ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿದರೆ ಪ್ರಗತಿ: ಬಸವಂತಪ್ಪ

KannadaprabhaNewsNetwork |  
Published : Nov 17, 2026, 01:30 AM IST
ಪಟ್ಟಣದ ಪ್ರವಾಸಿ ಮಂದಿರದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರವವನ್ನು ಶಾಸಕ ಡಿ.ಜಿ.ಶಾಂತನಗೌಡರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಹೆಚ್ಚು ಸಾಲ ಸೌಲಭ್ಯ ನೀಡುವುದರಿಂದ ಸಾಲ ಮರುಪಾವತಿ ಸಕಾಲದಲ್ಲಿ ಆಗುವುದು. ಅಲ್ಲದೇ, ಅವರ ಕುಟುಂಬಗಳ ಆರ್ಥಿಕ ಸ್ಥಿತಿಗಳೂ ಉತ್ತಮಗೊಳ್ಳುತ್ತದೆ ಎಂದು ಮುಜರಾಯಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಬಸವಂತಪ್ಪ ತಿಳಿಸಿದ್ದಾರೆ.

- ನ್ಯಾಮತಿಯಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ । ಗಣೀಕೀಕೃತ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಹೆಚ್ಚು ಸಾಲ ಸೌಲಭ್ಯ ನೀಡುವುದರಿಂದ ಸಾಲ ಮರುಪಾವತಿ ಸಕಾಲದಲ್ಲಿ ಆಗುವುದು. ಅಲ್ಲದೇ, ಅವರ ಕುಟುಂಬಗಳ ಆರ್ಥಿಕ ಸ್ಥಿತಿಗಳೂ ಉತ್ತಮಗೊಳ್ಳುತ್ತದೆ ಎಂದು ಮುಜರಾಯಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಬಸವಂತಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟ, ನ್ಯಾಮತಿ- ಹೊನ್ನಾಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ತಾಲೂಕು ಪತ್ತಿನ ಸಹಕಾರ ಸಂಘಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಎರಡನೇ ದಿನದ ಗಣೀಕೀಕೃತ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲೈಜೇಷನ್ ಪ್ರಕ್ರಿಯೆ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಪೋಷಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಹಕಾರ ಸಂಘಗಳಿಂದ ರೈತರಿಗೆ ಹಸು ಸಾಕಾಣಿಕೆ ಸೇರಿದಂತೆ ಇನ್ನಿತರೆ ಉಪಯುಕ್ತ ವಿಷಯಗಳ ಮೇಲೆ ಸಬ್ಸಿಡಿ ನೀಡುವುದರ ಬದಲು ಮಹಿಳೆಯರಿಗೆ ಹಸುಗಳನ್ನು ಖರೀದಿಸಲು ನೀಡುತ್ತಿರುವ ಸಾಲ ಸೌಲಭ್ಯದಲ್ಲಿ ಪ್ರೋತ್ಸಾಹದಾಯಕ ಧನ ನೀಡಿದರೆ ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಲು ಕಾರಣವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಬರಗಾಲವಿರುವ ಕಾರಣ ಯಾವುದೇ ಆರ್ಥಿಕ ಸಂಸ್ಥೆಯವರು ಬಲವಂತದ ಸಾಲ ವಸೂಲಾತಿಗೆ ಕೈ ಹಾಕಬಾರದು. ಈ ವರ್ಷ ಯಾವುದೇ ಕಾರಣಕ್ಕೂ ಸಹಕಾರ ಸಂಘಗಳು ಸಾಲ ವಸೂಲಾತಿಗೆ ಮುಂದಾಗದಿರುವಂತೆ ಸಲಹೆ ನೀಡಿ, ಒಂದುವೇಳೆ ಬಲವಂತವಾಗಿ ಸಾಲ ವಸೂಲಾತಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ಸಿಕ್ಕರೆ ದೊಡ್ಡ ಮನೆ ನಿರ್ಮಿಸುವುದಕ್ಕಿಂತ ಅವಶ್ಯ ಇರುವಷ್ಟು ಮಾತ್ರ ಮನೆ ಕಟ್ಟಿಕೊಳ್ಳಬೇಕು. ಹೃದಯ ಮತ್ತು ಮನಸ್ಸುಗಳು ದೊಡ್ಡದಿರಬೇಕೇ ಹೊರತು ಮನೆಯಲ್ಲ. ಮನೆ ಸಾಲವನ್ನು ₹3ರಿಂದ ₹5 ಲಕ್ಷ, ಸಾಮಾನ್ಯ ವರ್ಗಕ್ಕೆ ₹2ಲಕ್ಷ ನಿಗದಿ ಮಾಡಿ ಸಾಲ ನೀಡುವ ಚಿಂತನೆ ನಡೆದಿದೆ ಎಂದು ಹೇಳಿದರು.

ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ, ಹಾಲು ಶೇಖರಣೆ ನಿರ್ವಹಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಾಲು ಕೆಟ್ಟಿದೆ ಎಂಬ ವಿಷಯ ಎಲ್ಲಿಯೂ ಕೇಳಿಲ್ಲ ಎಂದು ಹೇಳಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಚುಗಾರನಹಳ್ಳಿ ಎಚ್.ಕೆ.ಬಸಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ದೊಡ್ಡೇರಿ ಡಿ.ಜಿ.ವಿಶ್ವನಾಥ ವಹಿಸಿದ್ದರು.

ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ಉಪಾಧ್ಯಕ್ಷೆ ಮಂಜುಳಾ ಗಣೇಶ್, ಎನ್.ಜೆ.ನಿರ್ಮಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರ, ಶಿವ ಸೊಸೈಟಿ ಅಧ್ಯಕ್ಷ ಬೆನಕನಹಳ್ಳಿ ರುದ್ರೇಶಪ್ಪ, ಎಲ್.ರುದ್ರನಾಯ್ಕ, ಎಚ್.ಜಿ.ಗಣೇಶ್, ಎಂ.ಜಯಪ್ಪ, ಗೋವಿನಕೋವಿ ಪ್ರವೀಣಗೌಡ, ಕೆ.ಜಿ. ನವೀನ್‌ಕುಮಾರ್‌, ಹಲವಾರು ಸಂಘ ಸಂಸ್ಥೆಯ ಮುಖಂಡರು ಮತ್ತಿತರರಿದ್ದರು.

- - -

(ಕೋಟ್‌)

ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದರೆ ಒಳ್ಳೆಯದು. ಇದರಿಂದ ಹೈನುಗಾರಿಕೆಗೆ ಮತ್ತಷ್ಟು ಪ್ರೋತ್ಸಾಹ ದೊರೆತು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ದೊರೆಯುತ್ತದೆ. ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ- ಚಿತ್ರದುರ್ಗ ಒಕ್ಕೂಟವನ್ನು ಬೇರ್ಪಡಿಸಿ ದಾವಣಗೆರೆ- ಚಿತ್ರದುರ್ಗ ಒಕ್ಕೂಟವನ್ನು ನಿರ್ಮಿಸಲು ₹280 ಕೋಟಿ ವೆಚ್ಚದಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಈ ಬಗ್ಗೆ ಚರ್ಚಿಸಲಾಗಿದೆ.

- ಕೆ.ಎಸ್‌.ಬಸವಂತಪ್ಪ, ಸಚಿವ.

- - -

-ಚಿತ್ರ:

ನ್ಯಾಮತಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಸಚಿವ ಬಸವಂತಪ್ಪ ಮತ್ತಿತರ ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶೀಯ ಕ್ರೀಡೆಗಳಿಂದ ಆರೋಗ್ಯ: ಹನುಮಂತಗೌಡ ಎಂ. ಗುಡಿಹಿಂದಿನ
ಯೋಗಾಸನ ಸ್ಪರ್ಧೆ: ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ