ಎಥೆನಾಲ್ ಘಟಕ ಆರಂಭಕ್ಕೆ ರೈತರ ವಿರೋಧ

KannadaprabhaNewsNetwork | Published : Feb 29, 2024 2:00 AM

ಸಾರಾಂಶ

ನಿಯಮಾನುಸಾರ ನದಿ ದಂಡೆ, ಅರಣ್ಯ ಪ್ರದೇಶ ಮತ್ತು ಹಳ್ಳಿಗಳಿರುವ ಕಡೆ ಕಾರ್ಖಾನೆ ಆರಂಭಿಸುವಂತಿಲ್ಲ. ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿದ್ದು, ಇದನ್ನು ಬಚ್ಚಿಟ್ಟು ಸಕ್ಕರೆ ಉದ್ದಿಮೆಗೆ ಪರವಾನಿಗೆ ಪಡೆದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಎಥೆನಾಲ್ ಘಟಕ ಆರಂಭದ ವಿಷಯವಾಗಿ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕೇಂದ್ರ ಪರಿಸರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಅನುಮತಿ ಪಡೆಯಲು ಪ್ರಯತ್ನಿಸುತ್ತಿದೆ. ಇದನ್ನು ವಿರೋಧಿಸಿ ತಾಲೂಕು ರೈತಸಂಘ ಮಾ.1 ರಂದು ಬೆಂಗಳೂರಿನ ಪರಿಸರ ಮಾಲಿನ್ಯ ಇಲಾಖೆಗೆ ಮನವಿ ಸಲ್ಲಿಸಲು ತಾಲೂಕಿನ ವಿವಿಧ ಗ್ರಾಮಗಳ ರೈತರೊಂದಿಗೆ ನಿಯೋಗ ಹೋಗುತ್ತಿರುವುದಾಗಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ತಿಳಿಸಿದರು.

ತಾಲೂಕಿನ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆ ಎದುರು ಎಥೆನಾಲ್ ಘಟಕ ಸ್ಥಾಪನೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಿಯಮಾನುಸಾರ ನದಿ ದಂಡೆ, ಅರಣ್ಯ ಪ್ರದೇಶ ಮತ್ತು ಹಳ್ಳಿಗಳಿರುವ ಕಡೆ ಕಾರ್ಖಾನೆ ಆರಂಭಿಸುವಂತಿಲ್ಲ. ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿದ್ದು, ಇದನ್ನು ಬಚ್ಚಿಟ್ಟು ಸಕ್ಕರೆ ಉದ್ದಿಮೆಗೆ ಪರವಾನಿಗೆ ಪಡೆದಿದೆ ಎಂದರು.

ಸಕ್ಕರೆ ಕಾರ್ಖಾನೆ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಆದರೆ, ಈ ಹಿಂದೆ ಕೋ-ಜನ್ ಘಟಕ ಆರಂಭಿಸಿದ ಪರಿಣಾಮ ಸುತ್ತಮುತ್ತಲ ಜನರ ಬದುಕನ್ನು ನರಕವಾಗಿದೆ. ಇದೀಗ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕ ಆರಂಭಕ್ಕೆ ಸಜ್ಜಾಗಿದ್ದು, ರೈತರ ಬದುಕನ್ನೇ ನಾಶ ಪಡಿಸಲು ಮುಂದಾಗಿದೆ ಎಂದು ಕಿಡಿಕಾರಿದರು.

ಜನರು, ರೈತರ ಬದುಕಿನ ಉಳಿವಿಗೆ ಹೋರಾಟ ಮಾಡುತ್ತಿರುವ ರೈತಸಂಘದ ವಿರುದ್ಧ ಕಾರ್ಖಾನೆ ತನ್ನ ಏಜಂಟರು ಮತ್ತು ಗುತ್ತಿಗೆದಾರರ ಮೂಲಕ ಅಪಪ್ರಚಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಎಥೆನಾಲ್ ಮತ್ತು ಮದ್ಯಸಾರ ಘಟಕ ಆರಂಭಿಸಿ ಹೇಮಾವತಿ ನದಿ ಕಲುಷಿತಗೊಳಿಸುವುದಕ್ಕೆ ನಮ್ಮ ವಿರೋಧವಿದೆ. ಇದರಿಂದ ನೀರನ್ನು ಆಶ್ರಯಿಸಿ ಬದುಕುತ್ತಿರುವ ಕೆ.ಆರ್.ಪೇಟೆ ಪಟ್ಟಣಿಗರು ಮತ್ತು ನದಿ ದಂಡೆಯ ಜನ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ಎಚ್ಚರಿಸಿದರು.

ರಾಜ್ಯ ರೈತಸಂಘ ಹಸಿರು ನ್ಯಾಯಾಲಯಕ್ಕೆ ಹೋಗಿದ್ದು ಅಲ್ಲಿಯೂ ಕಾರ್ಖಾನೆ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕ ಆರಂಭಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ. ಇದರ ಅರಿವಿದ್ದರೂ ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಪರ ಕೆಲಸ ಮಾಡುತ್ತಿದೆ. ಮಾ.6 ರಂದು ಜನಾಭಿಪ್ರಾಯ ಸಂಗ್ರಹ ಸಭೆ ಆಯೋಜಿಸಿದೆ. ಇದನ್ನು ವಿರೋಧಿಸಿ ಮಾ.1 ರಂದು ರೈತಸಂಘ ಬೆಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎದುರು ಅಹವಾಲು ಮಂಡಿಸಿ ಎಥೆನಾಲ್ ಘಟಕ ಸ್ಥಾಪನೆ ವಿರುದ್ಧ ಪ್ರತಿಭಟಿಸಲಿದೆ ಎಂದು ಹೇಳಿದರು.

ಈ ವೇಳೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮಾಜಿ ಅಧ್ಯಕ್ಷ ಪಿ.ಬಿ.ಮಂಚನಹಳ್ಳಿ ನಾಗೇಗೌಡ, ಕರೋಟಿ ತಮ್ಮೇಗೌಡ, ಮಾಕವಳ್ಳಿ ಯೋಗೇಶ್, ನಾರಾಯಣಸ್ವಾಮಿ, ರವಿ ಸೇರಿ ಹಲವರು ಇದ್ದರು.

Share this article