ಕನ್ನಡಪ್ರಭ ವಾರ್ತೆ ಚಿಂತಾಮಣಿ
ಸರ್ಕಾರವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿ ಪಡೆಯುವ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ರೈತರಿಗೆ ಹಾಗೂ ನಿರ್ದೇಶಕರಿಗೆ ಮನವರಿಕೆ ಮಾಡಿಕೊಂಡು ತರಬೇತಿಯ ಅನುಕೂಲಗಳನ್ನು ತಿಳಿಸಿಕೊಟ್ಟು ಒಕ್ಕೂಟವನ್ನು ಮತ್ತಷ್ಟು ಗಟ್ಟಿಗೊಳಿಸಬಹುದಾಗಿದೆಯೆಂದು ಸಹಕಾರ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ನವೀನ್ ನುಡಿದರು.ನಗರದ ಹೊರ ವಲಯದ ಕಟಮಾಚನಹಳ್ಳಿ ಆರ್‌ಕೆಎನ್ ಕನ್ವೆಷನ್ ಮಂಟಪದಲ್ಲಿ ಕರ್ನಾಟಕ ಸಹಕಾರ ಮಹಾಮಂಡಳ ನಿಗಮ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ನಿಗಮ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಿಂತಾಮಣಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಜಿಲ್ಲಾಮಟ್ಟದ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಹಕಾರ ಕ್ಷೇತ್ರದಿಂದ ರೈತರ ಜೀವನ ಹಸನಾಗುತ್ತದೆ, ರೈತರ ಜೀವನಾಡಿ ಹೈನುಗಾರಿಕೆಯಾಗಿದ್ದು ಹಾಲು ಉತ್ಪಾದನೆಯ ಹೆಚ್ಚಳ, ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಹಸುಗಳಿಗೆ ನೀಡಬೇಕಾದ ಪೌಷ್ಠಿಕಾಂಶವುಳ್ಳ ಆಹಾರ ಒದಗಿಸುವುದು ಹಾಗೂ ಆರೈಕೆಯಿಂದ ರೈತರು ಹಸುಗಳಿಂದ ಹೆಚ್ಚಿನ ಹಾಲು ಉತ್ಪಾದನೆ ಮಾಡಲು ಸಹಾಯಕವಾಗುತ್ತದೆಂದರು.2025ರ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಗುಜರಾತಿನ ಸಹಕಾರ ಸಂಘದಿಂದ ಬೆಳೆದುಬಂದ ರಾಜಕಾರಣಿಯಾಗಿದ್ದು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಸಹಕಾರ ಕ್ಷೇತ್ರವು ಎಲ್ಲೆಡೆ ಪಸರಿಸುತ್ತಿದೆ ಎಂದರು.
ಮಾಜಿ ನಿರ್ದೇಶಕ ಊಲವಾಡಿ ವೈ.ಬಿ. ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ಹೈನುಗಾರಿಕೆಯ ಮೇಲೆ ಅವಲಂಬಿತರಾಗಿರುವ ಜಿಲ್ಲೆಯೆಂದರೆ ಕೋಲಾರ ಅವಿಭಜಿತ ಜಿಲ್ಲೆಯಾಗಿದೆ. ಇಲ್ಲಿ ಮಳೆಯನ್ನೇ ನಂಬಿ ರೈತರು ಉಳುಮೆ ಮಾಡುತ್ತಾರೆ. ಇಂತಹ ಬರಡು ಪ್ರದೇಶದಲ್ಲಿ 1500 ಅಡಿಗಳಿಗೂ ಹೆಚ್ಚು ಅಳದವರೆಗೆ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಸಿಗದೇ ಹಲವು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು ಮಾರಾಟ ಮಾಡುವುದರ ಮೂಲಕ ತಮ್ಮ ಜೀವನೋಪಾಯ ಮತ್ತು ಕುಟುಂಬ ಪೋಷಣೆ ಮಾಡುತ್ತಿದ್ದಾರೆ ಎಂದರು.ಬಮೂಲ್‌ನ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಮ್ಮ ಬಮೂಲ್ ವ್ಯಾಪ್ತಿಗೆ ಬರುವ ಪ್ರತಿಗ್ರಾಮದಲ್ಲಿನ ಹಾಲು ಉತ್ಪಾದಕರಿಗೆ 1 ಲಕ್ಷ ರು.ವರೆಗೂ ಹಸು ಖರೀದಿಸಲು ಸಾಲ ನೀಡಿ ಅವರ ಕುಟುಂಬದ ಏಳಿಗೆಗೆ ಕಾರಣೀಭೂತರಾಗಿದ್ದು ಇಲ್ಲೂ ಇಂತಹ ಕಾರ್ಯಗಳು ಮಾಡಬೇಕಾದರೆ ಚಿಮೂಲ್ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮದೇ ನಿರ್ದೇಶಕರನ್ನು ಗೆಲ್ಲಿಸಿಕೊಂಡಾಗ ಇಲ್ಲಿಯೂ ಈ ರೀತಿಯ ಯೋಜನೆಗಳನ್ನು ಜಾರಿತರಲು ಅನುಕೂಲವಾಗುತ್ತದೆಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎಚ್.ವಿ.ನಾಗರಾಜ್, ನರಸಿಂಹರೆಡ್ಡಿ, ಶ್ರೀನಿವಾಸರೆಡ್ಡಿ, ಶಿವಕುಮಾರ್, ಡಿ.ಎಂ.ಮಹೇಶ್, ವನಿತ, ಕಾವ್ಯಾ, ಪಿ.ವಿವೆಂಕಟರಮಣ, ಸಂತೋಷ್ ಕುಮಾರ್, ಶಬ್ಬೀರ್ ಪಾಷ, ಗುಲಾಬ್‌ಜಾನ್, ಸತೀಶ್ ಹೊಂಡದ್, ವಸಂತಲಕ್ಷ್ಮೀ, ವಿನಯ್ ಕುಮಾರ್ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.