ಸಚಿವ ರಘುಮೂರ್ತಿ ಕೊಟ್ಟ ಮಾತು ಉಳಿಸಿಕೊಳ್ತಾರಾ?

KannadaprabhaNewsNetwork |  
Published : Nov 17, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ   | Kannada Prabha

ಸಾರಾಂಶ

ಭದ್ರೆ ನೀರು ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಕೆರೆಗೆ ಬಂದಿರುವುದು.

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭವಾರ್ತೆ ಚಳ್ಳಕೆರೆ

ಅಂತೂ ಚಿಕ್ಕ ಮಧುರೆ ಕೆರೆಗೆ ಭದ್ರೆ ಎಂಟ್ರಿ ಕೊಟ್ಟಿದ್ದಾಳೆ. ರೈತರ ಮೊಗದಲ್ಲಿ ಸಂತಸದ ಹೊನಲು ಹರಿದಾಡಿದೆ. ಇದರ ನಡುವೆಯೇ ಸಚಿವ ರಘುಮೂರ್ತಿ ಜೆ.ಎನ್.ಕೋಟೆ ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ತಾರಾ ಎಂಬ ಮಾತುಗಳು ಹರಿದಾಡುತ್ತಿವೆ.

ಬಯಲುಸೀಮೆಯ ಬರದ ನಾಡು, ಸದಾ ಮಳೆರಾಯನ ಕೃಪೆಗಾಗಿ ಆಕಾಶದತ್ತ ಮುಖ ಮಾಡಿ ನಿಲ್ಲುತ್ತಿದ್ದ ಚಳ್ಳಕೆರೆ ತಾಲೂಕಿನ ಜನರ ಪಾಲಿಗೆ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಐತಿಹಾಸಿಕ ದಿನ. ದಶಕಗಳ ಕಾಲದ ಹೋರಾಟ, ತಲೆಮಾರುಗಳ ನಿರೀಕ್ಷೆ ಮತ್ತು ಕೋಟ್ಯಂತರ ಕಣ್ಣುಗಳ ಕನಸಿಗೆ ಕೊನೆಗೂ ಜೀವ ಬಂದಿದೆ. ಪಶ್ಚಿಮ ಘಟ್ಟಗಳ ಮಲೆನಾಡಿನ ತಪ್ಪಲಿನಲ್ಲಿ ಹುಟ್ಟಿ, ನೂರಾರು ಕಿಲೋಮೀಟರ್ ದೂರದ ಕಲ್ಲು-ಮುಳ್ಳು, ಬೆಟ್ಟ-ಗುಡ್ಡಗಳ ಕಠಿಣ ಹಾದಿಯನ್ನು ದಾಟಿ, ಬೃಹತ್ ಪೈಪ್‌ಲೈನ್ ಮತ್ತು ಕಾಲುವೆಗಳ ಮೂಲಕ ಕುಣಿಕುಣಿದು, ನಲಿನಲಿದು ಬಂದ ಭದ್ರಾ ಮಾತೆ ಚಳ್ಳಕೆರೆ ತಾಲೂಕಿನ ಐತಿಹಾಸಿಕ ಚಿಕ್ಕಮಧುರೆ ಕೆರೆಯ ಒಡಲನ್ನು ಸೇರುವ ಮೂಲಕ ಬರದ ನಾಡಿನಲ್ಲಿ ಹೊಸ ಭರವಸೆಯ ಅಲೆಯನ್ನು ಎಬ್ಬಿಸಿದ್ದಾಳೆ.

ಇಷ್ಟು ದಿನ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ಹಲವು ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿದು ಅಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, ಭೌಗೋಳಿಕವಾಗಿ ಅತ್ಯಂತ ಹೆಚ್ಚು ಬರಪೀಡಿತವಾಗಿದ್ದ ಚಳ್ಳಕೆರೆ ತಾಲೂಕಿಗೆ ಮಾತ್ರ ಭದ್ರೆಯ ಆಗಮನ ವಿಳಂಬವಾಗುತ್ತಲೇ ಇತ್ತು. ನೆರೆಯ ತಾಲೂಕುಗಳ ಕೆರೆಗಳು ತುಂಬುತ್ತಿದ್ದರೆ, ನಮ್ಮ ಪಾಲಿನ ನೀರು ಯಾವಾಗ ಬರುತ್ತದೆ ಎಂದು ಚಳ್ಳಕೆರೆಯ ಅನ್ನದಾತರು ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದರು. ಹಲವು ಬಾರಿ ಪ್ರತಿಭಟನೆ, ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಆ ಎಲ್ಲಾ ಮುನಿಸು, ಅಸಮಾಧಾನಗಳಿಗೆ ತೆರೆ ಎಳೆಯುವಂತೆ ಭದ್ರೆ ಚಳ್ಳಕೆರೆಯ ಗಡಿ ದಾಟಿ ಚಿಕ್ಕಮಧುರೆ ಕೆರೆಗೆ ಧುಮ್ಮಿಕ್ಕಿದ್ದಾಳೆ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 3 ಟಿಎಂಸಿ ನಂತರ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಒಟ್ಟು 4 ಟಿಎಂಸಿ ನೀರು ಬಂದರೂ ಚಳ್ಳಕೆರೆ ತಾಲೂಕಿನ ಕೆರೆಗಳಿಗೆ ಒಂದು ಹನಿಯೂ ಬಂದಿರಲಿಲ್ಲ. ಇದೀಗ ಚಿಕ್ಕಮಧುರೆ ಕೆರೆಗೆ ನೀರು ಭದ್ರೆ ಪಾದಾರ್ಪಣೆ ಮಾಡಿದ್ದಾಳೆ. ಈಗಲಾದರೂ ನೀರು ಬಂತಲ್ಲ ಎಂಬ ಖುಷಿ ಕೆಲವರಲ್ಲಿದ್ದರೆ, ಇದೇ ನೀರು ಒಂದಿಷ್ಟು ದಿನಗಳ ಮುಂಚೆ ಬಂದಿದ್ದರೆ ಒಣಗಿದ ತೋಟಗಳಿಗೆ ಮರುಜೀವವಾದರೂ ಬಂದಂತೆ ಆಗುತ್ತಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.

ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಬಿಸಲು ಉದ್ದೇಶಿಸಿರುವ ಒಟ್ಟು 46 ಕೆರೆಗಳ ಪೈಕಿ ಚಿಕ್ಕಮಧುರೆ ಕೆರೆ ಮೊದಲ ಹೆಜ್ಜೆಯಷ್ಟೇ.ಜನರ ಬಹುದಿನಗಳ ಕನಸು ಈಡೇರಿಸಿದ ಸಚಿವ ರಘುಮೂರ್ತಿ:

ಚಳ್ಳಕೆರೆ ಕ್ಷೇತ್ರದಲ್ಲಿ ಸತತವಾಗಿ ಮೂರು ಬರಿ ಗೆದ್ದು ಇದೀಗ ಸಚಿವರಾಗಿರುವ ಟಿ.ರಘುಮೂರ್ತಿಯವರು ಹೆಚ್ಚುವರಿಯಾಗಿ ಒಂದು ಟಿಎಂಸಿ ನೀರು ತರಲು ಸರ್ಕಾರದ ಮಟ್ಟದಲ್ಲಿ ಅರಮಿಸಿದ್ದರು. ಇದೀಗ ಸ್ವಕ್ಷೇತ್ರದತ್ತ ನೀರು ಹರಿದಿರುವುದು ಇಲ್ಲಿನ ಜನರ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. ಇನ್ನೂ ಮುಂದಿನ ರಾಣೀಕೆರೆಗೂ ಭದ್ರೆ ತಲುಪುವಂತೆ ನೋಡಿಕೊಳ್ಳುವುದೂ ಕೂಡ ಸಚಿವರ ಮೊದಲ ಆದ್ಯತೆಯಾಗಬೇಕಿದೆ. ಇನ್ನೊಂದೆಡೆ ಹಿರಿಯೂರು ತಾಲೂಕಿನ ಐಮಂಗಲ ಕೆರೆ ತುಂಬಿ ಎಂ.ಡಿ ಕೊಟೆ ಕೆರೆ ಕೋಡಿ ಬೀಳಲು ದಿನಗಣನೆ ಶುರುವಾಗಿದೆ. ಅಲ್ಲಿಂದ ಸಾಣೀಕೆರೆ ಕಡೆಗೂ ನೀರು ಹರಿಯುವಂತೆ ಮಾಡುವುದೂ ಕೂಡ ರಘುಮೂರ್ತಿಯವರ ಆದ್ಯತೆಯಾಗಬೇಕೆಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ವಿರೋಧಿಸಿ ಪ್ರತಿಭಟನೆ
ಖಾಸಗಿಯವರಿಗೆ ಬಿಸಿಯೂಟ ಜವಾಬ್ದಾರಿ ವಿರೋಧಿಸಿ ಪ್ರತಿಭಟನೆ