ರೈಲ್ವೆ ಫ್ಲೈಓವರ್‌ಗೆ ಮನೆ ತೆರವು: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Oct 06, 2026, 02:30 AM IST
ರೈಲ್ವೆ ಫ್ಲೈಓವರ್ ಹಾಗೂ ಸರ್ವಿಸ್ ರಸ್ತೆ ಕಾಮಗಾರಿಗೆ ಮನೆಗಳನ್ನು ತೆರವುಗೊಳಿಸುತ್ತಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಗುಡಗೇರಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

2023ರಿಂದ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳೀಯ ನಿವಾಸಿಗಳಿಗೆ ಸಮರ್ಪಕ ಮಾಹಿತಿ ನೀಡದೆ ಮನೆ ಹಾಗೂ ಕಾಂಪೌಂಡ್‌ಗಳನ್ನು ತೆರವುಗೊಳಿಸುತ್ತಿದ್ದಾರೆ.

ಕುಂದಗೋಳ:

ಲಕ್ಷ್ಮೇಶ್ವರ-ಹುಲಗೂರು ಮಾರ್ಗದ ಗುಡಗೇರಿ ಬಳಿ ನಡೆಯುತ್ತಿರುವ ರೈಲ್ವೆ ಫ್ಲೈಓವರ್ ಹಾಗೂ ಸರ್ವೀಸ್‌ ರಸ್ತೆ ಕಾಮಗಾರಿಗೆ ಮನೆಗಳನ್ನು ತೆರವುಗೊಳಿಸುತ್ತಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಗುಡಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

2023ರಿಂದ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳೀಯ ನಿವಾಸಿಗಳಿಗೆ ಸಮರ್ಪಕ ಮಾಹಿತಿ ನೀಡದೆ ಮನೆ ಹಾಗೂ ಕಾಂಪೌಂಡ್‌ಗಳನ್ನು ತೆರವುಗೊಳಿಸುತ್ತಿದ್ದಾರೆ. ಪರಿಹಾರದ ಕುರಿತು ಕೇಳಿದರೆ ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ವಿರೂಪಾಕ್ಷಯ್ಯ ದೇಸಾಯಿ ಮಾತನಾಡಿ, ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಇದುವರೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಾಂಪೌಂಡ್ ಹಾಗೂ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಕುರಿತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ಅಪ್ಪಣ್ಣ ಹುಂಡೆಕಾರ ಮಾತನಾಡಿ, ಶಾಸಕರು ಹಾಗೂ ಜಿಲ್ಲಾ ಸಹಾಯಕ ಆಯುಕ್ತರ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರದ ಬಗ್ಗೆ ಸ್ಪಷ್ಟತೆ ನೀಡಿಲ್ಲ. 70-80 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಬಡ ಕುಟುಂಬಗಳಿಗೂ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಿನ್‌ಶೇತ್ಕಿ ನಿವೇಶನದಲ್ಲಿ 37 ಮನೆಗಳಿದ್ದು, ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿದೆ. ಭೂ ಬಾಡಿಗೆಯಲ್ಲಿ 12, ಸರ್ಕಾರಿ ಸರ್ವೆ ಜಾಗದಲ್ಲಿ 9 ಹಾಗೂ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಎರಡು ಕುಟುಂಬಗಳು ವಾಸಿಸುತ್ತಿವೆ. ಕಾಮಗಾರಿಯಿಂದ ಈ ಕುಟುಂಬಗಳು ಮನೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ಪರ‍್ಯಾಯ ನಿವೇಶನ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಅಧಿಕಾರಿಗಳು ಸೆ. 6ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಕುರಿತು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸೆ. 7ರಂದು ಲಕ್ಷ್ಮೇಶ್ವರ-ಹುಲಗೂರು ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಇದಕ್ಕೂ ಮುನ್ನ ಪ್ರತಿಭಟನಾಕಾರರು ಲಕ್ಷ್ಮೇಶ್ವರ-ಹುಲಗೂರು ಮಾರ್ಗದ ಸಾರಿಗೆ ಬಸ್ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಜು ತಿಮ್ಮನಗೌಡ್ರ, ಉಮೇಶ ಹಿರೇಗೌಡ, ಹನುಮಂತಗೌಡ ಹಿರೇಗೌಡ್ರ, ರವಿರಾಜ್ ಬಸ್ತಿ, ನೂರ್‌ಸಾಬ್ ತಹಶೀಲ್ದಾರ್, ಶಿವನಗೌಡ ಬೊಮ್ಮನಗೌಡ್ರ, ರಾಜು ಮಳಲಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ
ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ