- 60 ವರ್ಷ ಒಳಗಿನ ಕ್ರಿಯಾಶೀಲರಿಗೆ ನಾಯಕತ್ವ, ಹಿರಿಯರಿಗೆ ಪ್ರಮುಖ ಜವಾಬ್ದಾರಿ: ಸಚಿವ ಕೆ.ಎಸ್.ಬಸವಂತಪ್ಪ - ಆನಗೋಡುನಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಸಂಘಟನಾ ಸೃಜನ ಅಭಿಯಾನ । ಪಕ್ಷ ಸಂಘಟನೆಗೆ ಶ್ರಮಿಸಲು ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳು, 2028ರ ವಿಧಾನಸಭೆ, 2029ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಎಐಸಿಸಿ ನಾಯಕ ರಾಹುಲ್ ಗಾಂಧಿ ಆಶಯದಂತೆ ಸಂಘಟನಾ ಸೃಜನ ಅಭಿಯಾನ ನಡೆಸಲಾಗುತ್ತಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.ತಾಲೂಕಿನ ಆನಗೋಡು ಗ್ರಾಮದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಸಂಘಟನಾ ಸೃಜನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷ ಸಂಘಟನೆ ಬಲಪಡಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ 60 ವರ್ಷದೊಳಗಿನ ಯುವ, ಉತ್ಸಾಹಿ, ಕ್ರಿಯಾಶೀಲ ಕಾರ್ಯಕರ್ತರಿಗೆ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದರು.
ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯ, ಗುಂಪುಗಾರಿಕೆ ಹಾಗೂ ಮನಸ್ತಾಪ ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ ಒಟ್ಟಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗೆ ಸಂಘಟನೆಯಲ್ಲಿ ಸೂಕ್ತ ಅವಕಾಶ ದೊರೆಯುವಂತಾಗಬೇಕು. ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಅಧ್ಯಕ್ಷತೆ ವಹಿಸಿದ್ದರು. ವಿಪ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಬ್ಲಾಕ್ ಅಧ್ಯಕ್ಷ ಬಿ.ಜೆ. ಹನುಮಂತಪ್ಪ, ಜಿ.ಪಂ. ಮಾಜಿ ಸದಸ್ಯ ವೆಂಕಟೇಶ ಮಾಯಕೊಂಡ, ಶ್ಯಾಗಲೆ ಸತೀಶ, ತಾಪಂ ಮಾಜಿ ಸದಸ್ಯರಾದ ಮಳಲ್ಕೆರೆ ಸುಭಾಶ್ಚಂದ್ರ ಗೌಡ, ತಿಪ್ಪಾನಾಯ್ಕ, ಶಂಭುಲಿಂಗಪ್ಪ, ಕರಿಲಕ್ಕೇನಹಳ್ಳಿ ತಿಪ್ಪಣ್ಣ, ಶಿವಕುಮಾರ ಸ್ವಾಮಿ, ತಿಪ್ಪೇಸ್ವಾಮಿ, ಐಗೂರು ಹನುಮಂತಪ್ಪ, ಆನಗೋಡು ಕರಿಬಸಪ್ಪ, ಗೊಲ್ಲರಹಳ್ಳಿ ತಿಮ್ಮಣ್ಣ, ಆನಗೋಡು ನಸ್ರುಲ್ಲಾ, ರಾಮಗೊಂಡನಹಳ್ಳಿ ಶರಣಪ್ಪ, ಹುಚ್ಚವ್ವನಹಳ್ಳಿ ಕುಬೇರಪ್ಪ, ಲೋಕಿಕೆರೆ ಅಂಜಿನಪ್ಪ, ರಾಮಗೊಂಡನಹಳ್ಳಿ ಸಿದ್ದೇಶ, ಲೋಕೇಶ ನಾಯ್ಕ, ಮಳಲ್ಕೆರೆ ಕೃಷ್ಣಮೂರ್ತಿ, ಮಾಯಕೊಂಡ ಗೋಪಾಲ, ರುದ್ರೇಶಣ್ಣ, ತುಂಬಿಗೆರೆ ಅಂಜಿನಪ್ಪ, ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
(ಬಾಕ್ಸ್)
- ಗ್ರಾಮೀಣ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧ: ಸಚಿವ ಬಸವಂತಪ್ಪ
ತಾಲೂಕಿನ ಆನಗೋಡು ಗ್ರಾಮದಲ್ಲಿ ಕಾಂಗ್ರೆಸ್ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೂಚನೆಯಂತೆ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಬರಗಾಲದ ಸ್ಥಿತಿಯಲ್ಲಿ ಕುಡಿಯುವ ನೀರು ಅತ್ಯಂತ ಆದ್ಯತೆ ವಿಷಯವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ನೀರಿಗಾಗಿ ಪರದಾಡುವ ಪರಿಸ್ಥಿತಿ ಎಲ್ಲಿಯೂ ನಿರ್ಮಾಣ ಆಗದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮಮಟ್ಟದಲ್ಲಿ ನೀರಿನ ಸಮಸ್ಯೆ ಗುರುತಿಸಿ, ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
- - -(ಕೋಟ್)
ಸದಾ ರೈತರು, ಮಹಿಳೆಯರು, ತಾಯಂದಿರು, ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಾ ಬರುತ್ತಿದೆ. ನಮ್ಮ ಸರ್ಕಾರದ ಜನಪರ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಜೊತೆಗೆ ಸರ್ಕಾರದ ವೈಫಲ್ಯ ಕಂಡುಬಂದರೆ ಅದನ್ನು ಜನರ ಗಮನಕ್ಕೆ ತರುವ ಜವಾಬ್ದಾರಿಯೂ ಕಾರ್ಯಕರ್ತರ ಮೇಲಿದೆ. ಜನಸಾಮಾನ್ಯರು, ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಅವುಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸಲು ಪಕ್ಷದ ಮುಖಂಡರು ಸದಾ ಸಿದ್ಧರಿರಬೇಕು.- ಕೆ.ಎಸ್.ಬಸವಂತಪ್ಪ, ಸಚಿವ
- - --16ಕೆಡಿವಿಜಿ2: ದಾವಣಗೆರೆ ತಾಲೂಕು ಆನಗೋಡು ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ್ ಅಭಿಯಾನದಲ್ಲಿ ಸಚಿವ ಕೆ.ಎಸ್.ಬಸವಂತಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ಇತರರು ಪಾಲ್ಗೊಂಡಿದ್ದರು.