ಬಿಸಿಯೂಟ ನೌಕರರಿಂದ ಕೆಲಸ ನಿಲ್ಲಿಸಿ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Nov 17, 2026, 01:30 AM IST
16ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೆಲಸ ಬಂದ್‌ ಮಾಡಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆಯನ್ನು ಕೈಬಿಡಬೇಕು ಹಾಗೂ ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೆಲಸ ಬಂದ್‌ ಮಾಡಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಂಘದ ಮುಖಂಡರು, ಸದಸ್ಯರು, ನೌಕರರು ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಪಂ ಸಿಇಒ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಜಂಟಿ ನಿರ್ದೇಶಕರು ಕಳೆದ ನ.7ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಬಿಸಿಯೂಟ ಯೋಜನೆಯಲ್ಲಿ ಕ್ಲಸ್ಟರ್ ಕಿಚನ್ ಸ್ಥಾಪಿಸುವ ಸಾಧಕ-ಬಾಧಕಗಳ ಕುರಿತು ಅಭಿಪ್ರಾಯ ಕೋರಿದ್ದಾರೆ. ಶಿಕ್ಷಣ ಇಲಾಖೆಯ ಈ ಕ್ರಮವನ್ನು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಬಿಸಿಯೂಟಯೊಂದಾಗಿದ್ದು, ಯೋಜನೆ ಜಾರಿಗಾಗಿ ಕೋಟ್ಯಾಂತರ ವ್ಯಯಿಸಿ ಶಾಲಾ ಆವರಣಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿ, ಅಗತ್ಯ ಪಾತ್ರೆಗಳು, ಗ್ಯಾಸ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿ ಸಿವೆ. ಇಂತಹ ವ್ಯವಸ್ಥೆ ಇರುವಾಗ ಕೇಂದ್ರಿಕೃತ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿಲ್ಲ ಎಂದು ತಿಳಿಸಿದರು.

ಬಿಸಿಯೂಟ ಯೋಜನೆಯ ನಿರ್ವಹಣಾ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸದೇ ಬೋಧನೆ ಮತ್ತು ಪಠ್ಯಕ್ರಮದ ಕಡೆಗೆ ಹೆಚ್ಚಿನ ಗಮನಹರಿಸಲು ಅವಕಾಶ ನೀಡಬೇಕು,ಬಿಸಿಯೂಟ ನೌಕರರಲ್ಲಿ ಅನೇಕರು ಎಸ್ಎಸ್ಎಲ್‌ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವವರಿದ್ದು, ಅವರಿಗೆ ಈ ಕೆಲಸ ನಿರ್ವಹಿಸುವ ಅನುಭವ ಮತ್ತು ಸಾಮರ್ಥ್ಯವಿದೆ. ಅಗತ್ಯವಿದ್ದರೆ ಅವರ ಕೆಲಸದ ಅವಧಿಯನ್ನು ವಿಸ್ತರಿಸಬಹುದು ಎಂದರು.

ಕ್ಲಸ್ಟರ್ ಕಿಚನ್ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಧಾರ್ಮಿಕ ಸಂಸ್ಥೆಗಳು, ಜಾತಿ ಸಂಘಟನೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಯೋಜನೆಯ ನಿರ್ವಹಣೆ ವಹಿಸಲು ದಾರಿಯಾಗಬಹುದು. ಆದ್ದರಿಂದ ಸರ್ಕಾರ ಕೂಡಲೇ ಕ್ಲಸ್ಟರ್ ಕಿಚನ್ ಪ್ರಸ್ತಾವನೆಯನ್ನು ಕೈಬಿಟ್ಟು, ಈಗಿರುವ ಅಡುಗೆ ಸಿಬ್ಬಂದಿಯ ಮೂಲಕವೇ ಬಿಸಿಯೂಟ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಹೋರಾಟದಲ್ಲಿ ಸಂಘದ ಅಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಮರಿಯಮ್ಮ, ಮಹ್ಮದ್ ಹನೀಫ್, ಅಕ್ಕ ಮಹದೇವಿ, ವಿಶಾಲ ಕ್ಷಮ್ಮ, ಕಲ್ಯಾಣಮ್ಮ, ಶರಣಮ್ಮ, ವಾಣಿಖಾದ್ರಿ, ಶ್ರೀಲೇಖಾ, ಹುಸೇನ, ಸಿದ್ದಮ್ಮ, ಶಹನಾಜ್ ಬೇಗಂ, ತುಳಜಾಬಾಯಿ, ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ. ಎಸ್. ಶರಣಬಸವ, ಹೆಚ್. ಪದ್ಮಾ, ಕೆ.ಜಿ.ವೀರೇಶ್, ಜಿಲಾನಿ ಸೇರಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಬಿಸಿಯೂಟ ನೌಕರರು ಪಾಲ್ಗೊಂಡಿದ್ದರು.

---

16ಕೆಪಿಆರ್‌ಸಿಆರ್‌ 01: ರಾಯಚೂರಿನ ಟಿಪ್ಪು ಸುಲ್ತಾನ್‌ ಉದ್ಯಾನವನದಲ್ಲಿ ಬಿಸಿಯೂಟ ನೌಕರರು ಕೆಲಸ ಬಂದ್‌ ಮಾಡಿ ಬೃಹತ್‌ ಪ್ರತಿಭಟನೆಯನ್ನು ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶೀಯ ಕ್ರೀಡೆಗಳಿಂದ ಆರೋಗ್ಯ: ಹನುಮಂತಗೌಡ ಎಂ. ಗುಡಿಹಿಂದಿನ
ಯೋಗಾಸನ ಸ್ಪರ್ಧೆ: ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ