ಬಿಸಿಯೂಟ ನೌಕರರಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ

KannadaprabhaNewsNetwork |  
Published : Nov 17, 2026, 01:15 AM IST
ಸಿಕೆಬಿ-1 ಬಿಸಿಯೂಟ ನೌಕರರ ಸಂಘಟನೆ ಯಿಂದ ವಿವಿಧ ಬೇಡಿಕೆಗಳಿ ಗೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಬಿಸಿಯೂಟ ಯೋಜನೆ 1920 ರಿಂದ ಪ್ರಾರಂಭವಾಗಿ ಅಂತಿಮವಾಗಿ, 2001ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾರಿಗೆ ಬಂದಿರುವ ಐತಿಹಾಸಿಕ ಯೋಜನೆ ಇದಾಗಿದೆ.

ವಿವಿಧ ಬೇಡಿಕೆಗಳಿಗೆ ಒತ್ತಾಯ । ಕ್ಲಸ್ಟರ್ ಕಿಚನ್ ರಚಿಸದಂತೆ ಆಗ್ರಹ । ಬಿಸಿಯೂಟ ಜವಾಬ್ದಾರಿ ಅಡುಗೆ ಸಿಬ್ಬಂದಿಗೆ ವಹಿಸಲು ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ಲಸ್ಟರ್ ಕಿಚನ್ ರಚಿಸಬಾರದು ಹಾಗೂ ಬಿಸಿಯೂಟ ಜವಾಬ್ದಾರಿಯನ್ನು ಸಂಪೂರ್ಣವಾಗಿ ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಲು ಮತ್ತು ವಿವಿಧ ಬೇಡಿಕೆಗಳಿ ಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ವತಿಯಿಂದ ಎಲ್ಲಾ ತಾಲೂಕುಗಳಲ್ಲಿ ಬಿಸಿಯೂಟ ಬಂದ್ ಮಾಡಿ ಜಿಲ್ಲಾಡಳಿತ ಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಪಿ. ಎಂ. ಪೋಷಣ್ ಶಕ್ತಿ ನಿರ್ಮಾಣ ಜಂಟಿ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆಯಿಂದ ನ. 7 ರಂದು ಬಿಸಿಯೂಟವನ್ನು ಕ್ಲಸ್ಟರ್ ಕಿಚನ್ ರಚಿಸಲು ಮತ್ತು ಇದರ ಬಗ್ಗೆ ಸಾಧಕ ಬಾಧಕಗಳ ಕುರಿತು ಅಭಿಪ್ರಾಯವನ್ನು ತಿಳಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಉಪ-ನಿರ್ದೇಶಕರು ಮತ್ತು ಶಿಕ್ಷಣದ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಈ ಅಭಿಪ್ರಾಯವನ್ನು ಯೋಚಿಸಿರುವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಕರ ಸಂಘದ ಸೂಚನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.

ಬಿಸಿಯೂಟ ಯೋಜನೆ 1920 ರಿಂದ ಪ್ರಾರಂಭವಾಗಿ ಅಂತಿಮವಾಗಿ, 2001ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾರಿಗೆ ಬಂದಿರುವ ಐತಿಹಾಸಿಕ ಯೋಜನೆ ಇದಾಗಿದೆ. ಸರ್ಕಾರಿ ಶಾಲೆಯ ಮಕ್ಕಳ ಗ್ರಹಿಕೆಯ ಶಕ್ತಿ ಹೆಚ್ಚಿಸಲು, ಮಧ್ಯಾಹ್ನದ ನಂತರ ಶಾಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಮತ್ತು ಗೈರು ಹಾಜರಾತಿ ತಡೆಯುವುದು, ಲಿಂಗದ ಅಂತರ, ಜಾತಿ-ತಾರತಮ್ಯ ಕಡಿಮೆ ಮಾಡುವ ಮಹತ್ತರ ಉದ್ದೇಶ ಈ ಯೋಜನೆಯಲ್ಲಿದೆ.

ಈ ಯೋಜನೆಗೆ ಪ್ರತ್ಯೇಕವಾಗಿ ನಿರ್ದೇಶನಾಲಯವನ್ನು ರಚಿಸಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದರೆ ಈ ಯೋಜನೆಯ ಮಹತ್ವ ಅರಿವಾಗುತ್ತದೆ. ಇನ್ನು ಶಾಲಾ ಶಿಕ್ಷಕರಿಗೆ ಈ ಜವಾಬ್ದಾರಿ ವಹಿಸಿರುವುದನ್ನು ನಮ್ಮ ಸಂಘಟನೆ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ ಏಕೆಂದರೆ ಶಿಕ್ಷಕರು ಶಾಲಾ ಪಠ್ಯಕ್ರಮಗಳಿಗೆ ಗಮನ ಕೊಡುವುದು ಮುಖ್ಯವಾಗಬೇಕು ಎಂದು ಆಗ್ರಹಿಸಿದರು.

04-6-2012 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ಕೊಡುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. 17-12-2012 ರ ಶಿಕ್ಷಣ ಇಲಾಖೆಯ ನಡಾವಳಿಯಂತೆ ಅಕ್ಷರ ದಾಸೋಹ ಯೋಜನೆಯ ಜಂಟಿ ಖಾತೆಯನ್ನು ಮುಖ್ಯ ಅಡಿಗೆಯವರು ಹಾಗೂ ಎಸ್ ಡಿ ಎಂ ಸಿ ಯ ಪದನಿಮಿತ್ತ ಮುಖ್ಯೋಪಾಧ್ಯಾಯರು ನಿರ್ವಹಿಸುವ ಕೆಲಸವನ್ನು ಈಗ ಮುಂದುವರಿಸಬಹುದು. ಶಾಲಾ ಮುಖ್ಯೋಪಾಧ್ಯಾಯರು ಜವಾಬ್ದಾರಿ ಬೇಡ ಎಂದರೆ ಮುಖ್ಯ ಅಡಿಗೆಯವರು ಮತ್ತು ಎಸ್ ಡಿ ಎಮ್ ಸಿ ಅಧ್ಯಕ್ಷರ ಜಂಟಿ ಖಾತೆ ಮಾಡಬಹುದು.

ಸರ್ಕಾರಿ ಶಾಲೆಗಳಿರುವ ತನಕ ಬಿಸಿಯೂಟ ಮಕ್ಕಳ ಮೂಲಭೂತ ಹಕ್ಕಾಗಿರುತ್ತದೆ. ಬಿಸಿಯೂಟ ನೌಕರರ ಮೂಲ ಕೆಲಸ ಅಡುಗೆ ಮಾಡಿ ಬಡಿಸುವುದು ಆಗಿರುತ್ತದೆ. ಆದ್ದರಿಂದ ಬಿಸಿಯೂಟದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಅಡುಗೆಯವರಿಗೆ ವಹಿಸಬಹುದು. ಬಿಸಿಯೂಟದಲ್ಲಿ ಅಡಿಗೆಯವರು ಎಸ್ಎಸ್ಎಲ್ ಸಿ, ಪಿಯುಸಿ, ಕೆಲವೆಡೆ ಪದವೀಧರರು ಆಗಿರುವುದರಿಂದ ಅವರು ಇದನ್ನು ನಿರ್ವಹಿಸುವ ಅರ್ಹತೆ ಮತ್ತು ಅನುಭವವಿದೆ. ಇಲಾಖೆ ಈ ಅನುಭವವನ್ನು ಸಮರ್ಥವಾಗಿ ಬಳಸಲು ಸಾಧ್ಯವಾಗಬೇಕು. ಅಗತ್ಯವಿದ್ದರೆ ಅಡುಗೆಯವರ ಕೆಲಸದ ಅವಧಿಯನ್ನು ವಿಸ್ತರಿಸಬಹುದು.

ಶಾಲಾ ಶಿಕ್ಷಕರು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಕೋಳಿ ಮೊಟ್ಟೆ ಬೆಲೆ ಏರಿಕೆ, ಈ ಕೋಳಿ ಮೊಟ್ಟೆಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವಂತೆ ಕುಕ್ಕುಟ ಮಹಾಮಂಡಳಿಯಿಂದ ಶಾಲೆಗಳಿಗೆ ಸರಬರಾಜು ಮಾಡಲು ಇಲಾಖೆ ಕ್ರಮ ವಹಿಸಲು ಸಾಧ್ಯವಿದೆ. ಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಾರಂಭಿಸುವ ಯೋಜನೆ ನಿಧಾನವಾಗಿ ಧಾರ್ಮಿಕ, ಜಾತಿಗಳ ಮತ್ತು ಖಾಸಗಿಯವರ ಪಾಲು ಮಾಡಲು ರಹದಾರಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಸೆಂಟ್ರಲ್ ಕ್ಲಸ್ಟರ್ ಕಿಚೆನ್ ಪದ್ಧತಿಯನ್ನು ಕೈಬಿಡಬೇಕು ಎಂಬುದಾಗಿ ಈ ಮೂಲಕ ಎಚ್ಚರಿಕೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ದ ಜಿಲ್ಲಾ ಕಾರ್ಯದರ್ಶಿ ಮಂಜುಳ,ಖಜಾಂಚಿ ರಾಜಮ್ಮ, ಪದಾಧಿಕಾರಿಗಳಾದ ಭಾರತಿ, ಮುನಿಲಕ್ಷ್ಮೀ,ವರಲಕ್ಷ್ಮೀ,ಶೈಲಜಾ, ನಾರಾಯಣಮ್ಮ, ನರಸಮ್ಮ, ಭಾಗ್ಯಮ್ಮ, ಅಶ್ವತ್ತಮ್ಮ, ಲಲಿತ, ಪ್ರಮೀಳ ಸಿಐಟಿಯು ಮುಖಂಡರಾದ ಮುಸ್ತಾಫ, ದೇವರಾಜ್, ಮತ್ತಿತರರು ಇದ್ದರು.

ಸಿಕೆಬಿ-1 ಬಿಸಿಯೂಟ ನೌಕರರ ಸಂಘಟನೆ ಯಿಂದ ವಿವಿಧ ಬೇಡಿಕೆಗಳಿ ಗೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ ವಿರೋಧಿಸಿ ಪ್ರತಿಭಟನೆ
ಖಾಸಗಿಯವರಿಗೆ ಬಿಸಿಯೂಟ ಜವಾಬ್ದಾರಿ ವಿರೋಧಿಸಿ ಪ್ರತಿಭಟನೆ