ಅಸಮರ್ಪಕ ವಿದ್ಯುತ್ ಪೂರೈಕೆ, ಸಿಂಗಲ್ ಫೇಸ್ ವಿದ್ಯುತ್ ಸ್ಥಗಿತ ಮಾಡಿರುವ ಬೆಸ್ಕಾಂ ನಡೆ ವಿರೋಧಿಸಿ ರೈತ ಸಂಘಟನೆಗಳು ಗುರುವಾರ ಪ್ರತ್ಯೆಕ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿವೆ. ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯಕ್ಕೆ ರೈತರ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು ಅಕ್ಟೋಬರ್ 18 ರಂದು ಹೆದ್ದಾರಿ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ । ನಿತ್ಯಏಳು ತಾಸು ವಿದ್ಯುತ್ ಪೂರೈಕೆಗೆ ಪಟ್ಟು ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಅಸಮರ್ಪಕ ವಿದ್ಯುತ್ ಪೂರೈಕೆ, ಸಿಂಗಲ್ ಫೇಸ್ ವಿದ್ಯುತ್ ಸ್ಥಗಿತ ಮಾಡಿರುವ ಬೆಸ್ಕಾಂ ನಡೆ ವಿರೋಧಿಸಿ ರೈತ ಸಂಘಟನೆಗಳು ಗುರುವಾರ ಪ್ರತ್ಯೆಕ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿವೆ. ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯಕ್ಕೆ ರೈತರ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು ಅಕ್ಟೋಬರ್ 18 ರಂದು ಹೆದ್ದಾರಿ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಲೋಡ್ ಶೆಡ್ಡಿಂಗ್ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಿತ್ಯ ಏಳು ತಾಸು ವಿದ್ಯುತ್ ಪೂರೈಕೆ ಮಾಡಲೇಬೇಕೆಂದು ಪಟ್ಟು ಹಿಡಿದರು. ಒಂದು ಹಂತದಲ್ಲಿ ಕಚೇರಿಗೆ ನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ಬಾಗಿಲಲ್ಲಿಯೇ ತಡೆದರು. ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಸಕಾಲಕ್ಕೆ ಮಳೆಯಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಉಳಿದಿರುವ ಅಷ್ಟಿಷ್ಟು ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ರೈತರ ಪಂಪ್‍ಸೆಟ್‍ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಕೊಡಬೇಕೆಂಬ ನಿಯಮಿವಿದ್ದರೂ ಕೇವಲ ಎರಡು,ಮೂರು ಗಂಟೆಗಳೂ ವಿದ್ಯುತ್ ಇಲ್ಲದಂತಾಗಿದೆ. ಇದರಿಂದ ತೋಟಗಾರಿಕಾ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿದ್ದು, ಕೃಷಿಗೆ ಬಂಡವಾಳ ಹಾಕಿರುವ ರೈತ ಕೈಸುಟ್ಟುಕೊಂಡು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ರೈತರಿಗೆ ಪೂರೈಸಬೇಕಾಗಿದ್ದ ವಿದ್ಯುತ್‍ನ್ನು ಸರ್ಕಾರ ಕಾರ್ಖಾನೆಗಳಿಗೆ ಸರಬರಾಜು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು 24 ಗಂಟೆಯೊಳಗೆ ಬದಲಾಯಿಸಿಕೊಡಬೇಕೆಂಬ ನಿಯಮವನ್ನು ಉಲ್ಲಂಘಿಸುತ್ತಿರುವ ಬೆಸ್ಕಾಂ ಇಂಜಿನಿಯರ್‌ಗಳು ನಾಲ್ಕೈದು ದಿನಗಳಾದರೂ ಕೊಡದೆ ಸತಾಯಿಸುತ್ತಾ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಒಂದೆ ಕಡೆ ಮೂರು ವರ್ಷಕ್ಕಿಂತ ಮೇಲ್ಪಟ್ಟು ಠಿಕಾಣಿ ಹೂಡಿರುವ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಬೇಕು. ಅಕ್ರಮ-ಸಕ್ರಮದಡಿ ಹಣ ಸಂದಾಯ ಮಾಡಿರುವ ರೈತರಿಗೆ ತಕ್ಷಣ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ತೋಟದ ಮನೆಗಳಲ್ಲಿ ಅನೇಕ ರೈತರು ವಾಸಿಸುತ್ತಿದ್ದು, ಓಪನ್ ಡೆಲ್ಟಾ ಆರಂಭಿಸಿದಾಗಿನಿಂದಲೂ ಕತ್ತಲೆಯಲ್ಲಿ ವಾಸ ಮಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆಯಲ್ಲದೆ ರಾತ್ರಿ ವೇಳೆ ವಿಷಜಂತುಗಳಿಂದ ಕಚ್ಚಿಸಿಕೊಂಡು ಸಾವನ್ನಪ್ಪುವ ಸಂದರ್ಭಗಳಿವೆ. ಇಷ್ಟೆಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಸ್ಕಾಂ ಎದುರು ಚಳುವಳಿ ನಡೆಸುವುದಾಗಿ ರೈತರು ಎಚ್ಚರಿಸಿದರು. ರೈತರಿಂದ ಮನವಿ ಸ್ವೀಕರಿಸಿ ಬೆಸ್ಕಾಂ ಎಇಇ ಹಗಲು ಮೂರು ಗಂಟೆ, ರಾತ್ರಿ ಎರಡು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಸರ್ಕಾರ ನಿನ್ನೆಯಷ್ಟೆ ಆದೇಶಿಸಿದೆ. ಹಾಗಾಗಿ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದೆಂದು ಭರವಸೆ ಕೊಟ್ಟಾಗ ದಿನಕ್ಕೆ ಏಳು ಗಂಟೆಗಳ ವಿದ್ಯುತ್ ಪೂರೈಕೆಯಾದಾಗ ಮಾತ್ರ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪ್ರತಿಭಟನಾನಿರತರು ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ, ರೈತ ಮುಖಂಡರಾದ ಜಿ.ಟಿ.ವೆಂಕಟೇಶರೆಡ್ಡಿ, ಲಕ್ಷ್ಮಿಕಾಂತ್, ಎನ್.ಹನುಮಂತರೆಡ್ಡಿ, ಮಾರುತಿ, ಡಿ.ಟಿ.ವಿರುಪಾಕ್ಷಪ್ಪ, ವಿ.ಆರ್.ಸಂತೋಷ್‍ರೆಡ್ಡಿ, ವಿ.ಮಂಜುನಾಥರೆಡ್ಡಿ, ಹನುಮಂತ, ವೀರೇಶ, ಗೋವಿಂದರೆಡ್ಡಿ, ಜಯಣ್ಣ, ರಮೇಶ, ರುದ್ರಮುನಿ, ಬಸವರಾಜ್, ಪರಮೇಶ್ವರಪ್ಪ, ಎಂ.ಕೆ.ಶಿವಣ್ಣ, ಬಿ.ಎಸ್.ರುದ್ರಮುನಿ, ಜಿ.ಆರ್.ನಾಗರಾಜ, ಓಬಣ್ಣ, ಪ್ರದೀಪ, ಹರೀಶ್ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.