ಕನ್ನಡಪ್ರಭ ವಾರ್ತೆ ಬೇಲೂರು
ಇಲ್ಲಿನ ರೈತರಿಗೆ ಮಂಜೂರಾಗಿದ್ದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ಇಲಾಖೆ ಸರಹದ್ದು ಗುರುತಿಸುವ ನೆಪದಲ್ಲಿ ರೈತರ ಜಮೀನಿನ ಮಧ್ಯಭಾಗದಲ್ಲಿಯೇ ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ಇಲಾಖೆಯ ಸಿಬ್ಬಂದಿ ದೊಡ್ಡ ಕಂದಕದ ಕಾಲುವೆಯನ್ನು ನಿರ್ಮಿಸಿದ್ದರು. ಶನಿವಾರ ರೈತರೆಲ್ಲ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ರೈತ ಮಹಿಳೆಯರು ಸೇರಿಕೊಂಡು ಅರಣ್ಯ ಇಲಾಖೆ ನಿರ್ಮಿಸಿದ್ದ ಕಂದಕವನ್ನು ಮುಚ್ಚಿದ್ದಾರೆ. ರೈತರೆಲ್ಲರೂ ಕೈಯಲ್ಲಿ ಕೆಪಿಆರ್‌ಎಸ್ ಬಾವುಟ ಹಿಡಿದು ಕೆಲ ಹೊತ್ತು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆರೇ, ಗುದ್ದಲಿ ಹಿಡಿದು ಕಾಲುವೆಗೆ ಮಣ್ಣು ತುಂಬಿ ಆಕ್ರೋಶ ವ್ಯಕ್ತಪಡಿಸಿದರು.
ಅಡವಿ ಬಂಟೇನಹಳ್ಳಿ ಗ್ರಾಮದ ರೈತರ ಕೃಷಿ ಭೂಮಿ ಮಧ್ಯಭಾಗದಲ್ಲಿ ಟ್ರಂಚ್ ತೆಗೆಯುವ ಮೂಲಕ ದೌರ್ಜನ್ಯ ಎಸಗಲಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಹಕ್ಕೊತ್ತಾಯವಾಗಿ ಕಂದಕವನ್ನು ಮುಚ್ಚಿದ್ದೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್ ಆರ್ ನವೀನ್ ಕುಮಾರ್ ತಿಳಿಸಿದ್ದಾರೆ.ಊರಿನ ಗೋಮಾಳ ಮತ್ತು ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಕಂದಾಯ ಇಲಾಖೆ ಹಕ್ಕುಪತ್ರ ನೀಡಿರುವ ಪಹಣಿಯಲ್ಲಿ ಅರ್ಹರ ಹೆಸರು ಬರುತ್ತಿದ್ದು ಈ ಭೂಮಿಯನ್ನೇ ಅರಣ್ಯ ಇಲಾಖೆಯವರು ತಮಗೆ ಸೇರಿದ್ದು ಎಂದು ವಾದದೊಂದಿಗೆ ಬಲವಂತವಾಗಿ ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು. ಶನಿವಾರ ರೈತರ ವಿರೋಧಿ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಖಂಡಿಸಿ ರೈತರು ತಮ್ಮ ಭೂಮಿಯಲ್ಲಿ ತೆಗೆದಿದ್ದ ಗುಂಡಿಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ನಡೆಸಿದ್ದಾರೆ. ಈ ಮೂಲಕ ತಮ್ಮ ಹಕ್ಕೊತ್ತಾಯ ಮಾಡಿದ್ದು ಕೂಡಲೇ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಅರ್ಹ ರೈತರು ಅನುಭವದ ಆಧಾರದಲ್ಲಿ ಭೂಮಿಯ ಹಕ್ಕನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಂಟೆನಹಳ್ಳಿ ಗ್ರಾಮದ ವಿರೂಪಾಕ್ಷ, ಸಿದ್ಧ ಮಲ್ಲಪ್ಪ, ಪುಟ್ಟಸ್ವಾಮಿಗೌಡ, ಜಯಣ್ಣ, ಗಂಗಾಧರ, ನಾಗೇಗೌಡ, ಗಣೇಶ, ಕಿರಣ, ಮಲ್ಲೇಶ್, ಯೋಗೇಶ್, ಶಿವೇಗೌಡ, ಶಿವಪ್ಪ ಮತ್ತಿತರರು ಇದ್ದರು.