ಧಾರವಾಡ ಜಿಲ್ಲೆಯ ಯಾವುದೇ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದೆ ಇರುವುದನ್ನು ಖಂಡಿಸಿ ರತ್ನ ಭಾರತ ರೈತ ಸಮಾಜದ ಸದಸ್ಯರು ನಗರದ ವಿಮಾನ ನಿಲ್ದಾಣದ ಆವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ:
ಧಾರವಾಡ ಜಿಲ್ಲೆಯ ಯಾವುದೇ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದೆ ಇರುವುದನ್ನು ಖಂಡಿಸಿ ರತ್ನ ಭಾರತ ರೈತ ಸಮಾಜದ ಸದಸ್ಯರು ನಗರದ ವಿಮಾನ ನಿಲ್ದಾಣದ ಆವರಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬರ ಘೋಷಿಸದೆ ರೈತರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ವೇಳೆ ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಿಂದಾಗಿ ಅನ್ನದಾತರು ಆತ್ಮಹತ್ಯೆಯ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
₹500 ಕೋಟಿ ನೀಡಿ:
ಬೆಣ್ಣಿಹಳ್ಳ ಅಭಿವೃದ್ಧಿ ಕಾಮಗಾರಿಗೆ ₹500 ಕೋಟಿ ಅನುದಾನ ನೀಡಬೇಕು. ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ‘ಬಾರುಕೋಲು ಚಳವಳಿ’ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಲ್ಲಿಕಾರ್ಜುನ ಕುನ್ನೂರ, ಮೋಹನಕುಮಾರ ನಡೂರಮಠ, ರಾಜು ಮಲ್ಲಿಗವಾಡ, ಶಂಕರಗೌಡ ನಿಜಲಿಂಗನಗೌಡ, ಶಾಂತಪ್ಪ ದೊಡ್ಡಮನಿ, ರಾಜು ಹೂಗಾರ, ಶಿವಾನಂದ ಕಟಗಿ ಹಾಗೂ ಸಿ.ಎಂ. ಕಟಗಿ ಸೇರಿದಂತೆ ರೈತ ಸಮಾಜದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.