ಕನ್ನಡಪ್ರಭ ವಾರ್ತೆ ಮಧುಗಿರಿ
ಇತ್ತೀಚಿಗೆ ಪುರಸಭೆಯ ಸ್ವಚ್ಛ ವಾಹಿನಿ ವಾಹನಗಳ ಮೂಲಕ ಧ್ವನಿವರ್ಧಕಗಳಲ್ಲಿ, ಸುಪ್ರೀಂಕೋರ್ಟ್ ಆದೇಶದಂತೆ ರಸ್ತೆ ಹಾಗೂ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವ ಅಂಗಡಿ ಮಾಲೀಕರುಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ತೆರವುಗೊಳಿಸುವಂತೆ ಸೂಚನೆ ನೀಡಿರುವುದು ಹಾಗೂ ಪೊಲೀಸ್ ಇಲಾಖೆ ಮತ್ತು ಪುರಸಭಾ ಸಿಬ್ಬಂದಿಗಳು ತೆರವು ಮಾಡಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಬೀದಿ ಬದಿ ವ್ಯಾಪಾರಸ್ಥರು ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಡೂಮ್ ಲೈಟ್ ಸರ್ಕಲ್ ಮತ್ತು ಪುರಸಭೆ ಮುಂಭಾಗದ ರಸ್ತೆ ಬದಿಯಲ್ಲಿ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಲಯ ಅಭಿವೃದ್ಧಿಪಡಿಸಿ, ಪುನರ್ವಸತಿ ಕಲ್ಪಿಸಿಕೊಡುವಂತೆ ಕೋರಿದರು. ಸುಮಾರು 30-40 ವರ್ಷಗಳಿಂದ ನಾವು ರಸ್ತೆ ಬದಿ ಫುಟ್‌ಪಾತ್‌ನಲ್ಲಿ ವ್ಯಾಪಾರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಲ್ಲದೆ ನಮ್ಮ ಕ್ಷೇತ್ರದ ಶಾಸಕರಾದ ಕೆ.ಎನ್. ರಾಜಣ್ಣ ರವರ ನಿರ್ದೇಶನದಂತೆ ತಾವು ನಮಗೆ ಪುರಸಭೆ ವತಿಯಿಂದ ಯಾವುದೇ ನೆಲಬಾಡಿಗೆ ಶುಲ್ಕ ವಸೂಲಿ ಮಾಡದೆ ನಮ್ಮ ವ್ಯಾಪಾರಕ್ಕೆ ತುಂಬಾ ಸಹಾಯ ಮಾಡಿಕೊಟ್ಟಿರುವುದಕ್ಕೆ ಬೀದಿ ವ್ಯಾಪಾರಿಗಳ ಪರವಾಗಿ ತುಂಬುಹೃದಯದ ವಂದನೆಗಳನ್ನು ಸಲ್ಲಿಸಿದರು.ಪ್ರಸ್ತುತ ನಾವು ವ್ಯಾಪಾರ ಮಾಡುತ್ತಿರುವ ರಸ್ತೆ ಮತ್ತು ಸರ್ಕಲ್‌ನಲ್ಲಿ ಫುಟ್‌ಪಾತ್ ಜಾಗ ತುಂಬಾ ಕಿರಿದಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಮತ್ತು ವ್ಯಾಪಾರಕ್ಕೆ ತೊಂದರೆಯಾಗಿರುತ್ತದೆ. ಆದುದರಿಂದ ಹಾಲಿ ನಡೆಯುತ್ತಿರುವ ಸಂತೆ ಮೈದಾನದಲ್ಲಿ ಅಥವಾ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬೀದಿ ವ್ಯಾಪಾರಿಗಳಿಗೆ ನಿರ್ಮಿಸಿಕೊಟ್ಟಿರುವ ಅಂಗಡಿ ಮಳಿಗೆಗಳ ರೀತಿ ಯಾವುದಾದರೂ ಒಂದು ಕಡೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಟ್ಟರೆ, ನಮಗೆ ವ್ಯಾಪಾರ ಮಾಡಲು ಸಹಾಯವಾಗುತ್ತದೆ. ಸದರಿ ಅಂಗಡಿ ಮಳಿಗೆಗಳ ತೆರಿಗೆಯನ್ನು ನಾವು ಪಾವತಿಸಿಕೊಂಡು ಹೋಗುತ್ತೇವೆ. ಬಡವರ ಪರ, ಅಸಂಘಟಿತ ಕಾರ್ಮಿಕರ ಪರ ಕಾಳಜಿ ಹೊಂದಿರುವ ಅಧಿಕಾರಿಗಳು ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ವಿನಂತಿ ಮಾಡಿಕೊಂಡರು.
ಕಂದಾಯ ಅಧಿಕಾರಿ ಸರಸ್ವತಿ ಜಿ. ರವರು ಮನವಿ ಪತ್ರ ಸ್ವೀಕರಿಸಿ, ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕಾನೂನಿನ ವ್ಯಾಪ್ತಿಯಲ್ಲಿ ಎಷ್ಟು ಸಹಾಯ ಮಾಡಬಹುದೋ ಅಷ್ಟು ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಗುರುರಾಜ್ ಮತ್ತು ನೂರಾರು ವ್ಯಾಪಾರಸ್ಥರು ಉಪಸ್ಥಿತರಿದ್ದರು.