ರೈತರಿಗೆ ವ್ಯವಸಾಯದಲ್ಲಿ ಬದ್ಧತೆ, ಆಸಕ್ತಿ, ಶ್ರಮ ಅಗತ್ಯ: ಎನ್. ಚಲುವರಾಯಸ್ವಾಮಿ

KannadaprabhaNewsNetwork |  
Published : Jun 14, 2025, 02:40 AM ISTUpdated : Jun 14, 2025, 02:41 AM IST
13ಕೆಎಂಎನ್ ಡಿ20 | Kannada Prabha

ಸಾರಾಂಶ

ಕಳೆದ ಬರಗಾಲದಲ್ಲಿ 2.5 ಸಾವಿರ ಕೋಟಿ ರು. ವಿಮಾ ಹಣ ರೈತರಿಗೆ ತಲುಪಿದೆ. ಈ ವರ್ಷ ತೊಗರಿ ಬೆಳೆ ನಷ್ಟವಾದ್ದರಿಂದ ಕಲಬುರಗಿ ಜಿಲ್ಲೆಯ ರೈತರಿಗೆ 600 ಕೋಟಿ ರು. ಪರಿಹಾರ ಸಿಕ್ಕಿದೆ. ಬೆಳೆ ವಿಮೆ ಮಾಡಿಸುವ ಕುರಿತು ಹೆಚ್ಚಿನ ಪ್ರಚಾರ ನಡೆಸಿದರೂ ಕೂಡ ಕೆಲ ರೈತರು ವಿಮೆ ಮಾಡಿಸಲು ಆಸಕ್ತಿ ತೋರದೆ ನಂತರ ಸರ್ಕಾರವನ್ನು ದೂಷಿಸುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೃಷಿ ಭೂಮಿ ನಂಬಿ ಬದ್ಧತೆ, ಆಸಕ್ತಿ ಮತ್ತು ಶ್ರಮದಿಂದ ವ್ಯವಸಾಯ ಮಾಡುವ ರೈತರಿಗೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ದೇವಲಾಪುರ ಗ್ರಾಮದಲ್ಲಿ ರೈತ ಉತ್ಪಾದಕ ಕಂಪನಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ನಾನು ಕೃಷಿ ಸಚಿವನಾದ ನಂತರ ರಾಜ್ಯದ ಹಲವು ಭಾಗಗಳಿಗೆ ಪ್ರವಾಸ ಕೈಗೊಂಡು ಸಣ್ಣ ಪ್ರಮಾಣದಲ್ಲಿ ಜಮೀನು ಹೊಂದಿರುವ ಕೆಲ ರೈತರನ್ನು ಭೇಟಿ ಮಾಡಿದಾಗ, ಸರ್ಕಾರದಿಂದ ಸಿಗುವ ಬಡ್ಡಿರಹಿತ ಸಾಲವನ್ನೂ ಸಹ ನಾವು ಪಡೆದಿಲ್ಲ. ಆದರೂ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂಬ ಮಾತುಗಳನ್ನು ಕೇಳಿ ಆಶ್ಚರ್ಯವಾಯಿತು. ಆದ್ದರಿಂದ ರೈತರು ಶ್ರದ್ಧೆ ಮತ್ತು ಪರಿಶ್ರಮದಿಂದ ವ್ಯವಸಾಯ ಮಾಡುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು ಎಂದರು.

ಕಡಿಮೆ ಜಮೀನು ಹೊಂದಿರುವ ರೈತರೂ ಕೂಡ ಬುದ್ದಿವಂತಿಕೆ ಉಪಯೋಗಿಸಿ ಬೆಳೆಯುವ ಯಾವುದೇ ಬೆಳೆಗಳನ್ನು ಸಂಸ್ಕರಣೆ ಮಾಡಿ ತಾಳ್ಮೆಯಿಂದ ಮೌಲ್ಯವರ್ಧನೆ ಮಾಡುವ ಮೂಲಕ ತನ್ನ ಕುಟುಂಬದ ಎಲ್ಲಾ ಖರ್ಚು ವೆಚ್ಚಗಳನ್ನು ನಿರ್ವಹಿಸಿ, ವರ್ಷಕ್ಕೆ ಹತ್ತರಿಂದ ಇಪ್ಪತ್ತು ಲಕ್ಷ ಲಾಭ ಪಡೆಯುತ್ತಿರುವುದನ್ನು ನಾನು ನೋಡಿದ್ದೇನೆ. ಹಾಗಾಗಿ ರೈತರು ತಾವು ಬೆಳೆಯುವ ಬೆಳೆಗಳನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ಈ ಉದ್ದೇಶಕ್ಕಾಗಿಯೇ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.ಈ ವರ್ಷದಿಂದ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ರಾಜ್ಯ ಸರ್ಕಾರದಿಂದ 9 ಲಕ್ಷ ರು. ಮತ್ತು ಕೇಂದ್ರ ಸರ್ಕಾರದಿಂದ 6 ಲಕ್ಷ ರು. ಸೇರಿ ಒಟ್ಟು 15 ಲಕ್ಷ ರು. ಸಬ್ಸಿಡಿ ಹಣ ಸಿಗುತ್ತದೆ. ಇದಕ್ಕಾಗಿ 206 ಕೋಟಿ ರು. ಹಣವನ್ನು ಮೀಸಲಿರಿಸಲಾಗಿದೆ. ರಾಜ್ಯದ ಯಾವುದೇ ಭಾಗದ ರೈತರು ಇಂತಹ ಯೋಜನೆಗಳನ್ನು ಅಳವಡಿಸಿಕೊಂಡಲ್ಲಿ ಯಾರ ಬಳಿಯೂ ಕೈಚಾಚುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದರು.

ಕಳೆದ ಬರಗಾಲದಲ್ಲಿ 2.5 ಸಾವಿರ ಕೋಟಿ ರು. ವಿಮಾ ಹಣ ರೈತರಿಗೆ ತಲುಪಿದೆ. ಈ ವರ್ಷ ತೊಗರಿ ಬೆಳೆ ನಷ್ಟವಾದ್ದರಿಂದ ಕಲಬುರಗಿ ಜಿಲ್ಲೆಯ ರೈತರಿಗೆ 600 ಕೋಟಿ ರು. ಪರಿಹಾರ ಸಿಕ್ಕಿದೆ. ಬೆಳೆ ವಿಮೆ ಮಾಡಿಸುವ ಕುರಿತು ಹೆಚ್ಚಿನ ಪ್ರಚಾರ ನಡೆಸಿದರೂ ಕೂಡ ಕೆಲ ರೈತರು ವಿಮೆ ಮಾಡಿಸಲು ಆಸಕ್ತಿ ತೋರದೆ ನಂತರ ಸರ್ಕಾರವನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿ, ನೇರ ಮಾರುಕಟ್ಟೆ ಮೂಲಕ ಗ್ರಾಹಕರ ಹಣವನ್ನು ನೇರವಾಗಿ ರೈತರಿಗೆ ತಲುಪಿಸುವ ಮೂಲಕ ಕೃಷಿಯನ್ನು ಲಾಭದಾಯಕವನ್ನಾಗಿಸುವ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸೇರಿದ 16 ಘಟಕ ಸೇರಿ ಒಟ್ಟು 33 ರೈತ ಉತ್ಪಾದಕ ಕಂಪನಿಗಳಿವೆ. ಮೂರು ವರ್ಷದ ಅವಧಿಯಲ್ಲಿ ಸುತ್ತು ನಿಧಿ, ತರಬೇತಿ, ಕಚೇರಿ ಬಾಡಿಗೆ ಸೇರಿದಂತೆ ಇನ್ನಿತರೆ ಉದ್ದೇಶಕ್ಕಾಗಿ 18 ರಿಂದ 24 ಲಕ್ಷ ರು.ನಷ್ಟು ಹಣ ಸರ್ಕಾರದಿಂದ ಸಹಾಯಧನದ ರೂಪದಲ್ಲಿ ಸಿಗಲಿದೆ ಎಂದರು.

ಮನ್ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಮತ್ತು ದೇವಲಾಪುರ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಎನ್.ಜೆ.ರಾಜೇಶ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಎಫ್‌ಒ ಒಕ್ಕೂಟದ ಜಿಲ್ಲಾಧ್ಯಕ್ಷ ಕಾರಸವಾಡಿ ಮಹದೇವ, ಮುಖಂಡರಾದ ಮಾವಿನಕೆರೆ ಸುರೇಶ್, ಉದಯಕಿರಣ್, ಡಿ.ಕೆ.ಸುರೇಶ್, ತಿಬ್ಬನಹಳ್ಳಿ ರಮೇಶ್, ಎನ್.ಕೆ.ವಸಂತಮಣಿ, ಪ್ರೇಮಮ್ಮ ಸೇರಿದಂತೆ ಹಲವರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ