ದಾವಣಗೆರೆಯ ನುಜಿವೀಡು ಬೀಜ ಕಂಪನಿಗೆ ಬೀಗ ಜಡಿದ ರೈತರು

KannadaprabhaNewsNetwork |  
Published : May 29, 2025, 02:03 AM IST
28ಕೆಡಿವಿಜಿ6-ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಯರವ ನಾಗತಿಹಳ್ಳಿ ಭತ್ತ ಬೆಳೆಗಾರರಿಗೆ ಆದ ನಷ್ಟದ ಬಗ್ಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿಮಂಜುನಾಥ ಇತರರು ವಿವರಿಸುತ್ತಿರುವುದು. .................28ಕೆಡಿವಿಜಿ7, 8-ದಾವಣಗೆರೆ ಪಿಬಿ ರಸ್ತೆಯಲ್ಲಿ ನುಜಿವೀಡು ಬೀಜ ಕಂಪನಿಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಬೀಗ ಜಡಿದು ಯರವ ನಾಗತಿಹಳ್ಳಿ ಗ್ರಾಮದ ಭತ್ತ ಬೆಳೆಗಾರರು ಪ್ರತಿಭಟಿಸುತ್ತಿರುವುದು. ..............28ಕೆಡಿವಿಜಿ9-ದಾವಣಗೆರೆಯ ನುಜಿವೀಡು ಬೀಜ ಕಂಪನಿಯ ಅನ್ನಪೂರ್ಣ ಪಾಕೆಟ್‌ ಭತ್ತದ ಬೀಜ ನಾಟಿ ಮೂಡಿ, ಮೂರು ವಿವಿಧ ರೀತಿಯ ಭತ್ತ ಬೆಳೆದು ನಷ್ಟವಾದ ಯರವ ನಾಗತಿಹಳ್ಳಿ ಗ್ರಾಮದ ರೈತರ ಮುಖದಲ್ಲಿ ಆತಂಕದ ಛಾಯೆ ಮನೆ ಮಾಡಿದೆ. | Kannada Prabha

ಸಾರಾಂಶ

ನುಜಿವೀಡು ಕಂಪನಿಯ ಭತ್ತದ ತಳಿ ನಾಟಿ ಮಾಡಿ, ಮೋಸ ಹೋದ ತಾಲೂಕಿನ ಯರವ ನಾಗತಿಹಳ್ಳಿ ಗ್ರಾಮದ ನೂರಾರು ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದಲ್ಲಿ ಕಂಪನಿಯ ಬೀಜ ಮಾರಾಟ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿದರು.

ಸೂಕ್ತ ಪರಿಹಾರಕ್ಕೆ ರೈತ ಸಂಘ ಆಗ್ರಹ । ಅನ್ನಪೂರ್ಣ ಪ್ಯಾಕೆಟ್ ಭತ್ತ ಬೀಜ ನಾಟಿ ಮಾಡಲು ಸಲಹೆ । ಸೂಕ್ತ ಕ್ರಮಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ನುಜಿವೀಡು ಕಂಪನಿಯ ಭತ್ತದ ತಳಿ ನಾಟಿ ಮಾಡಿ, ಮೋಸ ಹೋದ ತಾಲೂಕಿನ ಯರವ ನಾಗತಿಹಳ್ಳಿ ಗ್ರಾಮದ ನೂರಾರು ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ನಗರದಲ್ಲಿ ಕಂಪನಿಯ ಬೀಜ ಮಾರಾಟ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿದರು.

ನಗರದ ಪಿಬಿ ರಸ್ತೆಯ ಶ್ರೀ ಮಲ್ಲಿಕಾರ್ಜುನ ಐಟಿಐ ಕಾಲೇಜು ಬಳಿ ಇರುವ ನುಡಿವೀಡು ಸೀಡ್ಸ್ ಕಂಪನಿಯ ಗೋದಾಮಿಗೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಬೀಗ ಜಡಿದ ಯರವ ನಾಗತಿಹಳ್ಳಿ ಗ್ರಾಮದ ರೈತರು ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತರಳಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಬಳಿ ನುಜಿವೀಡು ಕಂಪನಿಯ ಭತ್ತ ನಾಟಿ ಮಾಡಿ, ಮೋಸ ಹೋದ ಬಳಿ ಅಳಲು ತೋಡಿಕೊಂಡರು.

ಇದೇ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ, ನುಡಿವೀಡು ಕಂಪನಿಯ ಅನ್ನಪೂರ್ಣ ಹೆಸರಿನ ತಲಾ 10 ಕೆಜಿ ತೂಕದ 50 ಪಾಕೆಟ್‌ ಭತ್ತದ ಬೀಜಗಳನ್ನು ಯರವ ನಾಗತಿಹಳ್ಳಿ ಗ್ರಾಮದ ನೂರಾರು ರೈತರು ಖರೀದಿಸಿ, ಬೇಸಿಗೆ ಹಂಗಾಮಿನಲ್ಲಿ ಸಸಿ ಮಾಡಿ, ನಾಟಿ ಮಾಡಿದ್ದರು. ಹೀಗೆ ನಾಟಿ ಮಾಡಿದ್ದ ಭತ್ತದಲ್ಲಿ ಈಗ ವಿವಿಧ ಮೂರು ತಳಿಯ ಭತ್ತ ಬೆಳೆದು ನಿಂತಿದೆ. ಒಂದೇ ಬಾರಿಗೆ ಎಲ್ಲವೂ ತೆನೆ ಬಿಟ್ಟರೆ, ಅದು ಒಂದೇ ತಳಿಯ ಬೀಜವಾಗಿರುತ್ತದೆ ಎಂದರು.

ಈಗ ರೈತರ ಗದ್ದೆಯಲ್ಲಿ ಕೆಲ ಸಸಿಗಳು ಕೊಯ್ಲಿಗೆ ಬಂದಿದ್ದರೆ, ಮತ್ತೆ ಕೆಲವು ಹಸಿರು ತೆನೆ ಹೊತ್ತು ಹಾಗೆಯೇ ನಿಂತಿವೆ. ಮತ್ತೆ ಕೆಲವು ಭತ್ತ ಸಂಪೂರ್ಣ ಒಳಗಿ ಕಾಳುಗಳು ಉದುರುತ್ತಿವೆ. ಹೀಗೆ ಮೂರು ರೀತಿಯ ತಳಿ ಬೀಜಗಳು ರೈತರ ಗದ್ದೆಗಳಲ್ಲಿ ಬೆಳೆದು ನಿಂತಿದ್ದು, ಸಂಪೂರ್ಣ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕಂಪನಿ ರೈತರಿಗೆ ಪೂರೈಸಿದೆ. ಈ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ದೂರು ನೀಡಿದರೆ, ವಿಜ್ಞಾನಿಗಳನ್ನು ಕರೆಸುವುದಾಗಿ ಹೇಳಿ 15 ದಿನವಾದರೂ ಯಾರೊಬ್ಬರೂ ಬಂದಿಲ್ಲ ಎಂದು ದೂರಿದರು.

ಕೃಷಿ ತಜ್ಞರು ಯರವ ನಾಗತಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿಲ್ಲ. ಇದಕ್ಕೂ ಮುನ್ನ ಕಂಪನಿಯ ಪರವಾಗಿ ಬಂದಿದ್ದ ವ್ಯವಸ್ಥಾಪಕ ಚನ್ನೇಶ ಎಂಬುವರು ಇದು ಬಿತ್ತನೆ ಬೀಜದಲ್ಲಿ ಆದ ಸಮಸ್ಯೆಯೆಂಬುದನ್ನು ಒಪ್ಪಿಕೊಂಡಿದ್ದರು. ಈಗ ಅದೇ ವ್ಯಕ್ತಿ ಗ್ರಾಮಸ್ಥರ ಸಿಗದೆ ತಲೆ ಮರೆಸಿಕೊಂಡಿದ್ದಾರೆ. ಕಂಪನಿಯವೇ ಈ ಭತ್ತವನ್ನು ಕೊಯ್ಲು ಮಾಡಿಕೊಂಡು ಹೋಗಬೇಕು. ಪ್ರತಿ ಎಕರೆಗೆ 50 ಕ್ವಿಂಟಾಲ್‌ ಇಳುವರಿಯಂತೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ 2300 ರು.ನಂತೆ ದರ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಅಹವಾರು ಆಲಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ, ತಕ್ಷಣವೇ ಕಂಪನಿಗೆ ನೋಟೀಸ್ ಜಾರಿ ಮಾಡಿ, ಬೀಜ ಮಾರಾಟ ತಡೆಯುವಂತೆ ಸೂಚಿಸಿದರು.

ರೈತ ಮುಖಂಡರಾದ ಹೂವಿನಮಡು ನಾಗರಾಜ, ಚಿನ್ನಸಮುದ್ರದ ಭೀಮಣ್ಣ, ಗುಮ್ಮನೂರು ರುದ್ರೇಶ, ಭೀಮೇಶ, ಬೋರಗೊಂಡನಹಳ್ಳಿ ಕಲ್ಲೇಶ, ಆಲೂರು ಪರಶುರಾಮ, ಯರವನಾಗತಿಹಳ್ಳಿ ರುದ್ರಪ್ಪ, ಓಬಳೇಶಪ್ಪ, ಅಣ್ಣಪ್ಪ, ಆನಗೋಡು ಭೀಮಣ್ಣ ಇತರರು ಇದ್ದರು.

PREV

Recommended Stories

ಯಾವುದೇ ಜಾತಿಯ ಬಗ್ಗೆ ಹೇಳಿಕೆ ನೀಡಿಲ್ಲ: ರಂಭಾಪುರಿ ಶ್ರೀ ಸ್ಪಷ್ಟನೆ
ರಂಭಾಪುರಿ ಶ್ರೀ ವಿರುದ್ಧ ದಲಿತ ಮಠಾಧೀಶರ ಕಿಡಿ