ಕೇಂದ್ರ ನೆರವು ಕೊಟ್ರೆ ರೈತರ ಸಾಲ ಮನ್ನಾ: ಸಿಎಂ

KannadaprabhaNewsNetwork |  
Published : Sep 25, 2026, 02:00 AM IST
ಸಿಎಂ ಡಿಕೆಶಿ ಭಾಷಣ | Kannada Prabha

ಸಾರಾಂಶ

‘ರಾಜ್ಯದಲ್ಲಿ ಭೀಕರ ಬರ ಎದುರಾಗಿದ್ದು ರೈತರನ್ನು ನಾವು ಬದುಕಿಸಬೇಕು. ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ರು. ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನೂ ಮನ್ನಾ ಮಾಡಲಿ. ಕೇಂದ್ರ ನೆರವು ನೀಡಿದರೆ ರಾಜ್ಯದ ಪಾಲನ್ನು ಭರಿಸಿ ಸಾಲಮನ್ನಾ ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉಭಯ ಸದನಗಳಲ್ಲಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಮಂಡಲ

‘ರಾಜ್ಯದಲ್ಲಿ ಭೀಕರ ಬರ ಎದುರಾಗಿದ್ದು ರೈತರನ್ನು ನಾವು ಬದುಕಿಸಬೇಕು. ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ರು. ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನೂ ಮನ್ನಾ ಮಾಡಲಿ. ಕೇಂದ್ರ ನೆರವು ನೀಡಿದರೆ ರಾಜ್ಯದ ಪಾಲನ್ನು ಭರಿಸಿ ಸಾಲಮನ್ನಾ ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉಭಯ ಸದನಗಳಲ್ಲಿ ಘೋಷಿಸಿದರು.

ಇದೇ ವೇಳೆ ಸಾಲ ಮನ್ನಾಗೆ ನೆರವು ನೀಡುವಂತೆ ಬೇಕಿದ್ದರೆ ಕೇಂದ್ರ ಸರ್ಕಾರವನ್ನು ಬೇಡಿಕೊಳ್ಳೋಣ. ಪ್ರತಿ ಪಕ್ಷದ ನಾಯಕರು ಜೊತೆಗೆ ಬರಲಿ. 60:40, 50:50, 70:30 ಯಾವ ಸೂತ್ರಕ್ಕಾದರೂ ಸಿದ್ಧ, ಕೇಂದ್ರ ನೆರವು ನೀಡಿದರೆ ರಾಜ್ಯ ಸರ್ಕಾರದಲ್ಲಿ ಕೆಲ ಕಾರ್ಯಕ್ರಮಗಳನ್ನು ನಿಲ್ಲಿಸಿ ಆದರೂ ರೈತರಿಗೆ ಸಾಲ ಮನ್ನಾ ಮಾಡೋಣ ಎಂದು ಹೇಳಿದರು.

ಉಭಯ ಸದನಗಳಲ್ಲಿ ಬರಗಾಲದ ಮೇಲಿನ ಚರ್ಚೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉತ್ತರಿಸಿ ಬರಪೀಡಿತ ಪ್ರದೇಶದ ರೈತರಿಗೆ 2,500 ರು. ಇನ್‌ಪುಟ್ ಸಬ್ಸಿಡಿ ಸೇರಿದಂತೆ ಕೆಲ ಘೋಷಣೆ ಮಾಡಿದರು.

ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೂರಕವಾಗಿ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಬರುವಂತೆ ಸವಾಲು ಹಾಕಿದರು.

ಇದಕ್ಕೆ ಒಪ್ಪದ ಪ್ರತಿಪಕ್ಷ ಸದಸ್ಯರು ಇದು ಸಗಣಿ ಸಾರಿಸುವ ಕೆಲಸ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲಿ, ಇಲ್ಲದಿದ್ದರೆ ಪ್ರತಿ ಎಕರೆಗೆ ಕನಿಷ್ಠ 25,000 ರು. ಬರ ಪರಿಹಾರ ನೀಡಲಿ. 2,500 ರು. ಇನ್‌ಪುಟ್‌ ಸಬ್ಸಿಡಿ ದಸರಾ ಆಚರಣೆ ವೇಳೆ ಸಗಣಿ ಸಾರಿಸುವ ಖರ್ಚಿಗೂ ಆಗುವುದಿಲ್ಲ ಎಂದು ಹೇಳಿ ಉಭಯ ಸದನಗಳಲ್ಲೂ ಸಭಾತ್ಯಾಗ ಮಾಡಿದರು.

ರೈತರು ಹೌದೋ ಅಲ್ಲವೋ ಸಾಬೀತುಪಡಿಸಲಿ:

ಇದಕ್ಕೂ ಮೊದಲು ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ‘ಡಿ.ಕೆ. ಶಿವಕುಮಾರ್‌ ಅವರಿಗೆ ಈಗ ರಿಯಲ್‌ ಎಸ್ಟೇಟ್‌ ಬ್ರ್ಯಾಂಡ್‌ ಇದೆ. ಅವರು ರೈತರು ಹೌದೋ ಅಲ್ಲವೋ ಎಂಬುದನ್ನು ಸಾಬೀತುಪಡಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗುವುದಿಲ್ಲ. ಕೆಂಪೇಗೌಡರ ಮಗನಾಗಿ ಸಾಲಮನ್ನಾ ಮಾಡಬೇಕು ಇಲ್ಲದಿದ್ದರೆ, ಎಕರೆಗೆ 25,000 ರು. ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ರೈತರ ಸಾಲಮನ್ನಾಗೆ ಕೇಳಿದ್ದಾರೆ. ನಾನು ಕಲಬುರಗಿಯಲ್ಲಿ ಸಾಲ ಮನ್ನಾ ಪರಿಶೀಲನೆ ಮಾಡುತ್ತೇನೆ ಎಂದಿದ್ದೇನೆಯೇ ಹೊರತು ಮಾಡುತ್ತೇನೆ ಎಂದು ಹೇಳಿಲ್ಲ. ಹಿಂದೆ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಬೆಂಬಲಿತ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿದ್ದಾರೆ. 80 ಶಾಸಕರ ಸಂಖ್ಯಾಬಲವಿದ್ದ ನಾವು ಬೆಂಬಲ ನೀಡದೇ ಇದ್ದಿದ್ದರೆ 38 ಶಾಸಕರ ಬೆಂಬಲವಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಲು ಆಗುತ್ತಿತ್ತೇ ಎಂದು ಪ್ರಶ್ನಿಸಿದರು.

ನಾವೆಲ್ಲರೂ ಒಟ್ಟಾಗಿ ಮೋದಿ ಬಳಿ ಹೋಗೋಣ:

ನೀವೆಲ್ಲರೂ ಸರ್ವಪಕ್ಷ ನಿಯೋಗದಲ್ಲಿ ಬರುವುದಾಗಿ ತಿಳಿಸಿದ್ದೀರಿ. ನಾವೆಲ್ಲರೂ ಒಟ್ಟಾಗಿ ಹೋಗೋಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರನ್ನು ಬೇಡಿಕೊಳ್ಳೋಣ. ಕೇಂದ್ರ ಕೈಗಾರಿಕೋದ್ಯಮಿಗಳಿಗೆ ಲಕ್ಷಾಂತರ ಕೋಟಿ ಸಾಲ ಮಾಡಿದ್ದು, ರೈತರ ಸಾಲವನ್ನು ಮನ್ನಾ ಮಾಡಲಿ. ಬೇಕಿದ್ದರೆ ಎಲ್ಲಾ ಕಾರ್ಯಕ್ರಮ ನಿಲ್ಲಿಸಿ ರೈತರಿಗಾಗಿ ಈ ತೀರ್ಮಾನ ಮಾಡುತ್ತೇನೆ. 50:50, 60:40, 70:30 ಯಾವ ಸೂತ್ರಕ್ಕಾದರೂ ಸರಿ ನಮಗೆ ಕೇಂದ್ರ ಸರ್ಕಾರದಿಂದ ಏನಾದರೂ ಕೊಡಿಸಿ ಎಂದು ವಿರೋಧ ಪಕ್ಷದ ನಾಯಕರಿಗೆ ಆಗ್ರಹಿಸಿದರು.

ಕೋರ್ಟ್‌ಗೆ ಹೋಗಿ ಪರಿಹಾರ ಪಡೆದಿದ್ದೇವೆ:ಒಕ್ಕೂಟ ವ್ಯವಸ್ಥೆಯಲ್ಲಿ ಕೋರ್ಟ್‌ ಮೆಟ್ಟಿಲೇರಿ 3,000 ಕೋಟಿ ರು. ಬರ ಪರಿಹಾರ ಪಡೆಯುವಂತಾಯಿತು. ಬಿಜೆಪಿಯ ಒಬ್ಬ ಸಂಸದರೂ ಪ್ರಧಾನಿ ಬಳಿ ಬಾಯಿ ಬಿಡಲಿಲ್ಲ. ಪ್ರತಿಪಕ್ಷ ನಾಯಕ ಅಶೋಕ್‌ ಮಾತ್ರ ಮಾತನಾಡಿದರು. ಅವರಿಗೆ ಸೆಲ್ಯೂಟ್ ಹೇಳುತ್ತೇನೆ. ಈಗಲೂ ನೀವು ಒಪ್ಪಿದ ಕೂಡಲೇ ನಾನು ಪ್ರಧಾನಮಂತ್ರಿಗಳಿಗೆ ಸಮಯಾವಕಾಶ ಕೋರಿ ಪತ್ರ ಬರೆಯುತ್ತೇನೆ. ಬನ್ನಿ ಹೋಗೋಣ ಎಂದು ಸವಾಲು ಹಾಕಿದರು.

ನಾನು ರಿಯಲ್‌ ಎಸ್ಟೇಟ್‌ ಹೌದು:ಬರದ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಬಿಜೆಪಿಯವರಿಗೆ ಆಸಕ್ತಿ ಇಲ್ಲದಿದ್ದರೂ ನಾನೇ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಮುಖ್ಯಮಂತ್ರಿ ಆದ ಮೊದಲ ತಿಂಗಳೇ ಆಂಧ್ರ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿ ಜತೆ ಚರ್ಚಿಸಿ ನದಿ ಜೋಡಣೆ ವಿಚಾರ ಪ್ರಸ್ತಾಪಿಸಿದ್ದೇನೆ. ನಾನು ರೈತರಿಗಾಗಿ ಮಾಡಿಲ್ಲವೇ? ನಾನು ರಿಯಲ್‌ ಎಸ್ಟೇಟಾ? ಹೌದು ನಾನು ಬೆಂಗಳೂರಿನ ಜಿಲ್ಲೆಯವನು. ಹೀಗಾಗಿ ರಿಯಲ್‌ ಎಸ್ಟೇಟ್ ಇರುವುದು ಸಹಜ ಎಂದು ಶಿವಕುಮಾರ್‌ ಹೇಳಿದರು.

ಪ್ರತಿ ಯುನಿಟ್ 22 ರು. ನೀಡಿ ವಿದ್ಯುತ್‌ ಖರೀದಿ ಸಂಕಷ್ಟ:

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಸಮಸ್ಯೆಯಾಗಿದೆ.ಕೆ.ಜೆ ಜಾರ್ಜ್ ಅವರು ಪ್ರತಿ ಯುನಿಟ್ ಗೆ 22 ರು. ನೀಡಿ ವಿದ್ಯುತ್ ಖರೀದಿಸುವ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ಪ್ರತಿ ವರ್ಷ ನಮ್ಮಲ್ಲಿ 10% ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಆದರೂ ಅಗತ್ಯ ವಿದ್ಯುತ್ ಪೂರೈಸಲು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆರ್ಥಿಕ ವಿಚಾರದಲ್ಲಿ ಸಾಲವನ್ನು ನಾನೂ ಮಾಡಬಲ್ಲೆ. ಆದರೆ ಈಗಷ್ಟೇ ಮುಖ್ಯಮಂತ್ರಿ ಆಗಿದ್ದೇನೆ ಇಲಾಖೆ ತಿಳಿದುಕೊಳ್ಳಬೇಕು. ಆರ್ಥಿಕ ಶಿಸ್ತು ಕಾಪಾಡಬೇಕು, ಹೀಗಾಗಿ ನಿಯಮ ಮೀರಲು ಇಷ್ಟವಿಲ್ಲ. ನೀರಾವರಿ ಇಲಾಖೆಯ ಬಜೆಟ್‌ 16,000 ಕೋಟಿ ರು. ಆದರೆ 1.25 ಲಕ್ಷ ಕೋಟಿಯಷ್ಟು ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕೆ 70 ಸಾವಿರ ಕೋಟಿ ಬೇಕಾಗಿದೆ. ಬಿಜೆಪಿ ಸರ್ಕಾರ ಎಷ್ಟು ಕೋಟಿ ಹಣದ ಯೋಜನೆ ಕೊಟ್ಟು ಹೋಗಿದ್ದಾರೆ ಎಂದು ಪಟ್ಟಿ ಓದಲೇ? ಎಂದು ತರಾಟೆಗೆ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪರಿಹಾರ ಕಾಮಗಾರಿ ಕೈಗೊಳ್ಳಿ: ಪ್ರದೀಪ ಶೆಟ್ಟರ್‌
ರೈತರ ಬಿತ್ತನೆಗೆ ಬಿಸ್ಮಿಲ್ಲಾಹ ಬಲ: 28ಕ್ಕೂ ಹೆಚ್ಚು ಹೊಸ ಯಂತ್ರಗಳ ಸಿದ್ಧತೆ