲಿ ಈಗ ಜಾನುವಾರುಗಳಿಲ್ಲ. ಸಗಣಿ ಗೊಬ್ಬರದ ಕೊರತೆ ಉಂಟಾದ ಪರಿಣಾಮ ಕೊಟ್ಟಿಗೆ ಗೊಬ್ಬರದ ಬೆಲೆ ಏರಿಕೆಯಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಕಾರಣಕ್ಕೆ ಗ್ರಾಮೀಣ ಭಾಗದ ರೈತರು ಸಗಣಿ ಗೊಬ್ಬರದತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ ಸಗಣಿ ಗೊಬ್ಬರಕ್ಕೆ ಎಲ್ಲಿಲ್ಲದೆ ಬೇಡಿಕೆ ಬಂದಿದೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಾವಯವ ಕೃಷಿ ಪದ್ಧತಿ ಅಳವಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಸಗಣಿ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ ರೈತರು ಸಗಣಿ ತಿಪ್ಪೆ ಗೊಬ್ಬರ ಖರೀದಿಸಿ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಹೊಲ, ತೋಟಗಳಿಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.

ಬೆಲೆ ಏರಿಕೆ:

ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿದ್ದು, ಸಾವಯವ ಕೃಷಿ ಪದ್ಧತಿ ಅಳವಡಿಕೆಯಾಗುತ್ತಿದ್ದಂತೆ ಮತ್ತೆ ರೈತರು ಸಾಂಪ್ರದಾಯಿಕವಾಗಿ ಸಗಣಿ ಗೊಬ್ಬರದತ್ತ ಗಮನ ನೀಡುತ್ತಿದ್ದಾರೆ. ಆದರೆ, ಹಿಂದಿನಂತೆ ಹಳ್ಳಿಗಳಲ್ಲಿ ಈಗ ಜಾನುವಾರುಗಳಿಲ್ಲ. ಸಗಣಿ ಗೊಬ್ಬರದ ಕೊರತೆ ಉಂಟಾದ ಪರಿಣಾಮ ಕೊಟ್ಟಿಗೆ ಗೊಬ್ಬರದ ಬೆಲೆ ಏರಿಕೆಯಾಗಿದೆ. ಒಂದು ಟ್ರ್ಯಾಕ್ಟರ್‌ ಸಗಣಿ ಗೊಬ್ಬರ ಮೊದಲು ₹2ರಿಂದ ₹ 3 ಸಾವಿರಕ್ಕೆ ಸಿಗುತ್ತಿತ್ತು. ಇದೀಗ ಅದರ ಬೆಲೆ ₹ 6ರಿಂದ 7 ಸಾವಿರಕ್ಕೆ ಏರಿದೆ. ಅಲ್ಲದೆ ಲಭ್ಯತೆ ಕಡಿಮೆ ಇದೆ. ರೈತರು ಗೊಬ್ಬರಕ್ಕಾಗಿ ಹುಡುಕಾಟ ನಡೆಸುತ್ತಾರೆ, ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಖರೀದಿಕೊಂಡು ಬರುತ್ತಿದ್ದಾರೆ.

ಭೂಮಿ ಸಿದ್ಧತೆ:

ರೈತರು ಯುಗಾದಿ ಹಬ್ಬದ ವೇಳೆ ಕೊಟ್ಟಿಗೆ ಗೊಬ್ಬರ ಸಂಸ್ಕರಿಸಿ ಹೊಲಕ್ಕೆ ಹಾಕುವುದು ಸಂಪ್ರದಾಯ. ಸದ್ಯ ತಾಲೂಕಿನಲ್ಲಿ ಸ್ವಲ್ಪ ಮಳೆಯಾದ ಪರಿಣಾಮ ರೈತರು ಹೊಲ ಹದಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ಸಗಣಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಬೆಳೆಗಳ ಬಿತ್ತನೆಯ 3ರಿಂದ 4 ವಾರದ ಮುಂಚೆಯೇ ಕೊಟ್ಟಿಗೆಯ ಗೊಬ್ಬರವನ್ನು ಹೊಲಕ್ಕೆ ಹಾಕಬೇಕು. ಕೊಟ್ಟಿಗೆ ಗೊಬ್ಬರವು ತೇವಾಂಶಯುತ ಮಣ್ಣಿನಲ್ಲಿ ಚೆನ್ನಾಗಿ ಕೊಳೆಯುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಬಿತ್ತನೆ ಮಾಡಿದ ಸಸಿಗಳು ಹುಲುಸಾಗಿ ಬೆಳೆಯುತ್ತದೆ. ಕೊಟ್ಟಿಗೆ ಗೊಬ್ಬರವು ಗಿಡಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಸಗಣಿ ಗೊಬ್ಬರ ಹೆಚ್ಚು ಬಳಸಲಾರಂಭಿಸಿದ್ದಾರೆ.

ಜಮೀನಿಗೆ ಜಾನುವಾರುಗಳ ಹಿಂಡು:

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ರೈತರು ಕೆಲಕಾಲ ಸಗಣಿ ಗೊಬ್ಬರ ಮರೆತಿದ್ದರು. ಈಗ ಮತ್ತೆ ಹಳೆಯ ಸಂಪ್ರದಾಯ ಅಳವಡಿಸಲು ಆಸಕ್ತಿ ತೋರಿಸುತ್ತಿದ್ದಾರೆ. ರೈತರು ಜಮೀನುಗಳಲ್ಲಿ ಕುರಿ ಅಥವಾ ಹಸುಗಳ ಹಿಂಡು ನಿಲ್ಲಿಸುವ ಮೂಲಕ ಸಗಣಿ ಗೊಬ್ಬರ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಹಸು, ಕುರಿಗಳ ಮಾಲೀಕರಿಗೆ ಹಣ ಅಥವಾ ಧಾನ್ಯ ನೀಡುತ್ತಾರೆ. ಕೆಲವರು ಸಾವಿರಾರು ರುಪಾಯಿ ಖರ್ಚು ಮಾಡಿ ಸಗಣಿ ಗೊಬ್ಬರ ಖರೀದಿಸುತ್ತಿದ್ದಾರೆ.ನಮ್ಮ ಹೊಲಕ್ಕೆ ಪ್ರತಿ ಎರಡ್ಮೂರು ವರ್ಷಗಳಿಗೊಮ್ಮೆ ಸಗಣಿ ಗೊಬ್ಬರ ಹಾಕುತ್ತೇವೆ. ಇದರಿಂದ ಬೆಳೆಗಳಿಗೆ ರೋಗ-ರುಜಿನ ಬರುವುದು ಕಡಿಮೆ. ಈ ಪದ್ಧತಿಯನ್ನು ಹಿರಿಯರು ಅನುಸರಿಸಿಕೊಂಡು ಬಂದಿದ್ದು, ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.

ಬಸನಗೌಡ ಪೊಲೀಸ್‌ಪಾಟೀಲ ದೋಟಿಹಾಳ ರೈತ

ಆಧುನಿಕತೆಗೆ ಮಾರು ಹೋದ ಜನರು ಜಾನುವಾರು ಸಾಕುವುದು ಕಡಿಮೆ ಮಾಡಿದ್ದರಿಂದ ಸಗಣಿ ಗೊಬ್ಬರದ ದರ ಏರಿಕೆಯಾಗಿದೆ. ರಾಸಾಯನಿಕ ಗೊಬ್ಬರಗಳಿಗಿಂತ ಕೊಟ್ಟಿಗೆ ಗೊಬ್ಬರ ಬಳಸುವುದು ಬಹಳಷ್ಟು ಸೂಕ್ತವಾಗಿದೆ.

ಶರಣಪ್ಪ ಬಿಜಕಲ್ಲ ಗ್ರಾಮದ ರೈತ

Share this article