ಬೆಳೆ ಹಾನಿ, ವಿಮಾ ಪರಿಹಾರಕ್ಕೆ ಆಗ್ರಹಿಸಿ ರೈತರ ಪಾದಯಾತ್ರೆ

KannadaprabhaNewsNetwork |  
Published : Sep 13, 2025, 02:04 AM IST
12ಎಚ್‌ಯುಬಿ25ರೈತರಿಗೆ ಬೆಳೆ ಹಾನಿ ಮತ್ತು ವಿಮಾ ಪರಿಹಾರ ವಿತರಿಸುವಂತೆ ಆಗ್ರಹಿಸಿ ರತ್ನ ಭಾರತ ರೈತ ಸಮಾಜ ನವದೆಹಲಿ ಸಂಘಟನೆಯಿಂದ ಕುಸುಗಲ್‌ನಿಂದ ಪಾದಯಾತ್ರೆ ನಡೆಯಿತು. | Kannada Prabha

ಸಾರಾಂಶ

ತೀವ್ರ ಮಳೆಯಿಂದ ಹಾನಿ ಅನುಭವಿಸಿದ ರೈತರಿಗೆ ಶೀಘ್ರವೇ ಪರಿಹಾರ ಕಲ್ಪಿಸಬೇಕು

ಹುಬ್ಬಳ್ಳಿ: ರಾಜ್ಯಾದ್ಯಂತ ಕಳೆದ ತಿಂಗಳು ನಿರಂತರ ಸುರಿದ ಮಳೆಯಿಂದ ಮುಂಗಾರು ಹಂಗಾಮಿನ ಹೆಸರು ಇಳುವರಿ ಮೇಲೆ ತೀವ್ರ ಪರಿಣಾಮ ಬೀರಿದ್ದು, ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಬೆಳ್ಳುಳ್ಳಿ ಬೆಳೆ ನಾಶವಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ಸರ್ಕಾರ ಶೀಘ್ರವೇ ರೈತರಿಗೆ ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರತ್ನ ಭಾರತ ರೈತ ಸಮಾಜ ನವದೆಹಲಿ ಸಂಘಟನೆಯಿಂದ ಕುಸುಗಲ್‌ ನಿಂದ ಹುಬ್ಬಳಿ ವರೆಗೆ ಪಾದಯಾತ್ರೆ ಮೂಲಕ ಬಾರಕೋಲ್‌ ಚಳವಳಿ ನಡೆಯಿತು.

ತೀವ್ರ ಮಳೆಯಿಂದ ಹಾನಿ ಅನುಭವಿಸಿದ ರೈತರಿಗೆ ಶೀಘ್ರವೇ ಪರಿಹಾರ ಕಲ್ಪಿಸಬೇಕು. ಅಲ್ಲದೆ, ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯಲ್ಲಿ ರಾಜಕೀಯ ಮಾಡದೇ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರೈತ ಮುಖಂಡರಾದ ಸೋಮಶೇಖರಯ್ಯ ಬೆಳ್ಳೇರಿಮಠ ಮತ್ತು ಹೇಮನಗೌಡ,ಅತೀಯಾದ ಮಳೆಯಿಂದ ಹೆಸರು ಪ್ರತಿ ಎಕರೆಗೆ 50 ಕೆಜಿಯಿಂದ ಕ್ವಿಂಟಲ್ ವರೆಗೆ ಮಾತ್ರ ಬೆಳೆ ಬಂದಿದೆ. ಅದರಲ್ಲೂ ಆಗಸ್ಟ್ ಮಳೆಯಿಂದ ಹೆಸರು ಕಪ್ಪಾಗಿದೆ. ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಹಿಂಗಾರಿ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಸಲು ಹಣವೇ ಇಲ್ಲದಾಗಿದೆ. ಆದ್ದರಿಂದ ಜಿಲ್ಲಾಡಳಿತ ಬೆಳೆಹಾನಿ ಅನುಭವಿಸಿದ ಎಲ್ಲ ರೈತರಿಗೆ ಎಕರೆಗೆ ಕನಿಷ್ಠ ₹30 ಸಾವಿರ ಪರಿಹಾರ ನೀಡಬೇಕು, ರೈತರ ಸಂಪೂರ್ಣ ನಷ್ಟ ಭರಿಸಲು ಸಾಧ್ಯವಿಲ್ಲ, ಈ ಪರಿಹಾರದಿಂದ ಹಿಂಗಾರು ಬಿತ್ತನೆಗೆ ಅನುಕೂಲ ಆಗಲಿದೆ ಎಂದರು.

ಮೊದಲು ಮಳೆ ಬಾರದ ಕಾರಣ ಬೆಳೆ ಬರಲಿಲ್ಲ. ಆ ಮೇಲೆ ಹೆಚ್ಚು ಮಳೆ ಆಗಿದ್ದರಿಂದ ರೋಗ ಬಾಧೆ ಇನ್ನಿಲ್ಲದಂತೆ ಕಾಡಿತು. ಈಗ ರೈತನಿಗೆ ಬೆಳೆ ಹಾನಿ ಪರಿಹಾರ ಸಮರ್ಪಕವಾಗಿ ಬಾರದೇ ಇದ್ದರೆ ಆತ ಮತ್ತಷ್ಟು ಕಷ್ಟ ಅನುಭವಿಸುವಂತಾಗುತ್ತದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಮೆರವಣಿಗೆ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹನುಮಂತಪ್ಪ ಕರಿಲಿಂಗನ್ನವರ, ಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ನೆಲಗುಡ್ಡ, ಪ್ರಕಾಶ ಸವದತ್ತಿ, ಫಕೀರಪ್ಪ ಮತ್ತಿತರರಿದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ