ಕಪ್ಪುತಲೆ ಹುಳು ಬಾಧೆಗೆ ರೈತರು ಆತಂಕ ಪಡುವ ಅಗತ್ಯವಿಲ್ಲ: ಸುಧಾಕರ್‌

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಕಪ್ಪು ತಲೆ ಹುಳು ರೋಗ ನಿಯಂತ್ರಣಕ್ಕೆ ಬರಲಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಎನ್. ಸುಧಾಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ತೆಂಗು ಬೆಳೆಯಲ್ಲಿ ಕಾಣಿಸಿಕೊಂಡಿರುವ ಕಪ್ಪು ತಲೆ ಹುಳಗಳ ರೋಗ ಬಾಧೆ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ, ಈ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಗೊನಿಯೋಜಸ್ ಪರೋಪ ಜೀವಿಗಳನ್ನು ಸಿದ್ಧಪಡಿಸಿದ್ದು, ರೋಗಬಾಧೆ ಇರುವ ತೆಂಗಿನ ತೋಟಗಳಿಗೆ ಈ ಕೀಟಗಳನ್ನು ಬಿಟ್ಟರೆ ಹಲವಾರು ತಿಂಗಳುಗಳ ನಂತರ ಕಪ್ಪು ತಲೆ ಹುಳು ರೋಗ ನಿಯಂತ್ರಣಕ್ಕೆ ಬರಲಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಎನ್. ಸುಧಾಕರ್ ತಿಳಿಸಿದರು.

ತಾಲೂಕಿನ ಮದಲೂರು ಗ್ರಾಮದ ಕಪ್ಪು ತಲೆ ಹುಳು ರೋಗ ಬಾಧಿತ ತೆಂಗಿನ ತೋಟದಲ್ಲಿ ರೈತರಿಗೆ ರೋಗದ ಬಗ್ಗೆ ಪ್ರಾತ್ಯಕ್ಷಿತ ವಿವರಣೆ ನೀಡಿ ಮಾತನಾಡಿದರು. ತಾಲೂಕಿನ ಓಜುಗುಂಟೆ, ಹೊನ್ನಗುಂಡನಹಳ್ಳಿ, ಮದಲೂರು ವ್ಯಾಪ್ತಿಯಲ್ಲಿ ತೆಂಗು ಬೆಳೆಯಲ್ಲಿ ಕಪ್ಪು ತಲೆ ಹುಳಗಳು ರೋಗ ಹೆಚ್ಚಾಗಿ ಕಂಡುಬಂದ ಕಾರಣ, ತೋಟಗಾರಿಕಾ ಇಲಾಖೆ ತಕ್ಷಣ ಕಾರ್ಯ ಪ್ರವೃತ್ತರಾಗಿ ರೈತರಿಗೆ ರೋಗದ ಬಗ್ಗೆ ಸಮಗ್ರ ಅರಿವು ಮೂಡಿಸುವುದರ ಜೊತೆಗೆ, ರೋಗ ನಿಯಂತ್ರಣ ತರುವಂತ ಕೀಟಗಳನ್ನು ಸಹ ಹಂಚಿಕೆ ಮಾಡಿದ್ದೇವೆ. ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಈ ರೋಗ ಹಬ್ಬಿದೆ ಮಳೆಗಾಲದಲ್ಲಿ ಈ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. ಕಪ್ಪು ತಲೆ ಹುಳುರೋಗ ತಾಲೂಕಿನ ಬೇರೆ ಕಡೆ ಕಂಡು ಬಂದರೆ. ರೈತರು ತಕ್ಷಣ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಲಹೆ ಪಡೆಯಬಹುದಾಗಿದೆ ಎಂದರು.

ತಿಪಟೂರು ಕೃಷಿ ವಿಜ್ಞಾನ ಕೇಂದ್ರದ ಮನೋಜ್ ಕುಮಾರ್ ಮಾತನಾಡಿ, ಕಪ್ಪು ತಲೆ ಹುಳು ತೆಂಗಿನ ಹಸಿರು ಗರಿಯ ರಸವನ್ನು ಸಂಪೂರ್ಣವಾಗಿ ಸೇವಿಸುವುದರಿಂದ ತೆಂಗಿನ ಗರಿ ಸಂಪೂರ್ಣವಾಗಿ ಒಣಗಿ ಹೋಗುತ್ತದೆ. ಕಪ್ಪು ತಲೆ ಹುಳು ನಿಯಂತ್ರಣಕ್ಕೆ ಕೃಷಿ ವಿಜ್ಞಾನ ಕೇಂದ್ರದಿಂದ ಗೊನಿಯೋಜಸ್ ಪರೋಪ ಜೀವಿಗಳನ್ನು ಸಂಸ್ಕರಣೆ ಮಾಡಿದ್ದು, ಈ ಕೀಟಗಳು ಕಪ್ಪು ತಲೆ ಹುಳುವಿನ ಸಂತಾನ ವೃದ್ಧಿಯಾಗದಂತೆ ನೋಡಿಕೊಳ್ಳುತ್ತವೆ. ಇದರಿಂದ ತೆಂಗಿನ ಗಿಡಗಳಿಗೆ ಅಂಟಿರುವ ರೋಗ ಕಾಲಕ್ರಮೇಣ ಸಂಪೂರ್ಣ ನಿಯಂತ್ರಣವಾಗಲಿದೆ. ಇಂತಹ ರೋಗಭಾದಿರುವಂತಹ ತೆಂಗಿನ ಬೆಳೆಗಾರರು ತೋಟಗಾರಿಕಾ ಇಲಾಖೆ ಅಧಿಕಾರಿ ಗಳ ಹತ್ತಿರ ಮಾಹಿತಿ ಪಡೆಯಬಹುದು ಎಂದರು.

ಇದೇ ಸಂದರ್ಭದಲ್ಲಿ ಹಲವಾರು ರೈತರಿಗೆ ಗೊನಿಯೋಜಸ್ ಪರೋಪ ಜೀವ ಕೀಟಗಳನ್ನು ವಿತರಣೆ ಮಾಡಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿರಾ ತಾಲೂಕು ಅಧ್ಯಕ್ಷ ಜಿ.ಕೆ. ನವೀನ್ ಕುಮಾರ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ತ್ಯಾಗರಾಜು, ಕೃಷಿ ವಿಜ್ಞಾನ ಕೇಂದ್ರದ ಸುನಿಲ್ ಕುಮಾರ್, ಶಿವಕುಮಾರ್, ರೈತರಾದ ಅನುಪನಹಳ್ಳಿ ಶಾಂತಕುಮಾರ್, ಮಂಜುನಾಥ್, ರಾಜಣ್ಣ ಸೇರಿದಂತೆ ಹಲವಾರು ರೈತರು ಹಾಜರಿದ್ದರು.

Share this article