ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಕ್ಕೆ ರೈತರು ಸಂಘಟಿತ

KannadaprabhaNewsNetwork |  
Published : Oct 06, 2026, 02:30 AM IST
ಸಸಸ | Kannada Prabha

ಸಾರಾಂಶ

ಹಿಂಗಾರು ಕೃಷಿಗೆ ಹಾಗೂ ಬೇಸಿಗೆಯಲ್ಲಿ ಜನತೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುವ ಭಯ ಜನತೆಯನ್ನು ಕಾಡುತ್ತಿದೆ.

ವಿ.ಎಂ. ನಾಗಭೂಷಣ ಸಂಡೂರು

ಗಣಿ ಬಾಧಿತ ತಾಲೂಕಾಗಿರುವ ಸಂಡೂರು ತಾಲೂಕಿನಲ್ಲಿ ಅಂತರ್ಜಲದ ಮಟ್ಟ ಹೆಚ್ಚಳ, ಕೃಷಿಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಕುಡಿಯುವ ನೀರಿನ ಸಮಸ್ಯೆಗಳು ಬಾರದಂತೆ ತಡೆಯಲು ಇಲ್ಲಿನ ಸುಮಾರು ೫೦ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸುವ ಯೋಜನೆ ರೂಪಿಸುವತ್ತಾ ಇಲ್ಲಿನ ಸಮಾನ ಮನಸ್ಕ ರೈತರು ಚಿತ್ತ ಹರಿಸಿದ್ದಾರೆ.

ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ೧೮ ಕೆರೆ, ೧೧ ಜಿನುಗು ಕೆರೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಡಿಯಲ್ಲಿ ಒಟ್ಟು ೨೧ ಕೆರೆಗಳಿವೆ.

ಈ ವರ್ಷ ಮಳೆಯ ಕೊರತೆಯಿಂದ ಸಂಡೂರು ತಾಲೂಕಿನಲ್ಲಿ ಒಂದೆಡೆ ಬರ ಪರಿಸ್ಥಿತಿ ಮತ್ತೊಂದೆಡೆ ಕೆರೆಕುಂಟೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿ ಅಂತರ್ಜಲದ ಮಟ್ಟ ದಿನದಿಂದ ಕುಸಿಯುತ್ತಿರುವುದು ರೈತರ ನಿದ್ದೆ ಗೆಡಿಸಿದೆ. ಅಂತರ್ಜಲದ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾದರೆ, ಹಿಂಗಾರು ಕೃಷಿಗೆ ಹಾಗೂ ಬೇಸಿಗೆಯಲ್ಲಿ ಜನತೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುವ ಭಯ ಜನತೆಯನ್ನು ಕಾಡುತ್ತಿದೆ. ಪಕ್ಕದ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನೀರು ಹರಿದು ಬಂದಿದ್ದು, ಸಂಡೂರು ತಾಲೂಕಿನ ರೈತರಿಗೆ ಒಂದು ರೀತಿಯಲ್ಲಿ ಪ್ರೇರಣೆ ನೀಡಿದೆ. ಈ ಹಿನ್ನೆಲೆ ತಾಲೂಕಿನಲ್ಲಿಯ ಕೆರೆಗಳಿಗೆ ತುಂಗಭದ್ರಾ ನದಿ ನೀರನ್ನು ತರಬೇಕೆನ್ನುವ ಆಸೆ ಇಲ್ಲಿನ ರೈತರಲ್ಲಿ ಚಿಗುರೊಡೆದಿದೆ.

ಸಂಡೂರು ತಾಲೂಕು ಜಲ ಸಾಧನಾ ಸಮಿತಿ:

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕಲ್ಪಿಸುವ ಹಿನ್ನೆಲೆ ಸಮಾನ ಮನಸ್ಕ ರೈತರು ಇದೀಗ ಗಣಿ ಬಾಧಿತ ಪ್ರದೇಶಾಭಿವೃದ್ಧಿಗಾಗಿ ಇರುವ ಕೆಎಂಇಆರ್‌ಸಿ ಹಣದಿಂದ ಇಲ್ಲಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ರೂಪಿಸಲು ಜನಪ್ರತಿನಿಧಿ ಹಾಗೂ ಸರ್ಕಾರವನ್ನು ಒತ್ತಾಯಿಸಿ, ಅವರ ಮೂಲಕ ಈ ಯೋಜನೆ ಸಾಕಾರಗೊಳಿಸಿಕೊಳ್ಳುವ ಉದ್ದೇಶದೊಂದಿಗೆ ಸಂಡೂರು ತಾಲೂಕು ಜಲ ಸಾಧನಾ ಸಮಿತಿ ರಚಿಸಿಕೊಂಡಿದ್ದಾರೆ.

ಪೂರ್ವಭಾವಿ ಸಭೆ:

ಈ ಸಮಿತಿಯ ಪೂರ್ವಭಾವಿ ಸಭೆಯು ಶನಿವಾರ ತಾಲೂಕಿನ ಚೋರನೂರು ಹೋಬಳಿಯ ಬೊಮ್ಮಾ ಘಟ್ಟದಲ್ಲಿರುವ ಶ್ರೀಹುಲಿಕುಂಟೆರಾಯ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಮಂಜುನಾಥ, ಬಿ.ಜಿ. ಉಜ್ಜಿನಗೌಡ, ಜಾಫರ್‌ಸಾಬ್, ಮೇಕೆ ಈರಣ್ಣ, ಜಿ.ಕೆ. ನಾಗರಾಜ, ಪಿ. ರವಿಕುಮಾರ್, ವೆಂಕಟೇಶ್, ಹಗರಿ ಬಸವರಾಜಪ್ಪ, ಅಡಿವೆಪ್ಪ, ಬಂಡ್ರಿದುರುಗಪ್ಪ, ಎಚ್. ಮಲಿಯಪ್ಪ, ಹುಲಿಕುಂಟೆಪ್ಪ, ಮೂಲಿಮನೆ ತಿಪ್ಪೇಸ್ವಾಮಿ, ಅಪ್ಪೇನಳ್ಳಿ ಕುಮಾರಸ್ವಾಮಿ, ಮಹೇಶಸ್ವಾಮಿ, ಯರಿಸ್ವಾಮಿರೆಡ್ಡಿ, ಸುಭಾನ್ ಸಾಬ್, ಸಿದ್ಧಲಿಂಗಯ್ಯಸ್ವಾಮಿ, ಮಂಜುನಾಥಗೌಡ, ರುದ್ರೇಶ್, ಸುಬ್ಬಣ್ಣ, ಹೊನ್ನೂರಸ್ವಾಮಿ, ರಘುಪತಿ, ಶಿವಣ್ಣ, ಮೂಲಿಮನೆ ಈರಣ್ಣ ಸೇರಿದಂತೆ ೫೦ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿ ತಾಲೂಕಿನ ಕೆರೆಗಳಿಗಳಲ್ಲಿನ ಹೂಳನ್ನು ತೆರವುಗೊಳಿಸುವುದು ಮತ್ತು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ರೂಪಿಸಿ ಸಾಕಾರದ ಅಗತ್ಯತೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಭೆಯಲ್ಲಿ ಹೋಬಳಿ ಹಾಗೂ ಗ್ರಾಪಂ ಹಂತದಲ್ಲಿ ರೈತರ ಸಭೆ ನಡೆಸಿ ರೈತರನ್ನು ಸಂಘಟಿಸಿ ಈ ಯೋಜನೆ ಕುರಿತಂತೆ ಡಿಪಿಆರ್ ಸಿದ್ಧಪಡಿಸಿ ಸಾಕಾರಗೊಳಿಸಿಕೊಳ್ಳಲು ಸಂಘಟಿತ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ತಾಲೂಕಿನ ಸಮಾನ ಮನಸ್ಕ ರೈತರು ಪಕ್ಷಾತೀತವಾಗಿ ಜಲ ಸಾಧನಾ ಸಮಿತಿ ರಚಿಸಿಕೊಂಡು ಹೋಬಳಿ ಹಾಗೂ ಗ್ರಾಪಂ ಹಂತದಲ್ಲಿ ಸಭೆ ನಡೆಸಿ ಚರ್ಚಿಸಿ ಮುಂದಿನ ಹೋರಾಟಕ್ಕೆ ಸಿದ್ಧರಾಗುತ್ತಿರುವುದು ತಾಲೂಕಿನಲ್ಲಿಯ ಕೆರೆ ತುಂಗಭದ್ರಾ ನದಿ ನೀರಿನಿಂದ ತುಂಬಿಸುವ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆ ಸಾಕಾರಗೊಂಡಲ್ಲಿ ನೀರಿನ ತೊಂದರೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂಬುದು ಎಲ್ಲರ ಆಶಯವಾಗಿದೆ.

ಗಣಿ ಬಾಧಿತ ಪ್ರದೇಶವಾಗಿರುವ ತಾಲೂಕಿನಲ್ಲಿಯ ಪರಿಸರ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಕೆಎಂಇಆರ್‌ಸಿ ಸಂಸ್ಥೆಯ ಬಳಿಯಲ್ಲಿ ಸುಮಾರು ₹೪೦ ಸಾವಿರ ಕೋಟಿ ಹಣವಿದೆ. ತಾಲೂಕಿನ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಲು ಈ ಹಣ ಬಳಸಿಕೊಳ್ಳಬಹುದಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿ ಕೃಷಿ, ಪರಿಸರ, ಹೈನುಗಾರಿಕೆ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ ಎಂದು ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ ತಿಳಿಸಿದ್ದಾರೆ.

ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸಬೇಕೆಂಬುದು ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಯೋಜನೆ ಕಾರ್ಯಗತಗೊಂಡಲ್ಲಿ ರೈತರ ಬಾಳು ಹಸನಾಗಲಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ
ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ