ಅಧಿಕ ಮೌಲ್ಯದ ಹಣ್ಣು ಬೆಳೆದರೆ ರೈತರ ಆದಾಯ ದ್ವಿಗುಣ : ಎಸ್.ಕೆ. ಸಿಂಗ್

KannadaprabhaNewsNetwork |  
Published : Jun 16, 2024, 01:48 AM IST
ಚಿತ್ರ : 15ಎಂಡಿಕೆ4 : ಚೆಟ್ಟಳ್ಳಿಯಲ್ಲಿ  ಬೆಣ್ಣೆಹಣ್ಣು ಪ್ರದರ್ಶನಕ್ಕೆ ಚಾಲನೆ ನೀಡಿದ ಸಂದರ್ಭ.  | Kannada Prabha

ಸಾರಾಂಶ

ಭಾರತ ಮುಂದಿನ 15 ವರ್ಷದಲ್ಲಿ ಫುಡ್‌ ಹಬ್‌ ಆಗಿ ಬದಲಾಗಲಿದೆ. ಆದ್ದರಿಂದ ಅಧಿಕ ಮೌಲ್ಯವಿರುವ ಹಣ್ಣನ್ನು ಬೆಳೆಯಲು ಮುಂದಾಗಬೇಕು ಎಂದು ಡಾ. ಎಸ್‌.ಕೆ. ಸಿಂಗ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕ ಪ್ರಾಯೋಗಿಕ ಕೇಂದ್ರದಲ್ಲಿ ಶನಿವಾರ ಬೆಣ್ಣೆಹಣ್ಣು ಕ್ಷೇತ್ರೋತ್ಸವ ಹಾಗೂ ವೈವಿಧ್ಯತೆ ಮೇಳ ನಡೆಯಿತು.

ಕಾರ್ಯಕ್ರಮದಲ್ಲಿ ನವದೆಹಲಿ ಭಾ.ಕೃ.ಅನು.ಪ.(ತೋಟಗಾರಿಕೆ) ಮಹಾ ನಿರ್ದೇಶಕರಾದ ಡಾ.ಎಸ್.ಕೆ. ಸಿಂಗ್ ಮಾತನಾಡಿ ಭಾರತ, ಮುಂದಿನ 15 ವರ್ಷದಲ್ಲಿ ಫುಡ್ ಹಬ್ ಆಗಿ ಬದಲಾಗಲಿದೆ. ಆದ್ದರಿಂದ ಅಧಿಕ ಮೌಲವಿರುವ ಹಣ್ಣುಗಳನ್ನು ಬೆಳೆಯಲು ಬೆಳೆಗಾರರು ಮುಂದಾಗಬೇಕು. ಇದರಿಂದ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದು ಎಂದು ಹೇಳಿದರು.

ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘವನ್ನು ಆರಂಭಿಸಲಾಗಿದ್ದು, ಬೆಳೆಗಾರರು ಸಂಘದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು. ರೈತರು ನೇರವಾಗಿ ಹಣ್ಣಿನ ಗಿಡಗಳನ್ನು ಖರೀದಿ ಮಾಡಿದರೆ ಹೆಚ್ಚು ವೆಚ್ಚ ಆಗುತ್ತದೆ. ಆದರೆ ಸಂಘದ ಮೂಲಕ ಎಲ್ಲರೂ ಒಗ್ಗೂಡಿ ಖರೀದಿಸಿದಾಗ ವೆಚ್ಚ ಕಡಿಮೆಯಾಗಲಿದೆ. ಅಲ್ಲದೆ ಇದರಿಂದ ಇತರೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕೊಡಗು ಸೇರಿದಂತೆ ರಾಜ್ಯದ ಪ್ರಮುಖ ಆಯ್ದ ಭಾಗದಲ್ಲಿ ಆಫ್ ಸೀಸನ್ ಲಿಚ್ಚಿ, ಬಟರ್ ಫ್ರೂಟ್ ಸೇರಿದಂತೆ ಅಧಿಕ ಮೌಲ್ಯದ ಹಣ್ಣುಗಳನ್ನು ಬೆಳೆಯಬಹುದಾಗಿದೆ. ಆದ್ದರಿಂದ ಹೆಚ್ಚು ಬೇಡಿಕೆ ಇರುವ ಹಣ್ಣುಗಳನ್ನು ಬೆಳೆಯಲು ರೈತರು ಉತ್ಸುಕತೆ ತೋರಬೇಕೆಂದು ಸಲಹೆ ನೀಡಿದರು.

ಭಾರತ ಸರ್ಕಾರದ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ ನ ನಿರ್ದೇಶಕ ಕೆ.ಎನ್.ವರ್ಮ ಮಾತನಾಡಿ ರೈತರಿಗೆ ಉತ್ತಮ ಗುಣಮಟ್ಟದ ಹಣ್ಣಿನ ಗಿಡಗಳನ್ನು ನೀಡುವುದು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಪೂರಕ ಕೆಲಸ ಮಾಡಲಾಗುವುದು. ಎಂಐಡಿಹೆಚ್ ಯೋಜನೆಯಡಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮಾತನಾಡಿ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ ಚೆಟ್ಟಳ್ಳಿ ಕೇಂದ್ರವನ್ನು ಆರಂಭಿಸಲಾಗಿತ್ತು. ಕೊಡಗಿನ ಕಿತ್ತಳೆ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ಮರೆಯಾಗಿದೆ. ಆದ್ದರಿಂದ ಚೆಟ್ಟಳ್ಳಿ ಕೇಂದ್ರದಿಂದ ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಮೂರು ವರ್ಷಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿರುವುದು ಶ್ಲಾಘನೀಯ ಎಂದರು.

ಯಾವುದೇ ಬೆಳೆ ಇರಲಿ. ಇತ್ತೀಚಿನ ದಿನಗಳಲ್ಲಿ ಕೃಷಿಕರಿಗೆ ಮಾರುಕಟ್ಟೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಚೆಟ್ಟಳ್ಳಿಯಲ್ಲಿ ವಿದೇಶಿ ತೋಟಗಾರಿಕಾ ಬೆಳೆಗಾರರು ಅಭಿವೃದ್ಧಿ ಸಂಘವನ್ನು ಆರಂಭಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಬೆಳೆಗಾರರು ಪಡೆದುಕೊಳ್ಳುವಂತೆ ಕರೆ ನೀಡಿದರು.

ಐಸಿಎಆರ್ ಹಣ್ಣಿನ ವಿಭಾಗದ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಪ್ರಕಾಶ್ ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಮೂಲಕ ಸ್ವದೇಶಿ ವಸ್ತುಗಳ ಉತ್ಪಾದನೆ ಉತ್ತೇಜಿಸುತ್ತದೆ. ಅದರಂತೆ ನಾವು ಇಲ್ಲಿ ನ ಹವಾಗುಣಕ್ಕೆ ಹೊಂದಿಕೊಳ್ಳುವ ತೋಟಗಾರಿಕಾ ಹಣ್ಣುಗಳನ್ನು ಬೆಳೆಯಬೇಕು. ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಚೆಟ್ಟಳ್ಳಿ ತೋಟಗಾರಿಕಾ ಪ್ರಯೋಗಿ ಕೇಂದ್ರದ ಮುಖ್ಯಸ್ಥ ರಾಜೇಂದಿರನ್ ಮಾತನಾಡಿದರು.

ಹಣ್ಣು ವಿಭಾಗದ ವಿಜ್ಞಾನಿ ಡಾ. ಮುರುಳೀಧರ್ ಭಾರತದಲ್ಲಿ ಬೆಣ್ಣೆಹಣ್ಣಿನ ಕೃಷಿ, ನಿರೀಕ್ಷೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಷಯ ಮಂಡಿಸಿದರು. ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿ ರಾಣಿ ಬೆಣ್ಣೆಹಣ್ಣಿನಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ನಿರ್ವಹಣೆ ಬಗ್ಗೆ ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕ ಪ್ರಾಯೋಗಿಕ ಕೇಂದ್ರದಿಂದ ಆರಂಭಿಸಲಾಗಿರುವ ವಿದೇಶಿ ತೋಟಗಾರಿಕಾ ಬೆಳೆಗಾರರ ಅಭಿವೃದ್ಧಿ ಸಂಘವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ
ಕಾರ್ಯಭಾರ ಆಧರಿಸಿ ಶಿಕ್ಷಕರ ನೇಮಕ - ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿ