- ರೈತ ಒಕ್ಕೂಟದ ಎಚ್.ಆರ್.ಲಿಂಗರಾಜ, ಬಿಜೆಪಿ ರೈತ ಮೋರ್ಚಾದ ಪೂಜಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಬಲ ಮತ್ತು ಎಡನಾಲೆಗಳಿಗೆ ನೀರು ಹರಿಸುವ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ನ.17ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಭಾರತೀಯ ರೈತ ಒಕ್ಕೂಟ ಭದ್ರಾ ಶಾಖೆ ಅಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ ಎಚ್ಚರಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಅಚ್ಚುಕಟ್ಟು ಪ್ರದೇಶದ ಸುಮಾರು 25 ಸಾವಿರಕ್ಕೂ ಅಧಿಕ ರೈತರು ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದು, ತಕ್ಷಣವೇ ನಾಲೆಗೆ ನೀರು ಬಿಡುವ ಆದೇಶವನ್ನು ರದ್ದುಪಡಿಸಬೇಕು ಎಂದರು.
ಐಸಿಸಿ ಸಭೆ ತೀರ್ಮಾನದಂತೆ ನಾಲೆಗೆ ನೀರು ಹರಿಸಬೇಕು. ಆದರೆ, ಭದ್ರಾ ನೀರಾವರಿ ಸಲಹಾ ಸಮಿತಿಯೆಂಬುದೇ ಸತ್ತು ಹೋಗಿದೆ. ಭದ್ರಾ ಕಾಡಾ ಸಮಿತಿ ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಸಚಿವ ಮಧು ಬಂಗಾರಪ್ಪಗೆ ವಜಾ ಮಾಡಬೇಕು. ಕಾಡಾ ಅಧ್ಯಕ್ಷ ಸ್ಥಾನವನ್ನು ಅಚ್ಚುಕಟ್ಟು ಬಗ್ಗೆ ಅರಿವಿದ್ದವರಿಗೆ ನೀಡಲಿ. ಭದ್ರಾ ಡ್ಯಾಂನಲ್ಲಿ 55.52 ಟಿಎಂಸಿ ನೀರು ಸಂಗ್ರಹವಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆಂದು 8.5 ಟಿಎಂಸಿ ನೀರು ಸಾಕು. ಆದರೆ, ಅಧಿಕಾರಿಗಳು 13.5 ಟಿಎಂಸಿ ಬೇಕೆಂಬುದಾಗಿ ಸುಳ್ಳು ಲೆಕ್ಕ ನೀಡುತ್ತಿದ್ದಾರೆ. ಆವಿಯಾಗುವ, ಇಂಗುವ ನೀರು ಎಲ್ಲವನ್ನೂ ತೆಗೆದರೂ ಡ್ಯಾಂನಲ್ಲಿ 44.5 ಟಿಎಂಸಿ ನೀರು ಇದ್ದೇ ಇರುತ್ತದೆ. ಬೇಸಿಗೆ ಹಂಗಾಮಿಗೆ ನಿರಂತರವಾಗಿ ನೀರು ಹರಿಸಲು 30 ಟಿಎಂಸಿ ನೀರು ಸಾಕು. ಆದರೆ, ಇಂದಿಗೂ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ದಾವಣಗೆರೆ ರೈತರ ಪರ ಧ್ವನಿ ಎತ್ತಿ, ನ್ಯಾಯ ಕೊಡಿಸಲೆಂದು ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಲಿಂಗರಾಜ ಎಚ್ಚರಿಸಿದರು.
ಒಕ್ಕೂಟದ ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಣುಖಯ್ಯ, ಬೆಳವನೂರು ಬಿ.ನಾಗೇಶ್ವರ ರಾವ್, ಆರನೇಕಲ್ಲು ವಿಜಯಕುಮಾರ, ಎ.ಎಂ.ಮಂಜುನಾಥ, ಕುಂದುವಾಡ ಅಣ್ಣಪ್ಪ, ಕಂಚಿಕಟ್ಟೆ ಹನುಮಂತಪ್ಪ, ತ್ಯಾವಣಿಗೆ ಶಿವರಾಜ ಇತರರು ಇದ್ದರು.
* (ಟಾಪ್ ಕೋಟ್)
- ಶಾಬನೂರು ಎಚ್.ಆರ್.ಲಿಂಗರಾಜ, ಅಧ್ಯಕ್ಷ, ಭಾರತೀಯ ರೈತ ಒಕ್ಕೂಟ.
-16ಕೆಡಿವಿಜಿ3: