ಕನ್ನಡಪ್ರಭ ವಾರ್ತೆ ದೇವದುರ್ಗ
ದೇವದುರ್ಗ - ರಾಯಚೂರು ರಸ್ತೆ ಮಾರ್ಗದಲ್ಲಿರುವ ಸಿರವಾರ ಕ್ರಾಸ್ ಬಳಿ ತಾಲೂಕು ಜೆಡಿಎಸ್ ಸೋಮವಾರ ಹಮ್ಮಿ ಕೊಂಡಿದ್ದ ಬೃಹತ್ ರೈತರ ರ್ಯಾಲಿ ಹಾಗೂ ಸಂಚಾರ ತಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ರಾಯಚೂರು, ದೇವದುರ್ಗ ಮತ್ತು ಲಿಂಗಸಗೂರು ತಾಲೂಕುಗಳ ರೈತರ ಒತ್ತಾಸೆ ಮೇರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ನಾರಾಯಣಪೂರ ಬಲದಂಡೆ ನಾಲೆ ನಿರ್ಮಿಸಿ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ನೀರಿಗಾಗಿ ನಾವು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ಅನೇಕ ಬಾರಿ ನೀರಿನ ಅವಶ್ಯಕತೆ ಮತ್ತು ಗಂಭೀರತೆ ಕುರಿತು ಅನೇಕ ಬಾರಿ ಗಮನ ಸೆಳೆಯಲಾಗಿದೆ. ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಿಗೆ ಭೇಟಿ ಮಾಡಿ ಈ ಭಾಗದ ಬೆಳೆಗಳ ವಸ್ತುಸ್ಥಿತಿ ಕುರಿತು ಚರ್ಚಿಸಲಾಗಿದೆ. ಆದರೂ ಕೂಡ ಸರ್ಕಾರ ಗಮನ ಹರಿಸದೇ ಇರುವುದು ವಿಷಾದದ ಸಂಗತಿಯಾಗಿದೆ.
ಹತ್ತಿ ಬೆಳೆಗಳಿಗೆ ನೀರೇನೂ ಬೇಕಾಗಿಲ್ಲ. ಆದರೆ ಭತ್ತ ಮತ್ತು ಮೆಣಸಿನಕಾಯಿ ಫಸಲು ಬಿಡುವ ಸಮಯವಿದೆ. ಕನಿಷ್ಟ ಜನವರಿ ಮೊದಲ ವಾರದವರೆಗೆ ಕಾಲುವೆಗಳ ಮುಖಾಂತರ ಜಮೀನುಗಳಿಗೆ ನೀರು ಬೇಕೇ ಬೇಕು. ಇಲ್ಲದೇ ಹೋದಲ್ಲಿ ಆಹಾರದ ಅಭದ್ರತೆ ಜೊತೆಗೆ ರೈತರಿಗೆ ಅಪಾರ ಹಾನಿ ಉಂಟಾಗಲಿದೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ನೀರಿನ ಅಗತ್ಯತೆ ಕುರಿತು ಸರ್ಕಾರದ ಗಮನ ಸೆಳೆಯಬೇಕು.ನೀರಾವರಿ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ನೀರು ಹರಿಸಬೇಕು. ಇಲ್ಲದೇ ಹೋದಲ್ಲಿ ವಿಧಾನಸೌಧದ ಬಳಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಶಾಸಕಿ ಕರೆಮ್ಮ ಜಿ. ನಾಯಕ ಎಚ್ಚರಿಸಿದರು.ಪ್ರತಿಭಟನಾ ಧರಣಿ ಉದ್ದೇಶಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ದೇವದುರ್ಗ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಿ.ಗಣೆಕಲ್,ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ಶಿವಶಂಕರ ವಕೀಲರು, ಅಮರೇಶ ಪಾಟೀಲ್ ಪರ್ತಪೂರ, ಶರಣಪ್ಪ ಬಳೆ, ಶಾಲಂ ಉದ್ದಾರಮ ಶಿವನಗೌಡ ಕಕ್ಕಲದೊಡ್ಡಿ, ಬಸವರಾಜಪ್ಪ ವಾರದ ಮಾತನಾಡಿದರು.
ಕೊತ್ತದೊಡ್ಡಿ, ಶಿವು ಕಾಳೆ, ಈಸಾಕ್ ಮೇಸ್ತ್ರಿ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ರಾಮಣ್ಣ ಮದರಕಲ್ ಹಾಗೂ ಇತರರು ಪಾಲ್ಗೊಂಡಿದ್ದರು.
ತಹಸೀಲ್ದಾರ್ರಿಗೆ ಮನವಿ ಪತ್ರ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ನಾಗಮ್ಮ ಎಂ.ಕಟ್ಟೀಮನಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿ, ಜನವರಿ ಮೊದಲ ವಾರದವರೆಗೆ ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸುವದು,ಬರಗಾಲ ಪ್ರದೇಶ ಘೋಷಣೆಯಾಗಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವುದು, ಮುಂಗಾರು ಮತ್ತು ಹಿಂಗಾರು ಬೆಳೆಗಳು ಕೈಕೊಟ್ಟಿದ್ದು ರೈತರು ಸಂಕಷ್ಟದಲ್ಲಿದ್ದು ಕೂಡಲೇ ಸಾಲಮನ್ನಾ ಘೋಷಣೆ ಮಾಡಬೇಕು. ಬೆಳೆ ವಿಮೆ ಕಂಪನಿಯವರು ಈಗಾಗಲೇ ರೈತರಿಂದ ವಿಮೆ ಕಂತು ಪಡೆದಿದ್ದು ವಿಮಾ ಪರಿಹಾರ ನೀಡಬೇಕು.
ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ವಿಜಯ ಕುಮಾರ ಮುಚ್ಚಳಾಂಬೆ , ಎಇಇ ಮಂಜುನಾಥ, ಗೋಪಾಲ ಸಿಂಗ್ ಹಾಗೂ ಇತರೆ ಅಧಿಕಾರಿಗಳು ಇದ್ದರು.
ನಾರಾಯಣಪೂರ ಡ್ಯಾಂಗೆ ಹೊರಟ ರೈತರ ಪಾದಯಾತ್ರೆ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕೃಷಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಗಬ್ಬೂರನಿಂದ ನಾರಾಯಣಪೂರ ಡ್ಯಾಂಗೆ ಪಾದಯಾತ್ರೆ ಹೊರಟಿದ್ದಾರೆ.
2 ನೇ ದಿನವಾದ ಸೋಮವಾರ ದೇವದುರ್ಗಕ್ಕೆ ತಲುಪಿದ ಪಾದಯಾತ್ರಿಗಳು ವಿವಿಧ ಗ್ರಾಮಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿ ನೀರಿನ ಮಹತ್ವ ಮತ್ತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಸ್ತಾನನಾಯಕ ಹಾಗೂ ಇತರರು ಪಾಲ್ಗೊಂಡಿದ್ದರು.