ರೈತರು ಕೃಷಿ ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಿ: ಚಲುವರಾಯಸ್ವಾಮಿ

KannadaprabhaNewsNetwork | Published : Dec 17, 2024 12:46 AM

ಸಾರಾಂಶ

ಆಧುನಿಕ ತಂತ್ರಜ್ಞಾನದ ಅಳವಡಿಕೆ ವೈಜ್ಞಾನಿಕ ಬೇಸಾಯದಿಂದ ರೈತರು ಹೆಚ್ಚು ಹಣ ಸಂಪಾದಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕೃಷಿ ಬಗ್ಗೆ ಆಸಕ್ತಿ ವಹಿಸಬೇಕು. ಹೊಸ ತಂತ್ರಜ್ಞಾನಗಳಿಂದ ಯುವಕರು ಹಳ್ಳಿಗಳಲ್ಲಿಯೇ ಉಳಿದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇಲಾಖೆಯ ಸವಲತ್ತುಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಗೆ ನೇರವಾಗಿ ಸಿಗುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೃಷಿಯನ್ನೇ ಅವಲಂಬಿಸಿಕೊಂಡಿರುವ ರೈತರ ಬದುಕನ್ನು ಹಸನುಗೊಳಿಸಲು ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ವಿವಿಧ ಯೋಜನೆಯಡಿ ತಾಲೂಕಿನ 380 ಅರ್ಹ ರೈತ ಫಲಾನುಭವಿಗಳಿಗೆ 109 ಲಕ್ಷ ರು. ಮೌಲ್ಯದ ಕೃಷಿ ಪರಿಕರ ವಿತರಿಸಿ ಮಾತನಾಡಿ, ರೈತರು ದೇಶದ ಶಕ್ತಿಯಿದ್ದಂತೆ. ಹಳ್ಳಿಗಳು ಮತ್ತು ಕೃಷಿಕರು ಉಳಿದರೆ ಮಾತ್ರ ದೇಶವೂ ಉಳಿಯುತ್ತದೆ. ದೇಶದ ಆರ್ಥಿಕತೆಯೂ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತಪರ ಆಡಳಿತ ನೀಡುತ್ತಿದೆ ಎಂದರು.

ಆಧುನಿಕ ತಂತ್ರಜ್ಞಾನದ ಅಳವಡಿಕೆ ವೈಜ್ಞಾನಿಕ ಬೇಸಾಯದಿಂದ ರೈತರು ಹೆಚ್ಚು ಹಣ ಸಂಪಾದಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕೃಷಿ ಬಗ್ಗೆ ಆಸಕ್ತಿ ವಹಿಸಬೇಕು. ಹೊಸ ತಂತ್ರಜ್ಞಾನಗಳಿಂದ ಯುವಕರು ಹಳ್ಳಿಗಳಲ್ಲಿಯೇ ಉಳಿದು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇಲಾಖೆಯ ಸವಲತ್ತುಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಗೆ ನೇರವಾಗಿ ಸಿಗುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಇದೇ ವೇಳೆ ಮಳೆಯಾಶ್ರಿತ ಅಭಿವೃದ್ಧಿ ಯೋಜನೆಯಲ್ಲಿ 150 ಫಲಾನುಭವಿಗಳಿಗೆ 45 ಲಕ್ಷ ರು. ವೆಚ್ಚದ ಚಾಪ್‌ಕಟ್ಟರ್ ಜೊತೆಗೆ ಸಮಗ್ರ ಕೃಷಿ ಮಾಡಲು ತಲಾ 30 ಸಾವಿರ ರು. ಸಬ್ಸಿಡಿ ಹಣ, ಸೂಕ್ಷ್ಮ ನೀರಾವರಿ ಯೋಜನೆಯಡಿ 100 ಮಂದಿ ರೈತರಿಗೆ 20 ಲಕ್ಷ ರು. ವೆಚ್ಚದ ಸ್ಪಿಂಕ್ಲರ್ ಪೈಪ್, ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ 55 ಮಂದಿ ರೈತರಿಗೆ 35 ಲಕ್ಷ ರು. ವೆಚ್ಚದ ರೋಟೋವೇಟರ್, ಪವರ್‌ಟಿಲ್ಲರ್, ಚಾಪ್‌ಕಟ್ಟರ್, ಬೆಳೆಕಟಾವು ಯಂತ್ರ, ಕೃಷಿ ಭಾಗ್ಯ ಯೋಜನೆಯಡಿ 25 ರೈತರಿಗೆ 6.65 ಲಕ್ಷ ಮೌಲ್ಯದ ಡೀಸೆಲ್ ಇಂಜಿನ್, ಕೃಷಿ ಸಂಸ್ಕರಣೆ ಯೋಜನೆಯಡಿ 25 ರೈತರಿಗೆ 1.5ಲಕ್ಷ ರು. ವೆಚ್ಚದ ಟಾರ್ಪಲಿನ್, ರಾಗಿ ಫ್ಲೋರ್‌ಮಿಲ್ ಹಾಗೂ ಎಫ್‌ಎನ್‌ಎಸ್ ಯೋಜನೆಯಡಿ 25ಮಂದಿ ರೈತರಿಗೆ 1ಲಕ್ಷ ರು. ವೆಚ್ಚದ ಪಿವಿಸಿ ಪೈಪ್‌ಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್. ಅಶೋಕ್, ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ ಅಶೋಕ್ ಸೇರಿದಂತೆ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ರೈತರು ಇದ್ದರು.

Share this article