ರೈತರಿಗೆ ಭೂಮಿಗೆ ಸಂಬಂಧಿಸಿದ ಕಾನೂನು ಅರಿವು ಅಗತ್ಯ

KannadaprabhaNewsNetwork |  
Published : Jun 29, 2026, 01:30 AM IST
೨೮ಶಿರಾ೧: ಶಿರಾ ತಾಲ್ಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮಾತಾ ವಿದ್ಯಾಲಯದಲ್ಲಿ ರೈತರಿಗಾಗಿ  ರಾಜ್ಯ ಮಟ್ಟದ ನಾಯಕತ್ವದ ಶಿಬಿರದಲ್ಲಿ ಭೂಮಿ ಮತ್ತು ಭೂಕಂದಾಯ ಕಾನೂನುಗಳು, ರೈತರ ಹಕ್ಕಗಳು ಮತ್ತು ಪರಿಹಾರ ವಿಷಯಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ರೈತರು ಜಮೀನು, ಭೂಮಿ ಹೊಂದಿರುವುದಷ್ಟೇ ಅಲ್ಲ, ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಮತ್ತು ದಾಖಲಾತಿಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಯೋಜನೆಗಳು, ಭೂ ಸುಧಾರಣೆ, ತಮ್ಮ ಹಕ್ಕನ್ನು ತಾವೇ ಪಡೆಯುವ ಜ್ಞಾನವನ್ನು ಪಡೆದಾಗ ಮಾತ್ರ ಭೂ ಒಡೆತನ ಹೊಂದಿದ್ದಕ್ಕೆ ಸಾರ್ಥಕವಾಗುತ್ತದೆಂದು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರೈತರು ಜಮೀನು, ಭೂಮಿ ಹೊಂದಿರುವುದಷ್ಟೇ ಅಲ್ಲ, ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಮತ್ತು ದಾಖಲಾತಿಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಯೋಜನೆಗಳು, ಭೂ ಸುಧಾರಣೆ, ತಮ್ಮ ಹಕ್ಕನ್ನು ತಾವೇ ಪಡೆಯುವ ಜ್ಞಾನವನ್ನು ಪಡೆದಾಗ ಮಾತ್ರ ಭೂ ಒಡೆತನ ಹೊಂದಿದ್ದಕ್ಕೆ ಸಾರ್ಥಕವಾಗುತ್ತದೆಂದು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಹೇಳಿದರು.

ಅವರು ಶಿರಾ ತಾಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮಾತಾ ವಿದ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನಾಯಕತ್ವದ ಶಿಬಿರದಲ್ಲಿ ಭೂಮಿ ಮತ್ತು ಭೂಕಂದಾಯ ಕಾನೂನುಗಳು, ರೈತರ ಹಕ್ಕಗಳು ಮತ್ತು ಪರಿಹಾರ ವಿಷಯಕುರಿತು ಮಾತನಾಡಿದರು.

ಭೂಕಂದಾಯ ಇತಿಹಾಸವು ಕೇವಲ ತೆರಿಗೆಗಳ ಸಂಗ್ರಹಣೆಯ ಕಥಾನಕವಲ್ಲ ಅದು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ವಿಕಾಸಗೊಂಡಿದ್ದರ ಪ್ರತಿಬಿಂಬವಾಗಿದೆ. ಭೂಮಿ ಎಂಬ ಸಂಪತ್ತು ಮಾನವ ಸಂಸ್ಕೃತಿಯಲ್ಲಿ ಮಹತ್ವ ಹೊಂದಿದೆ. ಪ್ರಾಚೀನ ಕೃಷಿ ಆರ್ಥಿಕತೆಯಿಂದ ಪ್ರಸ್ತುತ ಆಡಳಿತ ವ್ಯವಸ್ಥೆಗಳವರೆಗೆ ಭೂಮಿ ಮತ್ತು ಭೂಕಂದಾಯ ವ್ಯವಸ್ಥೆಗಳ ನಿರ್ವಹಣೆ, ಆಳ್ವಿಕೆ, ನೀತಿಗಳು ಮತ್ತು ವ್ಯಕ್ತಿಗಳ ಜೀವನವನ್ನು ಶಾಶ್ವತವಾಗಿ ರೂಪಿಸುತ್ತವೆ ಎಂದರು.

ಆಧುನಿಕ ಯುಗವು ಭೂಕಂದಾಯ ಆಡಳಿತದಲ್ಲಿ ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಪರಿಚಯಿಸುತ್ತದೆ. ತಂತ್ರಜ್ಞಾನದ ಆಗಮನವು ಕರ್ನಾಟಕದಲ್ಲಿ ’ಭೂಮಿ’ ಯೋಜನೆಯಂತಹ ಡಿಜಿಟಲೀಕರಣ ಉಪಕ್ರಮಗಳ ಮೂಲಕ ಭೂ ದಾಖಲೆಗಳ ನಿರ್ವಹಣೆಯಲ್ಲಿಕ್ರಾಂತಿಯನ್ನುಂಟು ಮಾಡಿದೆ. ಇ - ಆಡಳಿತದ ವೇದಿಕೆ ಪಾರದರ್ಶಕತೆಯನ್ನು ಹೆಚ್ಚಿಸಿದೆ, ಭ್ರಷ್ಟಾಚಾರವನ್ನುಕಡಿಮೆ ಮಾಡಿದೆ ಮತ್ತು ಭೂಮಾಲೀಕರಿಗೆಅವರ ದಾಖಲೆಗಳು ಸುಲಭವಾಗಿದೊರಕುವುದರಿಂದಅವರಿಗೆ ಸಬಲೀಕರಣ ನೀಡಿದೆ ಎಂದು ಹೇಳಿದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ದರೋಡೆಯಾಗುತ್ತಿದೆ, ಭೂ ಸ್ವಾಧೀನ ಪ್ರಕ್ರಿಯೆಗಳನ್ನೆಲ್ಲಾ ನಡೆಸುವ ಮೊದಲು ಸರ್ಕಾರ ಮಾಡಬೇಕಾದ ಪ್ರಪ್ರಥಮ ಕೆಲಸವೇನೆಂದರೆ ಇದುವರೆವಿಗೂ ಕೈಗಾರಿಕಾ ಪ್ರದೇಶಕ್ಕೆ ಎಷ್ಟು ರೈತರನ್ನು ಒಕ್ಕಲೆಬ್ಬಿಸಿದೆ, ಅಂತಹ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದ ಭೂಮಿ ಯಾರ ಒಡೆತನದಲ್ಲಿದೆ, ರೈತರನ್ನು ಒಕ್ಕಲೆಬ್ಬಸಿದ ಮೇಲೆ ಆ ರೈತರ ಬದುಕೇನಾಯಿತು ಎಂಬುದನ್ನು ತಿಳಿಸಬೇಕು. ಎಲ್ಲಾಕ್ಕಿಂತ ಮುಖ್ಯವಾಗಿ ಇಷ್ಟು ಅಮೂಲ್ಯವಾದ ಭೂಮಿಯನ್ನು ವಶಪಡಿಸಿಕೊಂಡು ಯಾರಿಗೆ ಕೊಟ್ಟಿದೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ತಕ್ಷಣವೇ ಈ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು. ಅಲ್ಲಿಯವರೆಗೆ ಯಾವುದೇ ಭೂಸ್ವಾಧೀನಕ್ಕೆ ಕೈ ಹಾಕಬಾರದು, ಸಮಗ್ರ ಮಾಹಿತಿಯನ್ನು ರಾಜ್ಯದ ರೈತರಿಗೆ, ಜನರಿಗೆ ತಿಳಿಸುವ ತನಕ ಯಾವುದೇ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಳ್ಳಬಾರದು. ಅದರ ಬಗ್ಗೆ ವಿವಿರವಾದ ಅಧ್ಯಯನ ಮಾಡಿ ಸಮಾಜಕ್ಕೆ ತಿಳಿಸಬೇಕೆಂದು ಒತ್ತಾಯಿಸಿದರು.

ತಹಸೀಲ್ದಾರ್ ಆನಂದ್ ಕುಮಾರ್ ಮಾತನಾಡಿ ಭೂ ಒಡತನಕ್ಕೆ ಸಂಬಂಧಿಸಿದೆ, ಖಾತೆ, ಸಾಗುವಳಿ ಚೀಟಿ, ಪೌತಿ ಖಾತೆಗಳನ್ನು ಸಮಸ್ಯೆಗಳನ್ನು ಪರಿಹಾರಮಾಡಿ 8 ಸಾವಿರ ರೈತರಿಗೆ ನೆರವು ನೀಡಿರುವುದಾಗಿ ತಿಳಿಸಿದರು.

ಶಿಬಿರದಲ್ಲಿ ರೈತ ಹೋರಾಟಗಾರರಾದ ಅನುಸೂಯಮ್ಮ, ದೊ.ರಂಗನಾಥಗೌಡ, ಪೂಜಾರಪ್ಪ, ಕೆ.ಟಿ.ಗಂಗಾಧರ್, ರಾಮಕೃಷ್ಣ ನೀರಕಲ್ಲು ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಮುಕ್ತ ದೇಶಕ್ಕೆ ಎಲ್ಲರ ಸಹಕಾರ ಅಗತ್ಯ
ಚುಟುಕು ಸಾಹಿತ್ಯ ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡುತ್ತದೆ